ಊಹಿಸಿದಷ್ಟೂ ಆಪಾಯ: ತಾಲಿಬಾನ್ ಕೈವಶವಾದ ಅಮೆರಿಕ ನಿರ್ಮಿತ ಮಾರಣಾಂತಿಕ ಆಯುಧಗಳು

|

Updated on: Aug 22, 2021 | 4:51 PM

ಅತ್ಯಾಧುನಿಕ ಸಶಸ್ತ್ರ ವಾಹನಗಳು, ಫಿರಂಗಿ ಸೇರಿ ಸಾಕಷ್ಟು ಯುದ್ಧೋಪಕರಣಗಳು ಇದೀಗ ತಾಲಿಬಾನಿಗಳ ವಶವಾಗಿವೆ. ಭಾರತ ಸೇರಿದಂತೆ ಹಲವು ದೇಶಗಳ ಭದ್ರತೆಗೆ ಇದು ದೊಡ್ಡ ಆತಂಕ ಎಂದು ವಿಶ್ಲೇಷಿಸಲಾಗುತ್ತಿದೆ.

ಊಹಿಸಿದಷ್ಟೂ ಆಪಾಯ: ತಾಲಿಬಾನ್ ಕೈವಶವಾದ ಅಮೆರಿಕ ನಿರ್ಮಿತ ಮಾರಣಾಂತಿಕ ಆಯುಧಗಳು
ಅಮೆರಿಕ ನಿರ್ಮಿತ ಸಶಸ್ತ್ರ ವಾಹನದಲ್ಲಿ ಕಾಬೂಲ್ ಗಸ್ತು ತಿರುಗುತ್ತಿರುವ ತಾಲಿಬಾನ್ ಉಗ್ರ
Follow us on

ಉತ್ತರ ಅಫ್ಘಾನಿಸ್ತಾನದ ಮಝಾರ್​-ಎ-ಷರೀಫ್ ಪಟ್ಟಣವು ತಾಲಿಬಾನಿಗಳ ವಶವಾಗುವ ಕೆಲವೇ ಗಂಟೆಗಳಿಗೆ ಮೊದಲು ಅಲ್ಲಿದ್ದ ಅಫ್ಘಾನ್ ಸೇನೆಯ ಯೋಧರು ನೆರೆಯ ಉಜ್ಬೆಕಿಸ್ತಾನಕ್ಕೆ ಓಡಿಹೋಗಿದ್ದರು. ಯಾವುದೇ ಸೇನೆ ಸೋತು ಹಿಮ್ಮೆಟ್ಟುವಾಗ ತನ್ನ ವಶದಲ್ಲಿದ್ದ ಯುದ್ಧೋಪಕರಣಗಳು ಶತ್ರುಗಳ ಕೈವಶವಾಗಬಾರದೆಂದು ಅವನ್ನು ನಾಶಪಡಿಸುವುದು ವಾಡಿಕೆ. ಆದರೆ ಅಫ್ಘಾನಿಸ್ತಾನದಲ್ಲಿ ಈ ಬಾರಿ ಹಾಗಾಗಲಿಲ್ಲ ಎನ್ನುವುದು ವಿಪರ್ಯಾಸ. ಅಫ್ಘಾನ್ ಸೇನೆಯು ನಿರ್ವಹಿಸುತ್ತಿದ್ದ ಅಮೆರಿಕ ನಿರ್ಮಿತ ಅತ್ಯಾಧುನಿಕ ಸಶಸ್ತ್ರ ವಾಹನಗಳು, ಫಿರಂಗಿ ಸೇರಿ ಸಾಕಷ್ಟು ಯುದ್ಧೋಪಕರಣಗಳು ಇದೀಗ ತಾಲಿಬಾನಿಗಳ ವಶವಾಗಿವೆ. ಭಾರತ ಸೇರಿದಂತೆ ಹಲವು ದೇಶಗಳ ಭದ್ರತೆಗೆ ಇದು ದೊಡ್ಡ ಆತಂಕ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೀಗ ತಮ್ಮ ಸುಪರ್ದಿಯಲ್ಲಿರುವ ಹೆಲಿಕಾಪ್ಟರ್, ಯುದ್ಧವಿಮಾನ ಸೇರಿ ಹಲವು ಅತ್ಯಾಧುನಿಕ ಯುದ್ಧೋಪಕರಣಗಳ ಬಳಕೆ ಮತ್ತು ನಿರ್ವಹಣೆಯ ಜ್ಞಾನ ತಾಲಿಬಾನಿಗಳಿಗೆ ಇಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ತಾಲಿಬಾನ್​ ಈವರೆಗೆ ನಡೆದುಬಂದ ಹಾದಿ ಗಮನಿಸಿದರೆ, ಬಳಕೆಯ ವಿಧಾನವನ್ನು ಕಲಿಯಲು ಅವರಿಗೆ ಸಾಧ್ಯವೇ ಇಲ್ಲ ಎಂದು ಹೇಳಲು ಆಗುವುದಿಲ್ಲ. ಹೇಳಿಸಿಕೊಳ್ಳಲು ಅಮೆರಿಕ ಅಥವಾ ಯೂರೋಪ್ ದೇಶದ ಒಬ್ಬ ತರಬೇತುದಾರರನ್ನು ಗೊತ್ತು ಮಾಡಿಕೊಂಡರೆ ಅಥವಾ ಅವೇ ವಾಹನಗಳಲ್ಲಿ ಇರುವ ಕೈಪಿಡಿಗಳನ್ನು ಬಿಡಿಸಿಟ್ಟುಕೊಂಡರೆ ಇಂಥ ಉಪಕರಣಗಳನ್ನು ಚಾಲನೆ ಮಾಡುವುದು ಅಸಾಧ್ಯವಲ್ಲ.

ಮಝಾರ್-ಎ-ಷರೀಫ್​ ನಗರದಲ್ಲಿ ಕಂಡುಬಂದ ಇಂಥ ಚಿತ್ರಣವೇ ತಾಲಿಬಾನ್ ವಶವಾದ ಅಫ್ಘಾನಿಸ್ತಾನದ ಇತರ ನಗರಗಳಲ್ಲಿಯೂ ಸಾಮಾನ್ಯ ಎನಿಸಿತ್ತು. ಕಾಬೂಲ್ ಹೊರವಲಯದ ಸೇನಾ ನೆಲೆಗಳಲ್ಲಿದ್ದ ಬ್ಲಾಕ್​ಹಾಕ್ ಹೆಲಿಕಾಪ್ಟರ್​ ಸೇರಿದಂತೆ ಹತ್ತಾರು ಬಗೆಯ ಅತ್ಯಾಧುನಿಕ ಯುದ್ಧೋಪಕರಣಗಳು ತಾಲಿಬಾನ್ ಕೈವಶವಾದವು. ಇದೀಗ ತಾಲಿಬಾನ್ ಕೈಗೆ ಸಿಕ್ಕಿರುವ ಇಂಥ ಆಯುಧಗಳ ಮೌಲ್ಯ ನೂರು ಕೋಟಿ ಡಾಲರ್​ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ತನಗೆ ಇಂಥ ಆಯುಧ ಅಥವಾ ಯುದ್ಧೋಪಕರಣ ಸಿಕ್ಕಿದೆ ಎಂಬುದನ್ನು ಸಾರಿ ಹೇಳಲೂ ತಾಲಿಬಾನ್ ತಡ ಮಾಡಲಿಲ್ಲ. ಇಂಥ ರೈಫಲ್, ಹೆಲಿಕಾಪ್ಟರ್, ಟ್ರಕ್​, ಹಮ್​ವೀ (ಸಶಸ್ತ್ರ ವಾಹನ), ಆರ್ಟಿಲರಿ ಗನ್​, ನೈಟ್ ವಿಷನ್ ಗಾಗಲ್ಸ್​ಗಳೊಂದಿಗೆ ತಾಲಿಬಾನಿಗಳು ಫೋಟೊ ತೆಗೆಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟರು. ಈ ಬಾರಿ ಪ್ರಚಾರಾಂದೋಲನವನ್ನು (ಪ್ರಾಪಗಂಡ) ತನ್ನ ಪರವಾಗಿರುವಂತೆ ನೋಡಿಕೊಂಡ ತಾಲಿಬಾನ್​ಗೆ ಈ ಫೋಟೊ / ವಿಡಿಯೊಗಳೂ ಒಂದು ಅಸ್ತ್ರವಾಗಿ ಒದಗಿಬಂದವು.

ಅಫ್ಘಾನಿಸ್ತಾನದ ನೆಲದಿಂದ ವಾಪಸ್ ಹೋಗುವುದು ಖಚಿತವಾಗುತ್ತಿದ್ದಂತೆಯೇ ಅಮೆರಿಕ ಸೇನೆಯು ವಿಮಾನ, ಭಾರಿ ಆಯುಧಗಳು ಮತ್ತು ಹಲವು ಅತ್ಯಾಧುನಿಕ ಉಪಕರಣಗಳನ್ನು ಮರಳಿ ತನ್ನ ದೇಶಕ್ಕೆ ಸಾಗಿಸುವ ಕಾರ್ಯಕ್ಕೆ ಚಾಲನೆ ನೀಡಿತು. ಕೆಲ ಯುದ್ಧೋಪಕರಣಗಳ ಬಿಡಿಭಾಗಗಳನ್ನು ಕಳಚಲಾಯಿತು. ಆದರೆ 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ತಂದು, ಅಳವಡಿಸಿರುವ ಆಯುಧಗಳನ್ನು ಏಕಾಏಕಿ ವಾಪಸ್​ ತೆಗೆದುಕೊಂಡು ಹೋಗುವುದು ಹೇಗೆ ಸಾಧ್ಯ? ಹೀಗಾಗಿಯೇ ಬಹುಪಾಲು ಯುದ್ಧೋಪಕರಣಗಳನ್ನು ತಾನೇ ತರಬೇತಿ ನೀಡಿದ್ದ ಅಫ್ಘಾನ್ ಸೇನೆಯ ವಶಕ್ಕೆ ಕೊಟ್ಟಿತ್ತು.

ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಸಹ ಈ ವಿಚಾರವನ್ನು ಈ ವಾರದ ಆರಂಭದಲ್ಲಿ ಒಪ್ಪಿಕೊಂಡಿದ್ದರು. ‘ಎಂತೆಂಥ ಆಯುಧಗಳು ಅಥವಾ ಯುದ್ಧೋಪಕರಣಗಳು ತಾಲಿಬಾನ್​ಗೆ ಕೈಗೆ ಸಿಕ್ಕಿವೆ ಎಂಬ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಆಯುಧಗಳು ತಾಲಿಬಾನ್ ಕೈವಶವಾಗಿವೆ’ ಎಂದು ಹೇಳಿದ್ದರು.

ಅಫ್ಘಾನ್ ಭದ್ರತಾ ಪಡೆಗಳ ಬಳಿ 150ಕ್ಕೂ ಹೆಚ್ಚು ವಿಮಾನಗಳಿದ್ದವು. ಈ ಪೈಕಿ ನಾಲ್ಕು ಸಿ-130 ಸರಕು ಸಾಗಣೆ ವಿಮಾನಗಳು, 23 ಬ್ರೆಜಿಲ್ ನಿರ್ಮಿತ ಎ-29 ಸೂಪರ್ ಟಕಾನೊ ದಾಳಿ ವಿಮಾನಗಳು, 45 ಯುಎಚ್​-60 ಬ್ಲಾಕ್​ ಹಾಕ್ ಹೆಲಿಕಾಪ್ಟರ್​ಗಳು ಮತ್ತು ಸುಮಾರು 50 ಸಣ್ಣ ಪ್ರಮಾಣದ ದಾಳಿಗಳಿಗೆ ಬಳಸುವ ಎಂಡಿ-530 ಹೆಲಿಕಾಪ್ಟರ್​ಗಳು ಸೇರಿದ್ದವು. ಇದರ ಜೊತೆಗೆ ಅಫ್ಘಾನಿಸ್ತಾನನದ ಭದ್ರತಾ ಪಡೆಗಳಿಗೆ 30 ಸಿಂಗಲ್ ಎಂಜಿನ್ ಸೆಸ್ನಾ ವಿಮಾನಗಳನ್ನೂ ಅಮೆರಿಕ ನೀಡಿತ್ತು.

ಈ ಪೈಕಿ ಎಷ್ಟು ವಿಮಾನಗಳು ಇಂದಿಗೂ ಅಫ್ಘಾನಿಸ್ತಾನದಲ್ಲಿಯೇ ಉಳಿದುಕೊಂಡಿವೆ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ. ತಾಲಿಬಾನಿಗಳಿಗೆ ಹೆದರಿ ಹಿಮ್ಮೆಟ್ಟಿದ ತಾಲಿಬಾನಿಗಳು ಉಜ್ಬೆಕಿಸ್ತಾನಕ್ಕೆ 22 ಮಿಲಿಟರಿ ವಿಮಾನ ಮತ್ತು 24 ಹೆಲಿಕಾಪ್ಟರ್​ಗಳನ್ನು ಕೊಂಡೊಯ್ದಿದ್ದರು ಎಂದು ಉಜ್ಬೇಕ್ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Afghanistan Economy: ಲಾರಿ ಹತ್ತಿದ ಹಪ್ಪಳದಂತಾದ ಅಫ್ಘಾನಿಸ್ತಾನದ ಆರ್ಥಿಕತೆ; ತಾಲಿಬಾನ್​ ತಾಳಿ ಉಳಿಯೋದು ಕಷ್ಡ

ತಾಲಿಬಾನಿಗಳು ವಶಪಡಿಸಿಕೊಂಡಿರುವ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳು

ಬಳಸಲು ಸಾಧ್ಯವೇ?
ಅಫ್ಘಾನಿಸ್ತಾನ ಸೇನೆಗೆ ಅಮೆರಿಕ ನೀಡಿದ್ದ ಬ್ಲಾಕ್ ಹಾಕ್ ಹೆಲಿಕಾಪ್ಟರ್​ಗಳು ಇದೀಗ ತಾಲಿಬಾನಿಗಳ ವಶಕ್ಕೆ ಬಂದಿವೆ. ಯುದ್ಧ ಅಥವಾ ಯಾವುದೇ ಸಂಘರ್ಷದಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಈ ಹೆಲಿಕಾಪ್ಟರ್​ಗಳ ಬಳಕೆಯನ್ನು ಹಾಗೂಹೀಗೂ ತಾಲಿಬಾನಿಗಳು ಕಲಿತುಕೊಂಡರೂ ಅದರ ಪೂರ್ಣ ಪ್ರಮಾಣದ ಬಳಕೆಯನ್ನು ಕರತಲಾಮಲಕ ಮಾಡಿಕೊಳ್ಳುವುದು ಸುಲಭವಲ್ಲ ಎನ್ನುತ್ತಾರೆ ತಜ್ಞರು.

ಹೆಲಿಕಾಪ್ಟರ್​ಗಳಲ್ಲಿರುವ ಕೈಪಿಡಿಗಳನ್ನು ಬಳಸಿಕೊಂಡು ಎಂಜಿನ್ ಚಾಲು ಮಾಡಿ, ರೆಕ್ಕೆಗಳನ್ನು ತಿರುಗಿಸಬಹುದು. ನೆಲದಿಂದ ಮೇಲಕ್ಕೆ ಹಾರಿಸಬಲೂ ಬಹುದು. ಆದರೆ ಅಲ್ಲಿಂದಾಚೆಗೆ ಯಾವುದೇ ಸಾಹಸಗಳನ್ನು ನಿರ್ವಹಿಸಲು ಪರಿಣತಿ ಬೇಕು. ಇಲ್ಲದಿದ್ದರೆ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿರುವವರೇ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ ಬ್ಲಾಕ್ ಹಾಕ್ ಹೆಲಿಕಾಪ್ಟರ್​ನ ಮಾಜಿ ಪೈಟಲ್ ಬ್ರಾಡ್​ಲೆ ಬೊಮನ್.

ಇದೀಗ ತಾಲಿಬಾನ್ ಕೈವಶವಾಗಿರುವ ಸಣ್ಣ ಆಯುಧಗಳು ಮತ್ತು ನೈಟ್​ ವಿಷನ್ ಉಪಕರಣಗಳನ್ನು ಬಳಸಲು ವಿಶೇಷ ತರಬೇತಿ ಅಥವಾ ಕೌಶಲಗಳ ಅಗತ್ಯವೇನೂ ಇಲ್ಲ. ಇವನ್ನು ತಾಲಿಬಾನ್​ ಭಾಗವಾಗಿರುವ ತಂತ್ರಜ್ಞರೇ ಸುಲಭವಾಗಿ ನಿರ್ವಹಿಸಬಲ್ಲರು. ಆದರೆ ಯುದ್ಧ ವಿಮಾನ ಅಥವಾ ಹೆಲಿಕಾಪ್ಟರ್​ಗಳ ಬಳಕೆಯನ್ನು ಕಲಿಯಲು ತಜ್ಞರ ಮಾರ್ಗದರ್ಶನ ಬೇಕೇಬೇಕು. ಒಂದು ವೇಳೆ ರಿಪೇರಿಗೆ ಬಂದರೆ ಬಿಡಿಭಾಗಗಳ ಪೂರೈಕೆ ಮತ್ತು ನಿರ್ವಹಣೆ ಇಲ್ಲದಿದ್ದರೆ ಇವು ನಿರುಪಯುಕ್ತವಾಗುತ್ತವೆ.

ಯಾವುದು ಮಾರಣಾಂತಿಕ
ಇದೀಗ ತಾಲಿಬಾನಿಗಳ ಕೈವಶವಾಗಿರುವ ಉಪಕರಣ ಪೈಕಿ ಯಾವುದು ಅತ್ಯಂತ ಪ್ರಬಲ ಮತ್ತು ಮಾರಣಾಂತಿಕ ಎಂಬ ಚರ್ಚೆಯೊಂದು ಗರಿಗೆದರಿದೆ. ರಕ್ಷಣಾ ಕ್ಷೇತ್ರದ ತಜ್ಞರ ಪ್ರಕಾರ ಅಮೆರಿಕ ನಿರ್ಮಿತ ಯುದ್ಧೋಪಕರಣಗಳಿಗಿಂತ ರಷ್ಯಾ ನಿರ್ಮಿತ 122 ಎಂಎಂ ಕೊಳವೆಗಳಿರುವ ಡಿ-30 ಫಿರಂಗಿಗಳು ತಾಲಿಬಾನಿಗಳಿಗೆ ಶಕ್ತಿವರ್ಧಕಗಳಾಗಿವೆ.

ಇದನ್ನು ಅತಿ ಮಾರಣಾಂತಿಕ ಎನ್ನಲು ಎರಡು ಕಾರಣಗಳಿವೆ. ಒಂದು ಈ ಫಿರಂಗಿಯಿಂದ ಹಾರಿಸುವ ಶೆಲ್​ಗಳು ನಿಖರವಾಗಿ ಗುರಿಯನ್ನು ಮುಟ್ಟುತ್ತವೆ. ಈ ಫಿರಂಗಿಯ ಬಳಕೆ ಮತ್ತು ರಿಪೇರಿ ಕೌಶಲವನ್ನು ತಾಲಿಬಾನ್ ಕಲಿದುಕೊಂಡಿದೆ. ಹೀಗಾಗಿಯೇ ಇದನ್ನು ತಾಲಿಬಾನಿಗಳ ಕೈಲಿರುವ ಅತ್ಯಂತ ಮಾರಣಾಂತಿಕ ಆಯುಧ ಎಂದು ವಿವರಿಸಲಾಗುತ್ತಿದೆ.

ಬಳಸಲು ಆಗಿದಿದ್ರೆ ಮಾರಿ ಬಿಡ್ತಾರೆ
ಹೆಲಿಕಾಪ್ಟರ್, ಯುದ್ಧವಿಮಾನ ಸೇರಿದಂತೆ ಇದೀಗ ತಾಲಿಬಾನಿಗಳ ವಶದಲ್ಲಿರುವ ಬಹುತೇಕ ಅತ್ಯಾಧುನಿಕ ಯುದ್ಧೋಪಕರಣಗಳ ಬಳಕೆ ಅವರಿಗೆ ತಿಳಿದಿಲ್ಲ. ಬಳಸುವ ವಿಧಾನ ಕಲಿಯಲು ಯತ್ನಿಸುವ ತಾಲಿಬಾನಿಗಳು, ಸಾಧ್ಯವಾಗದಿದ್ದರೆ ಅಂಥವನ್ನು ಮಾರಿ ಹಣ ಗಳಿಸುತ್ತಾರೆ. ಅಮೆರಿಕಕ್ಕೆ ಮುಜುಗರ ಮಾಡಬೇಕು ಎನ್ನುವ ಉದ್ದೇಶದಿಂದ ಇರಾನ್ ಇಂಥ ಆಯುಧಗಳನ್ನು ಖರೀದಿಸಬಹುದು. ಚೀನಾ ಅಥವಾ ರಷ್ಯಾ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.

ಇದೀಗ ತಾಲಿಬಾನ್ ಕೈವಶದಲ್ಲಿರುವ ಸೆನ್ಸಾರ್​ ಬಾಲ್​ ಎಂದು ಕರೆಯುವ ಗುಪ್ತಚರ ಸಾಧನದ ಬಗ್ಗೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ. ವಿಮಾನವೊಂದರ ಮೂತಿಗೆ ಸಿಕ್ಕಿಸಬಹುದಾದ ಈ ಸೆನ್ಸಾರ್ ಬಾಲ್​ಗಳನ್ನು ಬಳಸಿಕೊಂಡು ವೈರಿ ದೇಶದ ಹಲವು ಅಮೂಲ್ಯ ಮಾಹಿತಿ ಕಲೆ ಹಾಕಬಹುದಾಗಿದೆ. ಇರಾನ್​ನಂಥ ದೇಶಗಳಿಗೆ ಸಹಜವಾಗಿಯೇ ಇಂಥ ಉಪಕರಣಗಳ ಬಗ್ಗೆ ಆಸಕ್ತಿಯಿರುತ್ತದೆ ಎನ್ನುತ್ತಾರೆ ಅಮೆರಿಕದ ರಕ್ಷಣಾ ತಜ್ಞರು.

(Many American Manufactured Modern Weapons in the Possession of Taliban What are the Threats)

ಇದನ್ನೂ ಓದಿ: Tv9 Kannada Digital Exclusive: ತಾಲಿಬಾನ್, ಭಯೋತ್ಪಾದನೆ, ಬುರ್ಖಾ, ಗಡ್ಡಧಾರಿ ಮುಲ್ಲಾಗಳ ಹೊರತಾಗಿಯೂ ನೀವರಿಯದ 30 ಆಫ್ಘನ್ ಸಂಗತಿಗಳು

ಇದನ್ನೂ ಓದಿ: Video: ಯುಎಸ್​ ಮಿಲಿಟರಿ ಉಪಕರಣಗಳೊಂದಿಗೆ ಸಜ್ಜಾಗಿರುವ ತಾಲಿಬಾನ್​ ಉಗ್ರರು; ಕಾಬೂಲ್​ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ