ಭಾರತಕ್ಕಿಂತ ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ; ಅಮೆರಿಕಕ್ಕೆ ಸಚಿವ ಜೈಶಂಕರ್ ಸಂದೇಶ

ರಷ್ಯಾದಿಂದ ತೈಲ ಖರೀದಿ ಮಾಡುವ ಮೂಲಕ ಭಾರತದ ಪರೋಕ್ಷವಾಗಿ ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದುಪ್ಪಟ್ಟು ವ್ಯಾಪಾರ ಸುಂಕ ವಿಧಿಸಿದ್ದರು. ರಷ್ಯಾ ಭೇಟಿಯಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಭಾರತಕ್ಕಿಂತ ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ; ಅಮೆರಿಕಕ್ಕೆ ಸಚಿವ ಜೈಶಂಕರ್ ಸಂದೇಶ
S Jaishankar

Updated on: Aug 21, 2025 | 8:51 PM

ನವದೆಹಲಿ, ಆಗಸ್ಟ್ 21: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ರಷ್ಯಾ ಭೇಟಿಯಲ್ಲಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ರಷ್ಯಾದ ತೈಲದ ಅತಿದೊಡ್ಡ ಖರೀದಿದಾರರಲ್ಲ, ಚೀನಾ ರಷ್ಯಾದ ಅತಿ ದೊಡ್ಡ ತೈಲ ಖರೀದಿದಾರ ದೇಶ. ನಾವು ರಷ್ಯಾದ ಎಲ್‌ಎನ್‌ಜಿಯ ಅತಿದೊಡ್ಡ ಖರೀದಿದಾರರಲ್ಲ, ಯುರೋಪಿಯನ್ ಒಕ್ಕೂಟ ಅತಿ ಹೆಚ್ಚು ಎಲ್​ಎನ್​ಜಿ ಖರೀದಿಸುತ್ತಿದೆ. 2022ರ ನಂತರ ರಷ್ಯಾದೊಂದಿಗೆ ಅತಿದೊಡ್ಡ ವ್ಯಾಪಾರ ಏರಿಕೆಯನ್ನು ಹೊಂದಿರುವ ದೇಶ ನಮ್ಮದಲ್ಲ ಎಂದು ಎಸ್. ಜೈಶಂಕರ್ ಹೇಳಿದ್ದಾರೆ. ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಅಮೆರಿಕ ಭಾರತದ ಮೇಲೆ ಹೆಚ್ಚುವರಿ ಶೇ. 25ರಷ್ಟು ಆಮದು ಸುಂಕ ವಿಧಿಸುವ ಮೂಲಕ ಒಟ್ಟು ವ್ಯಾಪಾರ ಸುಂಕವನ್ನು ಶೇ. 50ಕ್ಕೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾರತದ ರಷ್ಯಾದ ಇಂಧನ ವ್ಯಾಪಾರದ ಬಗ್ಗೆ ಪಾಶ್ಚಿಮಾತ್ಯ ದೇಶಗಳ ಟೀಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, ಚೀನಾ ಮತ್ತು ಯುರೋಪಿಯನ್ ಒಕ್ಕೂಟವು ಭಾರತಕ್ಕಿಂತ ಹೆಚ್ಚು ರಷ್ಯಾದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನಾ ನಿಗ್ರಹಕ್ಕೆ ಆದ್ಯತೆ; ಚೀನಾದ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಮಾತುಕತೆ


2022ರ ನಂತರ ಮಾಸ್ಕೋದೊಂದಿಗಿನ ಒಟ್ಟಾರೆ ವ್ಯಾಪಾರದಲ್ಲಿನ ಏರಿಕೆಗೆ ಭಾರತ ಕಾರಣವಾಗಿರಲಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. “2022ರ ನಂತರ ರಷ್ಯಾದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸುತ್ತಿರುವ ದೇಶ ನಮ್ಮದಲ್ಲ; ಅದರಲ್ಲಿ ದಕ್ಷಿಣದ ಕೆಲವು ದೇಶಗಳಿವೆ ಎಂದು ನಾನು ಭಾವಿಸುತ್ತೇನೆ” ಎಂದು ಜೈಶಂಕರ್ ಹೇಳದ್ದು, ಅವುಗಳನ್ನು ಹೆಸರಿಸಿಲ್ಲ. “ನಿಮಗೆ ಗೊತ್ತಿರಲಿ ಎಂಬ ಕಾರಣಕ್ಕೆ ಹೇಳುತ್ತೇನೆ, ನಾವು ಯುಎಸ್ ನಿಂದ ಕೂಡ ತೈಲವನ್ನು ಖರೀದಿಸುತ್ತೇವೆ” ಎಂದು ಜೈಶಂಕರ್ ಹೇಳಿದ್ದಾರೆ.


ಸಚಿವ ಜೈಶಂಕರ್ ಇಂದು ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದರು. ಅಲ್ಲಿ ಇಬ್ಬರು ನಾಯಕರು ರಾಜಕೀಯ ಸಂಬಂಧಗಳು, ದ್ವಿಪಕ್ಷೀಯ ಸಹಕಾರ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಸಿದ್ಧತೆಗಳನ್ನು ಪರಿಶೀಲಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:50 pm, Thu, 21 August 25