ಮನುಷ್ಯನ ಕುತೂಹಲಕ್ಕೆ ಆಕಾಶವೇ ಮಿತಿ ಎಂಬ ಮಾತಿದೆ. ಅದರರ್ಥ ನಾವು ಹುಡುಕುತ್ತಾ ಹೋದಷ್ಟೂ ವಿಸ್ಮಯಗಳು ತೆರೆದುಕೊಳ್ಳುತ್ತಲೇ ಇರುತ್ತವೆ, ಅದಕ್ಕೆ ಅಂತ್ಯ ಇರುವುದಿಲ್ಲ. ಅದರಲ್ಲೂ ಭೂಮಿಯಾಚೆಗೆ ನಡೆಯುವ ಚಟುವಟಿಕೆಗಳು ಯಾವ ಹೊತ್ತಿನಲ್ಲಿ ಬೇಕಾದರೂ ಮನುಷ್ಯನನ್ನು ಸೆಳೆದು ಹಿಡಿದಿಟ್ಟುಕೊಳ್ಳಬಲ್ಲವು. ಇತ್ತೀಚೆಗೆ ನಾಸಾ ಬಿಡುಗಡೆ ಮಾಡಿದ ಫೋಟೋವೊಂದು ಅಂಥದ್ದೇ ಕುತೂಹಲಕ್ಕೆ ಕಾರಣವಾಗಿದೆ. ಸಾಗರದಲ್ಲೇಳುವ ಸುನಾಮಿಯಂತಹ ವಿಸ್ಮಯ ಅಂತರಿಕ್ಷದಲ್ಲಿ ಘಟಿಸಿರುವುದನ್ನು ನಾಸಾ ಚಿತ್ರ ರೂಪದಲ್ಲಿ ಪ್ರಕಟಿಸಿದ್ದು, ಅದು ಕಪ್ಪು ರಂಧ್ರದಲ್ಲಿ (ಬ್ಲ್ಯಾಕ್ ಹೋಲ್) ನಡೆದ ಸ್ಪೋಟ ಎಂದೆನ್ನಲಾಗಿದೆ. ಈ ಅಪರೂಪದ ಚಿತ್ರವನ್ನು ನಾಸಾ ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ ಖಾತೆಗಳಲ್ಲಿ ಹಂಚಿಕೊಂಡಿದ್ದು, ಅದೀಗ ಭಾರೀ ವೈರಲ್ ಆಗಿದೆ.
ನಾಸಾ ತಿಳಿಸಿರುವಂತೆ ಇದು ಕಪ್ಪು ರಂಧ್ರಗಳಲ್ಲಿ ನಡೆಯುವ ಚಟುವಟಿಕೆಯನ್ನು ಬಿಂಬಿಸುವ ಮಾದರಿ ಚಿತ್ರವಾಗಿದೆ. ಕಂಪ್ಯೂಟರ್ ತಂತ್ರಜ್ಞಾನದ ಸಹಾಯದೊಂದಿಗೆ ಈ ಚಿತ್ರವನ್ನು ರಚಿಸಲಾಗಿದ್ದು, ಸ್ಪೋಟ ಸಂದರ್ಭದಲ್ಲಿ ಕಪ್ಪು ರಂಧ್ರದ ಸಮೀಪ ಏನೆಲ್ಲಾ ಬದಲಾವಣೆ ಉಂಟಾಗಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಿಕೊಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಈ ಚಿತ್ರವನ್ನು ನೆಟ್ಟಿಗರು ಕುತೂಹಲಭರಿತರಾಗಿ ವೀಕ್ಷಿಸುತ್ತಿದ್ದು, ಸುನಾಮಿಯನ್ನೇ ಹೋಲುವ ಘಟನೆ ಅಂತರಿಕ್ಷದಲ್ಲೂ ಸಂಭವಿಸುತ್ತದೆ ಎನ್ನುವುದನ್ನು ನೋಡಿ ಬೆರಗುಗೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ತೋರಿಸಿರುವಂತೆ ಕಪ್ಪು ರಂಧ್ರದ ಗುರುತ್ವಾಕರ್ಷಣಾ ಶಕ್ತಿಯಿಂದ ವಿವಿಧ ಬಗೆಯ ಅನಿಲಗಳು ತಪ್ಪಿಸಿಕೊಂಡು ಹೊರಹೊಮ್ಮುವಾಗ ಈ ವಿಸ್ಮಯ ಘಟಿಸುತ್ತದೆ. ಒಮ್ಮೆಲೆ ಅನಿಲ ಹೊರಹೊಮ್ಮುವುದು ಸಮುದ್ರದಲ್ಲಿ ಸುನಾಮಿ ವೇಳೆ ನೀರಿನ ಅಲೆಗಳು ಏಳುವುದಕ್ಕೆ ಸಾಮ್ಯತೆ ಹೊಂದಿದೆ. ಅಂದಹಾಗೆ ಕಪ್ಪು ರಂಧ್ರಗಳಲ್ಲಿನ ಗುರುತ್ವಾಕರ್ಷಣಾ ಶಕ್ತಿ ಅತ್ಯಂತ ಬಲವಾಗಿರುತ್ತದೆ. ಗಾಳಿ, ಬೆಳಕು ಯಾವುದೂ ಆಚೆಗೆ ಸೂಸದಷ್ಟು ಪ್ರಬಲವಾಗಿ ತಡೆಹಿಡಿಯುವ ಸಾಮರ್ಥ್ಯ ಕಪ್ಪು ರಂಧ್ರದ ಗುರುತ್ವಾಕರ್ಷಣಾ ಶಕ್ತಿಗೆ ಇರುತ್ತದೆ.
ನಾಸಾ ಪ್ರಕಟಿಸಿದ ಚಿತ್ರದಲ್ಲಿ ತೋರಿಸಲಾದ ಕಪ್ಪು ರಂಧ್ರವನ್ನು ಸೂಪರ್ ಮ್ಯಾಸಿವ್ ಬ್ಲ್ಯಾಕ್ ಹೋಲ್ ಎನ್ನಲಾಗಿದ್ದು, ಅದು ಕಪ್ಪು ರಂಧ್ರಗಳ ಪೈಕಿ ಅತ್ಯಂತ ದೈತ್ಯಮಟ್ಟದ್ದಾಗಿದೆ. ಸೂರ್ಯನಂತಹ ದೈತ್ಯ ಆಕಾಶಕಾಯವನ್ನೇ ಲಕ್ಷ, ಕೋಟಿ ಪ್ರಮಾಣದಲ್ಲಿ ಹಾಕಿದರೂ ಸೆಳೆದುಕೊಳ್ಳುವಷ್ಟು ವಿಶಾಲ ಕಪ್ಪು ರಂಧ್ರಗಳು ಇರುತ್ತವೆ. ಅಂತಹ ಕಪ್ಪು ರಂಧ್ರಗಳಲ್ಲಿ ಘಟಿಸುವ ಸುನಾಮಿ ರೀತಿಯ ವಿಸ್ಮಯದ ಮಾದರಿ ಚಿತ್ರ ಈಗ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಇದನ್ನೂ ಓದಿ:
ಕ್ಷೀರಪಥದಲ್ಲಿ ಬಣ್ಣದೋಕುಳಿ; ನಾಸಾ ಬಿಡುಗಡೆಗೊಳಿಸಿತು ವಿಸ್ಮಯಕಾರಿ ಚಿತ್ರ
ನಾಸಾದ ಹಬಲ್ ಹಂಚಿಕೊಂಡ ಆಕರ್ಷಕ ಗೆಲಾಕ್ಸಿ ಫೋಟೋಗಳು ವಿಶ್ವದ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದೆ
Published On - 11:16 am, Tue, 6 July 21