ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಅಬ್ಬರ: ಹಲವೆಡೆ ಪ್ರವಾಹ, ಅಪಾರ ಪ್ರಮಾಣದ ಬೆಳೆ ನಾಶ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವ್ಯಾಪಕ ಹಾನಿಯಾಗಿದೆ. ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಬೆಳಗಾವಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹಲವು ಮನೆಗಳು ಹಾನಿಗೊಳಗಾಗಿವೆ. ಕೃಷಿ ಭೂಮಿಗಳು ಜಲಾವೃತಗೊಂಡು ಬೆಳೆಗಳು ನಾಶವಾಗಿವೆ.

ಬೆಂಗಳೂರು, ಆಗಸ್ಟ್ 7: ಮಂಗಳವಾರದಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆ ಮತ್ತು ಬುಧವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ (North Karnataka) ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಸುರಿದ ಮಳೆಗೆ (Monsoon Rain) ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಬೆಳಗಾವಿ ಜಿಲ್ಲೆಯ ಚಂದನಹೊಸೂರು ಬಳಿ ಮಂಗಳವಾರ ರಾತ್ರಿ ಹೊಳೆ ದಾಟುತ್ತಿದ್ದಾಗ 48 ವರ್ಷದ ವ್ಯಕ್ತಿಯೊಬ್ಬರು ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಲ್ಲಕವಟಗಿ-ವಿಜಯಪುರ ರಸ್ತೆಯ ಸಂಗಮನಾಥ ದೇವಸ್ಥಾನದ ಬಳಿ ಉಕ್ಕಿ ಹರಿಯುವ ಹೊಳೆಯ ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೈಕ್ ಸವಾರನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 19 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ವರುಣಾರ್ಭಟ
ಬಾಗಲಕೋಟೆ, ಹುನಗುಂದ ಮತ್ತು ಇಳಕಲ್ ಪಟ್ಟಣಗಳು ಸೇರಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹೊಳೆಗಳು ತುಂಬಿ ಹರಿಯುತ್ತಿರುವುದರಿಂದ ಕೃಷಿ ಜಮೀನುಗಳಿಗೆ ಹಾನಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಭಾರಿ ಮಳೆ, ಗಾಳಿ ಸಹಿತ ಭಾರಿ ಅನಾಹುತ ಸಂಭವಿಸಿದೆ. ಗುಂಡಬಾಳ ನದಿ ಉಕ್ಕಿ ಹರಿಯುತ್ತಿದ್ದು, ದಡದಲ್ಲಿರುವ ಹಳ್ಳಿಗಳು ಮತ್ತು ಕೃಷಿಭೂಮಿಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಭೂಕುಸಿತ ಕುಸಿತ ವರದಿಯಾಗಿದೆ.
200 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ಭತ್ತ ನಾಶ
ಅತ್ತ ಬಳ್ಳಾರಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ನಾರಿಹಳ್ಳ ಅಣೆಕಟ್ಟೆಯಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮವಾಗಿ ಸುಮಾರು 200 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ಭತ್ತ ಮತ್ತು ಜೋಳ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ.
ಇದನ್ನೂ ಓದಿ: ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾದ ಪರಿಣಾಮ ಹಲವಾರು ಎಕರೆಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮತ್ತು ಈರುಳ್ಳಿ ಬೆಳೆಗಳು ಕೊಚ್ಚಿ ಹೋಗಿವೆ. ಕಳೆದ ಎರಡು ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಉತ್ತಮ ಮಳೆಯಾಗಿದೆ.








