ಸೂರ್ಯನ ಅತಿಸನಿಹದ ಚಿತ್ರ ತೆಗೆದ ಬಾಹ್ಯಾಕಾಶ ನೌಕೆ: ಸೂರ್ಯನ ಅಧ್ಯಯನಕ್ಕೆ ಸಿಕ್ಕಿದೆ ಹೊಸ ವೇಗ

ಸೂರ್ಯನ ಮೇಲಿನ ಈ ಲಾವಾ ಸ್ಫೋಟ ಮತ್ತು ಪ್ರವಾಹವು ಬಾಹ್ಯಾಕಾಶದ ವಾತಾವರಣಕ್ಕೆ ಅತ್ಯಂತ ಅಪಾಯಕಾರಿ ಆಗಬಲ್ಲದು. ಸೂರ್ಯನ ಮೇಲೆ ಸಂಭವಿಸುವ ಇಂಥ ಸ್ಫೋಟಗಳು ನೋಡಲು ಸುಂದರವಾಗಿರುತ್ತವೆ. ಆದರೆ ಒಮ್ಮೊಮ್ಮೆ ಇವು ಭೂಮಿಯ ವಾತಾವರಣಕ್ಕೂ ಅಪ್ಪಳಿಸಬಲ್ಲದು.

ಸೂರ್ಯನ ಅತಿಸನಿಹದ ಚಿತ್ರ ತೆಗೆದ ಬಾಹ್ಯಾಕಾಶ ನೌಕೆ: ಸೂರ್ಯನ ಅಧ್ಯಯನಕ್ಕೆ ಸಿಕ್ಕಿದೆ ಹೊಸ ವೇಗ
ಸೂರ್ಯನ ಮೇಲ್ಮೈ ಚಟುವಟಿಕೆ ಸೆರೆಹಿಡಿಯುತ್ತಿರುವ ಬಾಹ್ಯಾಕಾಶ ನೌಕೆ (Courtesy: ESA)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 26, 2021 | 4:41 PM

ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯನ ವರ್ತನೆ ಬದಲಾಗುತ್ತದೆ. ಇದೀಗ ಸೂರ್ಯ 11 ವರ್ಷಗಳ ಹೊಸ ಸೌರ ಆವೃತ್ತಿಗೆ ಪ್ರವೇಶಿಸುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಸೂರ್ಯನಲ್ಲಿ ಜ್ವಾಲಾಮುಖಿಗಳ ಸ್ಫೋಟ ಹೆಚ್ಚಾಗಲಿದ್ದು, 2025ರ ಹೊತ್ತಿಗೆ ಈ ಚಟುವಟಿಕೆ ತೀವ್ರಗೊಳ್ಳಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಭೂಮಿಯಲ್ಲಿ ರೇಡಿಯೊ ಅಲೆಗಳ ಮೂಲಕ ನಡೆಯುವ ಸಂವಹನದ ಮೇಲೆ ಪರಿಣಾಮ ಬೀರುವ, ಇಲ್ಲಿನ ಜೀವಿಗಳಲ್ಲಿ ಹಲವು ಕಾಯಿಲೆಗಳನ್ನು ತಂದೊಡ್ಡಬಲ್ಲ ಸೂರ್ಯನಿಂದ ಹೊಮ್ಮುವ ಪ್ರಬಲ ವಿದ್ಯುತ್ಕಾಂತೀಯ ಅಲೆಗಳು ಮತ್ತು ಸೂರ್ಯನ ಮೇಲ್ಮೈನಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲು ಇದು ಸಕಾಲ ಎನಿಸಿದೆ. ಇದೇ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯೊಂದು ಸೂರ್ಯನ ಅತ್ಯಂತ ಹತ್ತಿರದ ಚಿತ್ರ ತೆಗೆದು ಭೂಮಿಗೆ ಕಳಿಸಿದ್ದು, ಬಾಹ್ಯಾಕಾಶ ಸಂಶೋಧನೆಯಲ್ಲಿ ಇದು ಹೊಸ ಮೈಲಿಗಲ್ಲು ಎನಿಸಿದೆ.

ಇದೇ ಕಾರಣಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಯೂರೋಪ್​ನ ಬಾಹ್ಯಾಕಾಶ ಸಂಸ್ಥೆ ಇಎಸ್​ಎ ಸೂರ್ಯನ ಬಗ್ಗೆ ನಡೆಸುತ್ತಿರುವ ಸಂಶೋಧನೆಗಳ ವೇಗ ಹೆಚ್ಚಿಸಿವೆ. ‘ನಮ್ಮ ಭೂಮಿಯ ಜೀವಾಧಾರ ಎನಿಸಿರುವ ನಕ್ಷತ್ರ ಸೂರ್ಯ. ಈ ನಕ್ಷತ್ರದಿಂದ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ಹೇಗೆ ಉತ್ಪತ್ತಿಯಾಗುತ್ತವೆ ಮತ್ತು ಎಷ್ಟು ತೀವ್ರವಾಗಿ ಇಡೀ ಸೌರಮಂಡಲವನ್ನು ಘಾತಿಸುತ್ತವೆ ಎಂಬುದನ್ನು ಅಭ್ಯಾಸ ಮಾಡಲೆಂದು ಸೋಲಾರ್ ಆರ್ಬಿಟರ್ ಮೂಲಕ ಪ್ರಯತ್ನಿಸುತ್ತಿದ್ದೇವೆ. ನಮ್ಮ ನೆಚ್ಚಿನ ನಕ್ಷತ್ರದ ಬಗ್ಗೆ ಹಲವು ಮೂಲ ಪ್ರಶ್ನೆಗಳಿಗೇ ಈವರೆಗೂ ಉತ್ತರಸಿಕ್ಕಿಲ್ಲ’ ಎನ್ನುತ್ತಾರೆ ಯೂರೋಪ್ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿ ಯೆನ್ನಿಸ್ ಝೌಗಲೆನ್ನಿಸ್.

ಈ ಸಂಸ್ಥೆಗಳು ನಿರ್ವಹಿಸುತ್ತಿರುವ ಬಾಹ್ಯಾಕಾಶ ನೌಕೆ ಸೋಲಾರ್ ಆರ್ಬಿಟರ್ ಮುಂದಿನ 6 ವರ್ಷಗಳಲ್ಲಿ ಸೂರ್ಯನ ಧ್ರುವ ಪ್ರದೇಶಗಳತ್ತ ಹಾರಾಟ ನಡೆಸಲಿದೆ. ಈ ಚಟುವಟಿಕೆಯಿಂದ ಸೂರ್ಯನ ಬಗ್ಗೆ ಈ ಹಿಂದೆಂದೂ ದಾಖಲಾಗಿರದ ಅಪರೂಪದ ಮಾಹಿತಿ ಸಂಗ್ರಹವಾಗುವ ಸಾಧ್ಯತೆಯಿದೆ. ಸೂರ್ಯನ ಧ್ರುವ ಪ್ರದೇಶದ ಚಿತ್ರಗಳನ್ನೂ ಈ ನೌಕೆ ಮೊದಲ ಬಾರಿಗೆ ಭೂಮಿಗೆ ಕಳಿಸುವ ಸಾಧ್ಯತೆಯಿದೆ. ಸೂರ್ಯ ತಿರುಗುವ ವೇಗಕ್ಕೆ ಸರಿಸಮನಾಗಿ ಈ ಅಂತರಿಕ್ಷ ನೌಕೆಯೂ ತಿರುಗುವ ಕಾರಣ ನಿರ್ದಿಷ್ಟ ಪ್ರದೇಶದ ಚಿತ್ರಗಳನ್ನು ನಿಖರವಾಗಿ ಫೋಕಸ್ ಮಾಡಿ ಗಮನಿಸಲು, ಸೂರ್ಯನ ಮೇಲ್ಮೈನಲ್ಲಿ ನಡೆಯುವ ತೀವ್ರತರದ ಚಟುವಟಿಕೆಗಳು ಮತ್ತು ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಸೋಲಾರ್ ಆರ್ಬಿಟರ್ ಮತ್ತು ಇತರ ಬಾಹ್ಯಾಕಾಶ ನೌಕೆಗಳಲ್ಲಿರುವ ದೂರದರ್ಶಕಗಳ ಮೂಲಕ ಸೂರ್ಯನನ್ನು ನಿರಂತರ ಗಮನಿಸುವ ನಾಸಾ ಮತ್ತು ಐರೋಪ್ಯ ಬಾಹ್ಯಾಕಾಶ ಒಕ್ಕೂಟದ ವಿಜ್ಞಾನಿಗಳು ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳನ್ನು ಭೂಮಿಯಿಂದಲೇ ನಿರಂತರವಾಗಿ ಗಮನಿಸುತ್ತಾರೆ. ಈಗಾಗಲೇ ಆರ್ಬಿಟರ್​ ಕಾರ್ಯಚಟುವಟಿಕೆ ಆರಂಭಿಸಿದ್ದರೂ, ಅದರಲ್ಲಿ ಅಳವಡಿಸಿರುವ ಎಲ್ಲ ಉಪಕರಣಗಳು ಇನ್ನೂ ಕೆಲಸ ಮಾಡುತ್ತಿಲ್ಲ. ಇದೇ ನವೆಂಬರ್ ತಿಂಗಳಿಂದ ಸೋಲಾರ್ ಆರ್ಬಿಟರ್​ನ ಎಲ್ಲ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಎಲ್ಲ ಉಪಕರಣಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಆರಂಭಿಸಿದ ನಂತರ ಮಂಗಳನನ್ನು ಗಮನಿಸುತ್ತಿರುವ ಬಾಹ್ಯಾಕಾಶ ನೌಕೆಗಳಿಗಿಂತಲೂ ಹೆಚ್ಚು ಸನಿಹದಿಂದ ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯನನ್ನು ಗಮನಿಸಲು ಸಾಧ್ಯವಾಗುತ್ತದೆ. ಒಂದು ಹಂತದಲ್ಲಿ ಈ ಬಾಹ್ಯಾಕಾಶ ನೌಕೆಯು ಸೂರ್ಯನಿಂದ ಕೇವಲ 4.2 ಕೋಟಿ ಕಿಲೋಮೀಟರ್​ಗಳಷ್ಟು ಅಂತರಕ್ಕೆ ತಲುಪಲಿದೆ.

‘ಕಳೆದ 25 ವರ್ಷಗಳಲ್ಲಿ ಸೂರ್ಯ ಮತ್ತು ಭೂಮಿಯ ಮೇಲ್ಮೈಗಳಲ್ಲಿ ಆಗಿರುವ ಹಲವು ಬದಲಾವಣೆಗಳನ್ನು ನಾವು ಗುರುತಿಸಿದ್ದೇವೆ. ಮುಂದಿನ ದಿನಗಳಲ್ಲಿ ಸೂರ್ಯನ ಇನ್ನಷ್ಟು ಸನಿಹದ, ಇನ್ನಷ್ಟು ಉತ್ತಮ ಚಿತ್ರಗಳನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಲಿದ್ದೇವೆ. ಈ ಮೂಲಕ ಸೂರ್ಯನ ವರ್ತನೆ, ಅಲ್ಲಿಂದ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು ಮತ್ತು ಜ್ವಾಲಾಮುಖಿಯ ಹರಿವಿನ ಅಧ್ಯಯನ ಮಾಡುತ್ತೇವೆ’ ಎಂದು ನಾಸಾದ ಸಂಶೋಧಕ ರಾಬಿನ್ ಕೊಲನಿನೊ ಹೇಳುತ್ತಾರೆ.

ಇಂಥ ಸಂಶೋಧನೆ ಏಕೆ ಅಗತ್ಯ? ಉರಿವ ಸೂರ್ಯ ಅಂದ್ರೆ ಭೂಮಿಯ ಪಾಲಿಗೆ ಬೆಳಕಿನ ಆಕರ, ಜೀವಚೈತನ್ಯ, ಭೂಮಿಯಲ್ಲಿ ಋತುಮಾನ ಬದಲಾವಣೆ ಸೇರಿದಂತೆ ಜೀವಿಗಳ ಉಳಿವಿಗೆ ಪೂರಕ ವಾತಾವರಣ ನಿರ್ಮಿಸುವ ದೊಡ್ಡ ಶಕ್ತಿ. ಸತತವಾಗಿ ಉರಿಯುವ, ಸಿಡಿಯುವ ಈ ಬೆಂಕಿಯುಂಡೆಯಿಂದ ಭೂಮಿಗೆ ಎಷ್ಟೆಲ್ಲಾ ಅನುಕೂಲಗಳಿವೆಯೋ, ಅಷ್ಟೇ ಅಪಾಯವೂ ಇದೆ ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು. ಒಂದು ಮಿತಿ ದಾಟಿ ಸಿಡಿದರೆ ಸೂರ್ಯನಿಂದ ಕೋಟ್ಯಂತರ ಟನ್​ಗಳಷ್ಟು ಪ್ಲಾಸ್ಮಾ ಮತ್ತು ವಿದ್ಯುತ್ ಶಕ್ತಿ ತುಂಬಿರುವ ಕಣಗಳು ಭೂಮಿಯತ್ತ ನುಗ್ಗಿ ಬರಬಹುದು.

ಸೂರ್ಯನ ಅಂಗಳದಲ್ಲಿ ನಡೆಯುವ ಇಂಥ ಸ್ಫೋಟಗಳು ಮತ್ತು ಹೊರಸೂಸುವಿಕೆಯನ್ನು ಗಮನಿಸಲೆಂದೇ ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಫೆಬ್ರುವರಿ 2020ರಿಂದ ಸೂರ್ಯನನ್ನು ವಿವರವಾಗಿ ಅಧ್ಯಯನ ನಡೆಸುವ ‘ಸೋಲಾರ್ ಆರ್ಬಿಟರ್ ಪ್ರಾಬ್’ ಅಂತರಿಕ್ಷ ವಾಹನದ ಮೂಲಕ ಕಾರ್ಯಾಚರಣೆ ಆರಂಭಿಸಿದವು. ಕಳೆದ ಫೆಬ್ರುವರಿ 10ರಂದು ಈ ಸಂಶೋಧಕರ ತಂಡವು ಅಂತರಿಕ್ಷ ವಾಹನವನ್ನು ಸೂರ್ಯನ ಅತಿಸಮೀಪ, ಅಂದರೆ ಸೂರ್ಯನಿಂದ 7.7 ಕೋಟಿ ಕಿಲೋಮೀಟರ್ ದೂರದಲ್ಲಿ ಹಾರಿಸಿತ್ತು. ಇದು ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರದ ಅರ್ಧದಷ್ಟು ದೂರ. ಸೂರ್ಯನ ಅತಿಸಮೀಪ ಹಾರಾಟ ನಡೆಸಿದ ನಂತರ ಅಂತರಿಕ್ಷದ ತಣ್ಣನೆಯ ಭಾಗಕ್ಕೆ ಇದು ಹಿಂದಿರುಗಿತು. ಈ ಹಾರಾಟದ ವೇಳೆ ಸೂರ್ಯನ ಎರಡು ಲಾವಾ ಸ್ಫೋಟಗಳನ್ನು (ಕೊರೊನಾ ಮಾಸ್ ಎಜೆಕ್ಷನ್ಸ್​) ಈ ಅಂತರಿಕ್ಷ ವಾಹನ ದಾಖಲಿಸಿತು.

ಅಂತರಿಕ್ಷ ವಾಹನದಲ್ಲಿದ್ದ ಮೂರು ದೃಶ್ಯ ದಾಖಲಾತಿ ಉಪಕರಣಗಳು, ಅಂದರೆ ವಿಶೇಷ ರೀತಿಯಲ್ಲಿ ರೂಪಿಸಿರುವ ಕ್ಯಾಮೆರಾಗಳು ಈ ಲಾವಾ ಸ್ಫೋಟಗಳನ್ನು ದಾಖಲಿಸಿದವು. ಮೊದಲ ಕ್ಯಾಮೆರಾವು ಸೂರ್ಯನ ಮೇಲಿನ ಸ್ಫೋಟಗಳನ್ನು ನೇರವಾಗಿ ದಾಖಲಿಸಿದರೆ, ಎರಡನೇ ಕ್ಯಾಮೆರಾ ಸೂರ್ಯನ ವಾತಾವರಣ ಮೀರಿ ಹರಿಯುವ ಶಕ್ತಿಯ ಹರಿವನ್ನು ದಾಖಲಿಸಿತು. ವಿದ್ಯುಚ್ಛಕ್ತಿ ಸಾಂದ್ರವಾಗಿರುವ ಕಣಗಳು, ವಿದ್ಯುತ್ಕಾಂತೀಯ ಅಲೆಗಳು, ದೂಳು ಮತ್ತು ಬೆಳಕಿನ ಕಿರಣಳನ್ನು ಮೂರನೇ ಕ್ಯಾಮೆರಾ ದಾಖಲಿಸಿಕೊಂಡಿದೆ.

Sun to Enter 11 years cycle Spacecraft Captured a Massive Eruption on The Sun Surface For The First Time

ಸೂರ್ಯನಿಂದ ಹೊಮ್ಮುವ ವಿದ್ಯುತ್ಕಾಂತೀಯ ಅಲೆಗಳು

ಭೂಮಿಗೂ ಅಪಾಯ ಸೂರ್ಯನ ಮೇಲಿನ ಈ ಲಾವಾ ಸ್ಫೋಟ ಮತ್ತು ಪ್ರವಾಹವು ಬಾಹ್ಯಾಕಾಶದ ವಾತಾವರಣಕ್ಕೆ ಅತ್ಯಂತ ಅಪಾಯಕಾರಿ ಆಗಬಲ್ಲದು. ಸೂರ್ಯನ ಮೇಲೆ ಸಂಭವಿಸುವ ಇಂಥ ಸ್ಫೋಟಗಳು ನೋಡಲು ಸುಂದರವಾಗಿರುತ್ತವೆ. ಆದರೆ ಒಮ್ಮೊಮ್ಮೆ ಇವು ಭೂಮಿಯ ವಾತಾವರಣಕ್ಕೂ ಅಪ್ಪಳಿಸಬಲ್ಲದು. ಭೂಮಿಯಲ್ಲಿ ಎತ್ತರದ ಸ್ಥಳಗಳಲ್ಲಿ ಕಾಣಿಸುವ ವರ್ಣರಂಜಿತ ಆರೊರಾ ಬೆಳಕಿನಾಟಗಳ ಸೃಷ್ಟಿಯ ಹಿಂದೆಯೂ ಸೂರ್ಯನಿಂದ ಹೊಮ್ಮುವ ಇಂಥ ಲಾವಾ ಪ್ರವಾಹಗಳ ಚಿತಾವಣೆ ಇರುತ್ತದೆ. ಆದರೆ ಇವುಗಳಿಂದ ಆಗುವ ಅಪಾಯಗಳನ್ನು ಊಹಿಸಿದರೆ ಮೈ ಜುಂ ಎನಿಸುತ್ತದೆ.

1989ರಲ್ಲಿ ಕೆನಡಾದ ಕ್ಯುಬೆಕ್ ನಗರದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಯ್ತು. ಇದಕ್ಕೇನು ಕಾರಣ ಎಂದು ವಿಶ್ಲೇಷಿಸಿದಾಗ ಸೂರ್ಯನಿಂದ ಹೊರಹೊಮ್ಮಿದ್ದ ವಿದ್ಯುತ್ಕಾಂತೀಯ ಅಲೆಗಳು ಕೆನಡಾದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಹದಗೆಡಿಸಿದ್ದು ತಿಳಿದುಬಂತು. 2017ರಲ್ಲಿ ಶಾಂತ ಸಾಗರದಲ್ಲಿ ಭುಗಿಲೆದ್ದಿದ್ದ ಇರ್ಮಾ ಚಂಡಮಾರುತ ಭೂಮಿಗೆ ಅಪ್ಪಳಿಸಿದ 11 ಗಂಟೆಗಳ ನಂತರ ಬಹುತೇಕ ಕೆರಬಿಯನ್ ಸಾಗರ ಮತ್ತು ಮೆಕ್ಸಿಕೊ ಕೊಲ್ಲಿಯ ಬಹುತೇಕ ಕಡೆ ತುರ್ತು ರೇಡಿಯೊ ಸಂವಹನ ವ್ಯವಸ್ಥೆಯಲ್ಲಿ ಅಡಚಣೆಯಾಯಿತು. ಇದಕ್ಕೂ ಸೂರ್ಯನಿಂದ ಹೊಮ್ಮಿದ್ದ ಜ್ವಾಲಾ ಪ್ರವಾಹದ ಪರಿಣಾಮವೇ ಕಾರಣ ಎಂದು ನಂತರ ತಿಳಿದುಬಂತು. 1912ರಲ್ಲಿ ಟೈಟಾನಿಕ್ ಹಡಗು ಹಿಮಗಡ್ಡೆಗೆ ಅಪ್ಪಳಿಸಿ ಮುಳುಗಿದ್ದು ನಿಮಗೆ ಗೊತ್ತಿದೆ ಅಲ್ಲವೇ? ಟೈಟಾನಿಕ್ ಹಡಗಿನಿಂದ ಅಂದು ಹೊಮ್ಮಿದ ಅಪಾಯದ ಸಂದೇಶಗಳು ಹೊರಜಗತ್ತಿಗೆ ಸಕಾಲದಲ್ಲಿ ತಲುಪದಿರಲು ಸೂರ್ಯನಿಂದ ಹೊಮ್ಮಿದ ಇಂಥ ವಿದ್ಯುತ್ ಸಾಂದ್ರಿತ ಕಣಗಳೇ ಕಾರಣವಿರುಬಹುದು ಎಂಬ ವಿಶ್ಲೇಷಣೆ ಇಂದಿಗೂ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ, ಸೂರ್ಯನ ಮೇಲ್ಮೈಯಿಂದ ಹೊಮ್ಮುವ ಅನಿಯಮಿತ ಬೆಳಕು, ಶಾಖದ ಪ್ರವಾಹವು ಅಂತರಿಕ್ಷದಲ್ಲಿ ಸಂಚರಿಸುವ ಬಾಹ್ಯಾಕಾಶ ನೌಕೆಗಳನ್ನು ಸುಟ್ಟುಹಾಕಬಹುದು. ಭೂಮಿಯಲ್ಲಿರುವ ಅವುಗಳ ನಿಯಂತ್ರಣಾ ಕೇಂದ್ರಗಳೊಂದಿಗೆ ಹೊಂದಿರುವ ಸಂವಹನ ವ್ಯವಸ್ಥೆಯನ್ನೂ ಹಾಳುಗೆಡವಬಹುದು.

ಈ ಹಿನ್ನೆಲೆಯಲ್ಲಿಯೇ ಸೋಲಾರ್ ಆರ್ಬಿಟರ್​ ಇಂಥ ಜ್ವಾಲಾ ಸ್ಫೋಟಗಳನ್ನು ಅಧ್ಯಯನ ಮಾಡುತ್ತಿದೆ. ನಿರೀಕ್ಷಿಸಲು ಸಾಧ್ಯವಿಲ್ಲದ ವಿದ್ಯುತ್ಕಾಂತೀಯ ಅಲೆಗಳ ಪ್ರವಾಹವನ್ನು ಅಭ್ಯಾಸ ಮಾಡುವುದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ಯಾನಿಗಳು ಮತ್ತು ಭೂಮಿಯ ವಿದ್ಯುತ್ ವಿತರಣಾ ಗ್ರಿಡ್​ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಅವರ ವಿಶ್ವಾಸ.

ಸೂರ್ಯನ ಇನ್ನೊಂದು ಮುಖದತ್ತ ನೋಟ ಭೂಮಿಗೆ ಕಾಣುವುದು ಸೂರ್ಯನ ಒಂದು ಮುಖ ಮಾತ್ರ. ಸೂರ್ಯನ ಮತ್ತೊಂದು ಮುಖ ಅವಲೋಕಿಸಲು ಯೂರೋಪ್ ಬಾಹ್ಯಾಕಾಶ ಒಕ್ಕೂಟವು ಪ್ರೊಬಾ-2 ಉಪಗ್ರಹ ಮ್ತು ಸೋಲಾರ್ ಮತ್ತು ಹೆಲಿಯೊಸ್ಫೆರಿಕ್ ಅಬ್ಸರ್​ವೇಟರಿ ಸಹ ಈ ನಿಟ್ಟಿನಲ್ಲಿ ಪ್ರಯತ್ನಪಡುತ್ತಿವೆ. ಸೂರ್ಯನ ಅಧ್ಯಯನಕ್ಕಾಗಿ ನಾಸಾ ಹಾರಿಬಿಟ್ಟಿರುವ ಸೋಲಾರ್ ಟೆರೆಸ್ಟ್ರಿಯಲ್ ರಿಲೇಶನ್ಸ್ ಅಬ್ಸರ್​ವೇಟರಿ ಸಹ ಭೂಮಿಯ ಕಕ್ಷೆಯಲ್ಲಿಯೇ ಸೂರ್ಯನನ್ನು ಸುತ್ತುತ್ತಾ ಸೂರ್ಯನಿಂದ ಹೊಮ್ಮುವ ಜ್ವಾಲೆಗಳ ಬಗ್ಗೆ ಅಭ್ಯಾಸ ಮಾಡುತ್ತಿದೆ.

(Sun to Enter 11 years cycle Spacecraft Captured a Massive Eruption on The Sun Surface For The First Time)

ಇದನ್ನೂ ಓದಿ: Perseverance Rover: ಮಂಗಳದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ! ಮಂಗಳ ಗ್ರಹಕ್ಕೆ ಕಾಲಿರಿಸಿದ NASA ಬಾಹ್ಯಾಕಾಶ ನೌಕೆ

ಇದನ್ನೂ ಓದಿ: Explainer | ಸೂರ್ಯನ ಮೇಲೆ ಕಣ್ಣಿಟ್ಟಿರುವ SOHO ಬಾಹ್ಯಾಕಾಶ ನೌಕೆಯ ವೈಶಿಷ್ಟ್ಯಗಳು ಹಲವು

Published On - 4:25 pm, Wed, 26 May 21

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ