ಆವರಿಸಿದೆ 3ನೇ ಮಹಾಯುದ್ಧದ ಭೀತಿ: ನ್ಯಾಟೊ ಸದಸ್ಯ ದೇಶ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ, ಇಬ್ಬರು ನಾಗರಿಕರ ಸಾವು
ನ್ಯಾಟೊ ಸದಸ್ಯ ದೇಶವಾಗಿರುವ ಪೊಲೆಂಡ್ ಮೇಲಿನ ರಷ್ಯಾ ದಾಳಿಯು ಯುದ್ಧವು ಉಕ್ರೇನ್ನಿಂದಾಚೆಗೆ ವಿಸ್ತರಿಸಬಹುದು ಎಂಬ ಅಪಾಯವನ್ನು ಹುಟ್ಟುಹಾಕಿದೆ.
ವಾರ್ಸಾ / ಕೀವ್: ರಷ್ಯಾ ನಿರ್ಮಿತ ಕ್ಷಿಪಣಿಗಳು ಉಕ್ರೇನ್ ಗಡಿಯಲ್ಲಿರುವ ಪೊಲೆಂಡ್ ಹಳ್ಳಿಗಳ ಮೇಲೆ ಅಪ್ಪಳಿಸಿದ್ದು, ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೊಲೆಂಡ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಲುಕಾಜ್ ಜಸಿನಾ ಹೇಳಿಕೆಯೊಂದರಲ್ಲಿ ದೃಢಪಡಿಸಿದ್ದಾರೆ. ಕ್ಷಿಪಣಿ ದಾಳಿಯ ಬಗ್ಗೆ ವಿವರಣೆ ನೀಡುವಂತೆ ರಷ್ಯಾದ ರಾಯಭಾರಿಗೆ ಪೊಲೆಂಡ್ ತಾಕೀತು ಮಾಡಿತು. ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ನಗರ ಸೇರಿದಂತೆ ಉಕ್ರೇನ್ನ ವಿವಿಧೆಡೆ ರಷ್ಯಾ ಕ್ಷಿಪಣಿ ದಾಳಿ ಮುಂದುವರಿಸಿದ್ದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಇಡೀ ದೇಶ ಕಗ್ಗತ್ತಲಲ್ಲಿ ಮುಳುಗಿದೆ.
ನ್ಯಾಟೊ ಸದಸ್ಯ ದೇಶವಾಗಿರುವ ಪೊಲೆಂಡ್ ಮೇಲಿನ ರಷ್ಯಾ ದಾಳಿಯು ಯುದ್ಧವು ಉಕ್ರೇನ್ನಿಂದಾಚೆಗೆ ವಿಸ್ತರಿಸಬಹುದು ಎಂಬ ಅಪಾಯವನ್ನು ಹುಟ್ಟುಹಾಕಿದೆ. ಇಂಡೊನೇಷ್ಯಾದ ರಾಜಧಾನಿ ಬಾಲಿಯಲ್ಲಿ ನಡೆಯುತ್ತಿರುವ ‘ಜಿ20’ ಸದಸ್ಯ ರಾಷ್ಟ್ರಗಳ ಸಮಾವೇಶದಲ್ಲಿಯೂ ಪೊಲೆಂಡ್ ದಾಳಿ ಚರ್ಚೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಐರೋಪ್ಯ ಒಕ್ಕೂಟದ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ‘ದಾಳಿಯ ಬಗ್ಗೆ ತಿಳಿದು ಆಘಾತವಾಯಿತು’ ಎಂದು ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವಲ್ ಮಾಕ್ರೋನ್, ‘ತಕ್ಷಣ ಮಾತುಕತೆಗೆ ಮುಂದಾಗಬೇಕು’ ಎಂದು ತಾಕೀತು ಮಾಡಿದ್ದಾರೆ.
ಈ ನಡುವೆ ಉಕ್ರೇನ್ ಗಡಿಯಲ್ಲಿರುವ ಸೇನಾ ನೆಲೆಗಳಲ್ಲಿ ಪೊಲೆಂಡ್ ಕಟ್ಟೆಚ್ಚರ ಘೋಷಿಸಿದೆ. ದಾಳಿ ಪಡೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು, ಸಶಸ್ತ್ರಪಡೆಯ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪೊಲೆಂಡ್ ಸರ್ಕಾರವು ಆದೇಶ ಹೊರಡಿಸಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ, ‘ಏನಾಗಿದೆ ಎಂಬ ಬಗ್ಗೆ ವಿಸ್ತೃತ ವರದಿ ಪಡೆದುಕೊಂಡ ನಂತರ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಹೇಳಿದೆ.
ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಪೊಲೆಂಡ್ಗೆ ನ್ಯಾಟೊ ಒಪ್ಪಂದದ 5ನೇ ಪರಿಚ್ಛೇದವಾಗಿರುವ ‘ಸಮಗ್ರ ರಕ್ಷಣೆ’ಯ ಬಲವಿದೆ. ಈ ಪರಿಚ್ಛೇದದ ಅನ್ವಯ ಯಾವುದೇ ಸದಸ್ಯ ದೇಶದ ಮೇಲೆ ಮತ್ತೊಂದು ದೇಶ ದಾಳಿ ನಡೆಸಿದರೆ ಒಕ್ಕೂಟದ ಎಲ್ಲ ಸದಸ್ಯ ದೇಶಗಳು ಒಗ್ಗೂಡಿ ದಾಳಿ ನಡೆಸಿದ ದೇಶದ ಮೇಲೆ ಯುದ್ಧ ಸಾರುತ್ತವೆ. ಪೊಲೆಂಡ್ ಮೇಲೆ ನಡೆದ ದಾಳಿಯು ಉದ್ದೇಶಪೂರ್ವಕವೇ? ಅಥವಾ ಅಚಾನಕ್ ಆದ ಅನಾಹುತವೇ? ಘಟನೆಗಾಗಿ ರಷ್ಯಾ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೋರುತ್ತದೆಯೇ ಎಂಬ ಸಂಗತಿಗಳು ನ್ಯಾಟೊ ಸದಸ್ಯ ದೇಶಗಳ ಮುಂದಿನ ನಡೆಯನ್ನು ನಿರ್ಧರಿಸುತ್ತವೆ.
ಉಕ್ರೇನ್ ಜೊತೆಗೆ ಗಡಿ ಹಂಚಿಕೊಂಡಿರುವ ಮತ್ತೊಂದು ದೇಶ ಹಂಗೇರಿಯಲ್ಲಿಯೂ ಪೊಲೆಂಡ್ ಮೇಲಿನ ದಾಳಿಯ ನಂತರ ಆತಂಕದ ಸ್ಥಿತಿ ಕಾಣಿಸಿಕೊಂಡಿದೆ. ಹಂಗೇರಿ ಪ್ರಧಾನಿ ವಿಕ್ಟರ್ ಅರ್ಬನ್ ತರಾತುರಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆದಿದ್ದಾರೆ.
ದಾಳಿ ನಡೆಸಿಲ್ಲ: ರಷ್ಯಾ ಸ್ಪಷ್ಟನೆ
ಪೊಲೆಂಡ್ ಮೇಲೆ ರಷ್ಯಾ ಸೇನೆಯು ಕ್ಷಿಪಣಿ ಹಾರಿಬಿಟ್ಟಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ‘ಪೊಲೆಂಡ್ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿ ಪ್ರಚೋದನಕಾರಿಯಾಗಿದೆ. ಪೊಲೆಂಡ್ ಸರ್ಕಾರದೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಉಕ್ರೇನ್-ಪೊಲೆಂಡ್ ಗಡಿಯಲ್ಲಿ ರಷ್ಯಾ ಯಾವುದೇ ದಾಳಿ ನಡೆಸಿಲ್ಲ’ ಎಂದು ರಕ್ಷಣಾ ಸಚಿವರ ಕಚೇರಿ ಸ್ಪಷ್ಟಪಡಿಸಿದೆ.
Published On - 7:17 am, Wed, 16 November 22