ನೇಪಾಳ ಜಲಪ್ರಳಯದ ಭೀಕರತೆ: ನುವಾಕೋಟ್‌ನಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆ

ನೇಪಾಳ-ಟಿಬೆಟ್ ಗಡಿ ಹಿಮಕುಸಿತದಿಂದ ಉಂಟಾದ ಭೀಕರ ಜಲಪ್ರಳಯವು ನುವಾಕೋಟ್‌ನ ಬೆತ್ರಾವತಿಯಲ್ಲಿ ಒಂದೇ ಮನೆಯೊಳಗೆ 23 ಮೃತದೇಹಗಳು ಸಿಲುಕಿದ್ದ ದುರಂತವನ್ನು ಬಯಲು ಮಾಡಿದೆ. ದೇಶಾದ್ಯಂತ ಸಾವಿರಾರು ಜನ ಬಲಿಯಾಗಿದ್ದು, 4,000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಪಡೆಗಳು ಮತ್ತು ಭಾರತೀಯ ಸೇನೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಯಾತ್ರಿಕರು ಮತ್ತು ಕಾರ್ಮಿಕರು ಸೇರಿದಂತೆ ಸಿಲುಕಿರುವವರನ್ನು ರಕ್ಷಿಸಲು ಹೋರಾಡುತ್ತಿವೆ.

ನೇಪಾಳ ಜಲಪ್ರಳಯದ ಭೀಕರತೆ: ನುವಾಕೋಟ್‌ನಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆ
ಪ್ರವಾಹ

Updated on: Sep 01, 2026 | 3:13 PM

ಕಠ್ಮಂಡು,ಸೆಪ್ಟೆಂಬರ್ 01: ನೇಪಾಳ-ಟಿಬೆಟ್ ಗಡಿಯಲ್ಲಿ ಹಿಮಕುಸಿತದಿಂದ ಸಂಭವಿಸಿದ ಭೀಕರ  ಪ್ರವಾಹ(Flood)ದ ಬಳಿಕ ನುವಾಕೋಟ್ ಜಿಲ್ಲೆಯ ಬೆತ್ರಾವತಿ ಗ್ರಾಮದಲ್ಲಿ ಒಂದೇ ಮನೆಯೊಳಗೆ ಹೂತುಹೋಗಿದ್ದ 23 ಮೃತದೇಹಗಳು ಪತ್ತೆಯಾಗಿದ್ದು, ದುರಂತದ ಕರಾಳತೆಯನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.

ದೇಶಾದ್ಯಂತ ಪ್ರವಾಹಕ್ಕೆ ಬಲಿಯಾದವರ ಒಟ್ಟು ಸಂಖ್ಯೆ ಸಾವಿರದ ಗಡಿ ಸಮೀಪಿಸಿದ್ದು , ಇನ್ನೂ 4 ಸಾವಿರಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಕೆಸರು ಮತ್ತು ಅವಶೇಷಗಳಡಿ ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಪಡೆಗಳು ಸಮಯದ ವಿರುದ್ಧ ಹೋರಾಟ ನಡೆಸುತ್ತಿವೆ.

ಗೋಸಾಯಿಕುಂಡ ಯಾತ್ರಿಕರು: ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳ ರೌದ್ರಾವತಾರಕ್ಕೆ ಸಿಲುಕಿದ ಬೆತ್ರಾವತಿಯ ಮೂರು ಅಂತಸ್ತಿನ ಮನೆಯೊಂದರ ಕೊಠಡಿಯೊಳಗೆ 21 ಹಾಗೂ ಹೊರಗೆ 2 ಮೃತದೇಹಗಳು ಪತ್ತೆಯಾಗಿವೆ. ಇವರಲ್ಲಿ ವಿದೇಶಿ ಪ್ರಜೆಗಳು ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಸಾಯಿಕುಂಡಕ್ಕೆ ತೆರಳುತ್ತಿದ್ದ ಯಾತ್ರಿಕರು ಇರಬಹುದು ಎಂದು ಶಂಕಿಸಲಾಗಿದೆ.

ತಬ್ಬಿಕೊಂಡ ಸ್ಥಿತಿಯಲ್ಲೇ ಅಂತ್ಯ: ಪ್ರವಾಹದ ನೀರು ನುಗ್ಗಿದಾಗ ತಪ್ಪಿಸಿಕೊಳ್ಳಲು ಸಂತ್ರಸ್ತರು ಮೇಲಿನ ಮಹಡಿಯ ಕೊಠಡಿಗೆ ಓಡಿದ್ದಾರೆ. ಆದರೆ ಭಾರಿ ಪ್ರಮಾಣದ ಮಣ್ಣು ಮತ್ತು ಪ್ರವಾಹದ ನೀರು ಕಟ್ಟಡವನ್ನೇ ನುಂಗಿಹಾಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಯುವತಿಯೊಬ್ಬಳನ್ನು ತಾಯಿ ಗಟ್ಟಿಯಾಗಿ ತಬ್ಬಿಕೊಂಡ ಸ್ಥಿತಿಯಲ್ಲೇ ಇಬ್ಬರ ಶವಗಳು ಪತ್ತೆಯಾಗಿವೆ.

ಮತ್ತಷ್ಟು ಓದಿ: ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು

ತ್ರಿಶೂಲಿ ಪ್ರಾಜೆಕ್ಟ್‌ಗಳಲ್ಲಿ ಆತಂಕ: ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುಮಾರು 40-42ಎಂಜಿನಿಯರ್‌ಗಳು ಹಾಗೂ ತ್ರಿಶೂಲಿ 3ಬಿ ಯೋಜನೆಯ 118 ಉದ್ಯೋಗಿಗಳು ಸೇರಿದಂತೆ ವಿವಿಧ ಸುರಂಗಗಳಲ್ಲಿ ನೂರಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಸುಳಿವಿಲ್ಲ: ರಸುವಾ ಜಿಲ್ಲೆಯ ಉತ್ತರಗಯಾದಲ್ಲಿ ಸುಮಾರು 350ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಸೇನಾ ತಜ್ಞರ ನೆರವು: ದುರ್ಗಮ ಹವಾಮಾನದ ನಡುವೆಯೂ ಭಾರತೀಯ ರಕ್ಷಣಾ ಪಡೆಗಳು ಮತ್ತು ತಜ್ಞರ ತಂಡಗಳು ನೇಪಾಳ ಸೇನೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ರಸುವಾ ಜಿಲ್ಲೆಯ ಚಿಲಿಮೆ ಮತ್ತು ಲ್ಯಾಂಗ್ಟಾಂಗ್ ಪ್ರದೇಶದ ಸುರಂಗಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವಲ್ಲಿ ಪ್ರಮುಖ ಪ್ರಗತಿ ಸಾಧಿಸಿವೆ.

ಗಂಡಕ್ ನದಿಯಲ್ಲಿ ತೇಲಿಬಂದ ಶವಗಳು: ನೇಪಾಳದಿಂದ ಹರಿದುಬರುತ್ತಿರುವ ಗಂಡಕ್ ನದಿಯ ಮೂಲಕ ಉತ್ತರ ಪ್ರದೇಶದ ಕುಶಿನಗರ ಗಡಿ ಭಾಗದಲ್ಲೂ 13 ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿದ್ದು, ಎರಡೂ ದೇಶಗಳ ಗಡಿ ಭಾಗಗಳಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us