China Flood: ಚೀನಾದಲ್ಲಿ ಪ್ರವಾಹಕ್ಕೆ ಸಿಲುಕಿ 10 ಜನ ಸಾವು, 33 ಮಂದಿ ನಾಪತ್ತೆ
ಚೀನಾದಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ 10 ಜನರು ಸಾವನ್ನಪ್ಪಿದ್ದಾರೆ, 33 ಜನರು ಕಾಣೆಯಾಗಿದ್ದಾರೆ. ಚೀನಾ ಅಧ್ಯಕ್ಷ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಗೆ ಆದೇಶಿಸಿದ್ದಾರೆ. ಚೀನಾದ ಗನ್ಸು ಪ್ರಾಂತ್ಯದಲ್ಲಿ ನಿರಂತರ ಮಳೆಯಿಂದಾಗಿ ಭಾರೀ ಪ್ರವಾಹ ಉಂಟಾಗಿದ್ದು, 10 ಜನರು ಸಾವನ್ನಪ್ಪಿದ್ದಾರೆ. ಚೀನಾ ಕಳೆದ ದಶಕಗಳಲ್ಲಿಯೇ ಅತ್ಯಂತ ಕೆಟ್ಟ ಆಗಸ್ಟ್ ತಿಂಗಳ ಮಳೆಯನ್ನು ಎದುರಿಸುತ್ತಿದೆ. ಇದರ ನಡುವೆ ಭಾರೀ ಪ್ರವಾಹ ಚೀನಾವನ್ನು ಅಪ್ಪಳಿಸಿದೆ.

ಹ್ಯಾಂಗ್ಝೌ (ಚೀನಾ), ಆಗಸ್ಟ್ 8: ಚೀನಾದ ವಾಯುವ್ಯ ಭಾಗದ ಯುಝಾಂಗ್ ಕೌಂಟಿಯಲ್ಲಿ ದಿಢೀರ್ ಪ್ರವಾಹ (China Floods) ಅಪ್ಪಳಿಸಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಕಾಣೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ. ಚೀನಾದಲ್ಲಿ ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಲನ್ಝೌ ನಗರದ ಸಮೀಪವಿರುವ ಪರ್ವತ ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ ಎನ್ನಲಾಗಿದೆ. ಕ್ಸಿಂಗ್ಲಾಂಗ್ ಪರ್ವತ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಮತ್ತು ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡವು. ಇದರಿಂದಾಗಿ 4 ಹಳ್ಳಿಗಳಲ್ಲಿ 4,000ಕ್ಕೂ ಹೆಚ್ಚು ಜನರು ಸಿಲುಕಿಕೊಂಡರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಪ್ರದೇಶದಲ್ಲಿ ಸಂಪೂರ್ಣ ರಕ್ಷಣಾ ಮತ್ತು ಪ್ರವಾಹ ತಡೆಗಟ್ಟುವ ಪ್ರಯತ್ನಗಳನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ. ಚೀನಾದ ಇತರ ಭಾಗಗಳು ಈ ದಶಕದಲ್ಲಿಯೇ ಅತಿ ಹೆಚ್ಚಿನ ಮಳೆಯನ್ನು ಎದುರಿಸುತ್ತಿರುವಾಗ ಗನ್ಸು ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದೆ. 19ನೇ ಶತಮಾನದ ನಂತರದ ಆಗಸ್ಟ್‌ನಲ್ಲಿ ಬಿದ್ದ ಅತ್ಯಂತ ಕೆಟ್ಟ ಮಳೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Uttarkashi cloudburst: ಉತ್ತರಕಾಶಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹದಿಂದ 4 ಜನ ಸಾವು, 100ಕ್ಕೂ ಹೆಚ್ಚು ಮಂದಿ ನಾಪತ್ತೆ
ಭಾರೀ ಪ್ರವಾಹದಿಂದಾಗಿ ರಸ್ತೆಗಳು ಹಾನಿಗೊಳಗಾಗಿವೆ, ಮರಗಳು ಉರುಳಿವೆ ಮತ್ತು ಕೆಲವು ಪ್ರದೇಶಗಳಲ್ಲಿ ಭೂಮಿಯೊಳಗಿನ ಕೇಬಲ್‌ಗಳು ಸಹ ತೆರೆದಿವೆ ಎಂದು ವರದಿಗಳು ತಿಳಿಸಿವೆ. ಭಾರೀ ಮಳೆಯಿಂದಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಗುವಾಂಗ್‌ಝೌನ ಬೈಯುನ್ ವಿಮಾನ ನಿಲ್ದಾಣವು ಬುಧವಾರ 360ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. 300ಕ್ಕೂ ಹೆಚ್ಚು ವಿಮಾನಗಳ ಸೇವೆ ವಿಳಂಬವಾಗಿದೆ. ನಿಂತಿರುವ ಪ್ರವಾಹದ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಿಂದ ಹರಡುವ ಚಿಕುನ್‌ಗುನ್ಯಾ ಪ್ರಕರಣಗಳ ಹೆಚ್ಚಳದ ಬಗ್ಗೆ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ವರ್ಷ ಈ ಪ್ರಾಂತ್ಯದಲ್ಲಿ ಈಗಾಗಲೇ 7,000ಕ್ಕೂ ಹೆಚ್ಚು ಚಿಕುನ್‌ಗುನ್ಯಾ ಸೋಂಕು ಪತ್ತೆಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




