ಅಫಘಾನಿಸ್ತಾನದ ಮುಂದಿನ ಅಧ್ಯಕ್ಷ ಮುಲ್ಲಾ ಅಬ್ದುಲ್ ಘನಿ ಬರಾದರ್ ಅಂತ ತಾಲಿಬಾನಿಗಳು ಹೇಳುತ್ತಿದ್ದಾರೆ!
ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮತ್ತು ಅದರ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬರಾದರ್ನನ್ನು ಅಫಘಾನಿಸ್ತಾನದ ಮುಂದಿನ ಅಧ್ಯಕ್ಷನೆಂದು ಪ್ರೊಜೆಕ್ಟ್ ಮಾಡಲಾಗುತ್ತಿದೆ.
ನವದೆಹಲಿ: ವಿಶ್ವದೆಲ್ಲೆಡೆ ಅಫಘಾನಿಸ್ತಾನ ತಾಲಿಬಾನ್ ಬಂಡುಕೋರರ ವಶವಾಗಿರುವ ಕುರಿತು ಚರ್ಚೆಗಳಾಗುತ್ತಿವೆ. ದೇಶದಲ್ಲಿ ಜನ ಭಯದಿಂದ ತಲ್ಲಣಿಸಿ ಮನೆಯಿಂದ ಆಚೆ ಬರುತ್ತಿಲ್ಲ. ಎಲ್ಲ ಪ್ರಮುಖ ನಗರಗಳಲ್ಲಿ ತಾಲಿಬಾನಿಗಳು ಕೈಯಲ್ಲಿ ಬಂದೂಕು ಹಿಡಿದು ಸುತ್ತುತ್ತಿದ್ದಾರೆ. ಆಫ್ಘಾನಿಗಳು ಅನುಭವಿಸುತ್ತಿರುವ ಯಾತನೆ ಬಗ್ಗೆ ಇತರ ದೇಶಗಳು ಮಾತಾಡುತ್ತಿಲ್ಲ. ಅದು ಆ ದೇಶದ ಆಂತರಿಕ ವಿಷಯ ಅಂತ ಹೇಳಿ ‘ದೊಡ್ಡಣ್ಣ’ ಸುಮ್ಮನಾಗಿದ್ದಾನೆ. ವಿಶ್ವ ಮಾನವ ಹಕ್ಕುಗಳ ಸಂಘಟನೆಗಳು ಒಂದೆರಡು ಹೇಳಿಕೆಗಳನ್ನು ನೀಡಿ ತೆಪ್ಪಗಾಗಿವೆ.
ಏತನ್ನಧ್ಯೆ, ತಾಲಿಬಾನ್ ಸಂಘಟನೆಯ ಸಹ-ಸಂಸ್ಥಾಪಕ ಮತ್ತು ಅದರ ಉಪನಾಯಕ ಮುಲ್ಲಾ ಅಬ್ದುಲ್ ಘನಿ ಬರಾದರ್ನನ್ನು ಅಫಘಾನಿಸ್ತಾನದ ಮುಂದಿನ ಅಧ್ಯಕ್ಷನೆಂದು ಪ್ರೊಜೆಕ್ಟ್ ಮಾಡಲಾಗುತ್ತಿದೆ.
ತಾಲಿಬಾನ್ ಹೆಚ್ಚು ಕಡಿಮೆ ಇಡೀ ದೇಶದ ಮೇಲೆ ನಿಯಂತ್ರಣ ಸಾಧಿಸಿದೆ. ಅಮೇರಿಕದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಅಫಘಾನಿಸ್ತಾನದ ಸರ್ಕಾರ ತಾಲಿಬಾನಿಗಳ ಎದುರು ಮಂಡಿಯೂರಿತು.
ಅಫಘಾನಿಸ್ತಾನ್ ಎರಡನೇ ಅತಿ ದೊಡ್ಡ ನಗರ, ತಾಲಿಬಾನಿಗಳ ಪಾಲಿನ ಪುಣ್ಯಕ್ಷೇತ್ರ ಹಾಗೂ ಅವರ ಮೊದಲ ಆಳ್ವಿಕೆಯ ಅವಧಿಯಲ್ಲಿ ದೇಶದ ರಾಜಧಾನಿಯಾಗಿದ್ದ ಕಂದಾಹಾರ್ ನಲ್ಲಿ ಮುಲ್ಲಾ ಬರಾದರ್ ಬಂದಿಳಿದಿದ್ದಾನೆ. ಮೂಲಗಳ ಪ್ರಕಾರ ಅವನು ಕತಾರ್ನಿಂದ ಕಂದಹಾರ್ ಗೆ ಬಂದಿಳಿದಿದ್ದಾನೆ. ಅಮೇರಿಕ ಮತ್ತು ಆಫ್ಘನ್ ಶಾಂತಿ ಸಂಧಾನಕಾರರೊಂದಿಗೆ ಅವನು ತಿಂಗಳುಗಟ್ಟಲೆ ನಡೆದ ಮಾತುಕತೆಗಳ ನೇತೃತ್ವ ವಹಿಸಿದ್ದ.
ಮುಲ್ಲಾ ಬರಾದರ್ನನ್ನು ಪಾಕಿಸ್ತಾನ 2010ರಲ್ಲಿ ಬಂಧಿಸಿತ್ತು. ಆದರೆ, ಅಮೇರಿಕಾದ ಸಂಧಾನಕಾರ ಜಲ್ಮಯ್ ಖಲಿಜಾದ್ ಕತಾರ್ನಲ್ಲಿ ನಡೆದ ಮಾತುಕತೆಗೆ ತಾಲಿಬಾನ್ ಅನ್ನು ಪ್ರತಿನಿಧಿಸಲು ಬರಾದರನೇ ಸೂಕ್ತ ವ್ಯಕ್ತಿ ಎಂದು ಪರಿಗಣಿಸಿದ್ದರಿಂದ ಆಗಿನ ಟ್ರಂಪ್ ಆಡಳಿತ ಅವನನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಕತಾರ್ನಲ್ಲಿ ಮಾತುಕತೆ ಪೂರ್ಣಗೊಂಡ ನಂತರವೇ ಅಫಘಾನಿಸ್ತಾನದಿಂದ ಅಮೇರಿಕ ತನ್ನ ಸೇನೆಯನ್ನು ವಾಪಸ್ಸು ಕರೆಸಿಕೊಂಡಿತ್ತು.
ಬಂಡುಕೋರ ಚಟುವಟಿಗಳಲ್ಲಿ ಸಕ್ರಿಯನಾಗಿದ್ದರೂ, ಶಾಂತಿ ಮಾತುಕತೆಗಳನ್ನು ನಡೆಸಲು ಬರಾದರ್ ಹಲವಾರು ಪ್ರಯತ್ನಗಳನ್ನು ನಡೆಸಿದ್ದ. 2004 ಮತ್ತು 2009ರಲ್ಲಿ ನಡೆದ ಶಾಂತಿ ಮಾತುಕತೆಗಳಲ್ಲಿ ಅವನು ಮಹತ್ತರ ಪಾತ್ರ ನಿರ್ವಹಿಸಿದ್ದ ಎಂದು ಹೇಳಲಾಗುತ್ತಿದೆ.
ಮುಲ್ಲಾ ಬರಾದರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಜನ ಅವನನ್ನು ಸುತ್ತವರಿದು ಜಯಘೋಷಗಳನ್ನು ಮಾಡಿ ಉನ್ಮಾದದಿಂದ ಕೂಗಾಡಿದ ದೃಶ್ಯಗಳನ್ನು ತಾಲಿಬಾನ್ ಮೀಡಿಯಾ ಬಿತ್ತರಿಸುತ್ತಿದೆ. ಆದರೆ ತಾಲಿಬಾನಿಗಳ ದಮನಕಾರಿ ನೀತಿಗಳಿಗೆ ಹೆದರಿರುವ ಜನರಲ್ಲಿ ಇದಕ್ಕೆ ತದ್ವಿರುದ್ಧವಾದ ಮನಸ್ಥಿತಿ ಇದೆ. ಮುಂದಿನ ದಿನಗಳನ್ನು ನೆನೆದು ಅವರು ಆತಂಕಕ್ಕೀಡಾಗಿದ್ದಾರೆ.