Mehul Choksi: 13,500 ಕೋಟಿ ವಂಚನೆಯ ಆರೋಪಿ ಮೆಹುಲ್ ಚೋಸ್ಕಿ ಭಾರತಕ್ಕೆ ಹಸ್ತಾಂತರ: ಆಂಟಿಗುವಾ ಪ್ರಧಾನಿ

|

Updated on: May 27, 2021 | 12:52 PM

ಆಂಟಿಗುವಾ ಪೌರತ್ವ ಪಡೆದಿರುವ ಚೋಸ್ಕಿ ದೇಶ ತೊರೆದಿದ್ದಾರೆ, ಅವರಿಗೆ ಮತ್ತೆ ಆಂಟಿಗುವಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಡೊಮಿನಿಕಾ ಅಧಿಕಾರಿಗಳು ಚೋಸ್ಕಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಪ್ರಧಾನಿ ಗಷ್ಟನ್ ಬ್ರೌನ್ ಹೇಳಿದ್ದಾರೆ.

Mehul Choksi: 13,500 ಕೋಟಿ ವಂಚನೆಯ ಆರೋಪಿ ಮೆಹುಲ್ ಚೋಸ್ಕಿ ಭಾರತಕ್ಕೆ ಹಸ್ತಾಂತರ: ಆಂಟಿಗುವಾ ಪ್ರಧಾನಿ
ಮೆಹುಲ್ ಚೋಕ್ಸಿ
Follow us on

ಆಂಟಿಗುವಾ: ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿಯನ್ನು ಡೊಮಿನಿಕಾ ದ್ವೀಪಗಳಲ್ಲಿ ಬಂಧಿಸಲಾಗಿದೆ. ಆಂಟಿಗುವಾ ಪೌರತ್ವ ಪಡೆದಿರುವ ಚೋಸ್ಕಿ ದೇಶ ತೊರೆದಿದ್ದಾರೆ, ಅವರಿಗೆ ಮತ್ತೆ ಆಂಟಿಗುವಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಡೊಮಿನಿಕಾ ಅಧಿಕಾರಿಗಳು ಚೋಸ್ಕಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಪ್ರಧಾನಿ ಗಷ್ಟನ್ ಬ್ರೌನ್ ಹೇಳಿದ್ದಾರೆ.

ಆಂಟಿಗುವಾ ದ್ವೀಪದಿಂದ ಓಡಿಹೋಗುವ ಮೂಲಕ ಚೋಸ್ಕಿ ಐತಿಹಾಸಿಕ ತಪ್ಪು ಮಾಡಿದ್ದಾರೆ. ಆಂಟಿಗುವಾದಲ್ಲಿ ವಾಸಿಸುತ್ತಿರುವ ಚೋಸ್ಕಿ ಕುಟುಂಬದ ಸದಸ್ಯರು ದೇಶದ ಕಾನೂನುಬದ್ಧ ಪೌರರಾಗಿದ್ದಾರೆ. ಅವರನ್ನು ಅಪರಾಧಿಗಳು ಎಂದು ಹೇಳಲು ಯಾವುದೇ ಆಧಾರವಿಲ್ಲ ಎಂಬ ಗಷ್ಟನ್ ಬ್ರೌನ್ ಹೇಳಿಕೆಯನ್ನು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಅವರು (ಚೋಸ್ಕಿ) ಡೊಮಿನಿಕಾದಲ್ಲಿ ಪತ್ತೆಯಾಗಿದ್ದಾರೆ. ದ್ವೀಪವನ್ನು ಅವರು ದೋಣಿಗಳ ಮೂಲಕ ಅಕ್ರಮವಾಗಿ ಪ್ರವೇಶಿಸಿರಬಹುದು. ಡೊಮಿನಿಕಾ ಸರ್ಕಾರವು ಆಂಟಿಗುವಾ ಮತ್ತು ಭಾರತ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಚೋಸ್ಕಿಯನ್ನು ಆಂಟಿಗುವಾಕ್ಕೆ ಹಿಂದಿರುಗಿಸಬೇಡಿ ಎಂದು ಡೊಮಿನಿಕಾದ ಭದ್ರತಾ ಅಧಿಕಾರಿಗಳನ್ನು ನಾವು ವಿನಂತಿಸಿದ್ದೇವೆ. ಆಂಟಿಗುವಾದಲ್ಲಿ ಚೋಸ್ಕಿಗೆ ಸಂವಿಧಾನಬದ್ಧ ಹಕ್ಕುಗಳಿವೆ. ಅವರನ್ನು ನೇರವಾಗಿ ಭಾರತದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲು ವಿನಂತಿಸಿದ್ದೇವೆ’ ಎಂದು ಆಂಟಿಗುವಾ ಪ್ರಧಾನಿ ತಿಳಿಸಿದ್ದಾರೆ.

ಕಳೆದ ಭಾನುವಾರ ಸಂಜೆ 5.15ಕ್ಕೆ ತಮ್ಮ ಮನೆಯಿಂದ ಕಾರಿನಲ್ಲಿ ಹೊರಗೆ ಹೊರಟಿದ್ದ ಅವರು ನಂತರ ನಾಪತ್ತೆಯಾಗಿದ್ದರು. ರೆಸ್ಟೊರೆಂಟ್ ಒಂದರಲ್ಲಿ ಊಟಕ್ಕೆಂದು ಹೊರಗೆ ಹೋಗಿದ್ದ ಚೋಸ್ಕಿ ವಾಪಸ್ ಬಾರದಿರುವ ಬಗ್ಗೆ ಅವರ ಕುಟುಂಬದ ಸದಸ್ಯರು ಆತಂಕಗೊಂಡಿದ್ದರು. ಆಂಟಿಗುವಾ ಪೊಲೀಸರು ಹುಡುಕಾಟ ತೀವ್ರಗೊಳಿಸಿ, ಚೋಸ್ಕಿ ಸಂಬಂಧಿಕರು ಮತ್ತು ಸಹಚರರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ನಡುವೆ ಚೋಸ್ಕಿ ಕಾರು ಜಾಲಿ ಹಾರ್ಬರ್​ ಸಮೀಪ ಪತ್ತೆಯಾಗಿತ್ತು. ಆದರೆ ಚೋಸ್ಕಿಯ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಆಂಟಿಗುವಾ ಪೊಲೀಸರು, ಚೋಸ್ಕಿ ಸುಳಿವು ಸಿಕ್ಕರೆ ಪೊಈಸ್ ಠಾಣೆಗೆ ಅಥವಾ ಸಿಐಡಿ ಕಚೇರಿಗೆ ಮಾಹಿತಿ ನೀಡಬೇಕೆಂದು ವಿನಂತಿಸಿದ್ದರು. ಡೊಮಿನಿಕಾದಲ್ಲಿ ನಾಟಕೀಯವಾಗಿ ಚೋಸ್ಕಿ ಪತ್ತೆಯಾದ ನಂತರ ಅವರನ್ನು ಆಂಟಿಗುವಾಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ಆರಂಭವಾಗಿದ್ದವು. ಆದರೆ ಆಂಟಿಗುವಾ ಪ್ರಧಾನಿ ಮಧ್ಯಪ್ರವೇಶಿಸಿ, ಚೋಸ್ಕಿಯನ್ನು ನಾವು ಸ್ವೀಕರಿಸುವುದಿಲ್ಲ, ಅವರನ್ನು ಭಾರತಕ್ಕೆ ಹಿಂದಿರುಗಿಸಿ ಎಂದು ಸೂಚಿಸಿದ್ದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ವರದಿಯಾಗಿದ್ದ ₹ 13,500 ಕೋಟಿ ಹಣಕಾಸು ಅವ್ಯವಹಾರದಲ್ಲಿ ಮೆಹುಲ್ ಚೋಸ್ಕಿ ಆರೋಪಿಯಾಗಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬೆಳಕಿಗೆ ಬರುವ ಮೊದಲೇ ಚೋಸ್ಕಿ ಭಾರತದಿಂದ ಪರಾರಿಯಾಗಿ ಆಂಟಿಗುವಾದಲ್ಲಿ ಪೌರತ್ವ ಪಡೆದಿದ್ದರು. ಚೋಸ್ಕಿ ಬಂಧನಕ್ಕೆ ಸತತ ಯತ್ನ ನಡೆಸಿದ್ದ ಭಾರತ ಸರ್ಕಾರ, ಇಂಟರ್​ಪೋಲ್ ನೆರವು ಕೋರಿತ್ತು.

(Mehul Choksi Accused in PNB Scam to be handed over to India says Antiguan PM Gaston Browne)

ಇದನ್ನೂ ಓದಿ: Mehul Choksi: ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಡೊಮಿನಿಕಾದಲ್ಲಿ ಅರೆಸ್ಟ್​; ಕ್ಯೂಬಾಕ್ಕೆ ಹೊರಡಲು ನಡೆದಿತ್ತು ಸಿದ್ಧತೆ

ಇದನ್ನೂ ಓದಿ: Mehul Choksi: ದೇಶ ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಈಗ ಎಲ್ಲಿದ್ದಾನೆ? ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್​ ಹೇಳುವುದೇನು?