ನೇಪಾಳದಲ್ಲಿ ಹಠಾತ್ ರಾಜಕೀಯ ಬೆಳವಣಿಗೆ: ಸಂಸತ್ತು ವಿಸರ್ಜಿಸಿ ಚುನಾವಣೆ ಘೋಷಿಸಿದ ರಾಷ್ಟ್ರಪತಿ
ನೇಪಾಳ ರಾಜಕೀಯದಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಸಂಸತ್ತು ವಿಸರ್ಜಿಸಿದ್ದಾರೆ. ಇಂದು ಬೆಳಿಗ್ಗೆ ಸಂಪುಟ ಸಭೆ ಕರೆದಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸಂಸತ್ ವಿಸರ್ಜಿಸುವಂತೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಯವರಿಗೆ ಶಿಫಾರಸು ಮಾಡಿದ್ದರು.

ಕಠ್ಮಂಡು: ನೇಪಾಳ ರಾಜಕೀಯದಲ್ಲಿ ನಡೆದ ಹಠಾತ್ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ನೇಪಾಳದ ಸಂಸತ್ನ್ನು ವಿಸರ್ಜಿಸಿದ್ದಾರೆ. ಇಂದು ಬೆಳಿಗ್ಗೆ ಸಚಿವ ಸಂಪುಟ ಸಭೆ ಕರೆದಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸಂಸತ್ ರದ್ದುಗೊಳಿಸುವ ನಿರ್ಣಯ ಕೈಗೊಂಡು, ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಯವರಿಗೆ ಈ ಕುರಿತು ಶಿಫಾರಸು ಮಾಡಿದ್ದರು.
ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ನಿರ್ಣಯವನ್ನು ನೇಪಾಳದ ಪ್ರತಿಪಕ್ಷಗಳು ವಿರೋಧಿಸಿವೆ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಮೇಲೆ ವಿಪಕ್ಷಗಳು ಹರಿಹಾಯ್ದಿವೆ. ಏಕಾಏಕಿ ಸಂಸತ್ ರದ್ದುಗೊಳಿಸುವ ತುರ್ತು ನಿರ್ಣಯದ ಕುರಿತು ಪ್ರಬಲ ಅಸಮಾಧಾನ ವ್ಯಕ್ತಪಡಿಸಿವೆ.
ಸಂಸತ್ ರದ್ದು, ಮುಂದೇನು? ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿಯವರು ಈಗಾಗಲೇ ಸಂಸತ್ನ್ನು ರದ್ಧುಗೊಳಿಸುವುದರಿಂದ ನೇಪಾಳ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ. 2021ರ ಎಪ್ರಿಲ್ 30ರಿಂದ ಮೇ10ರೊಳಗಾಗಿ ಚುನಾವಣೆ ನಡೆಸುವಂತೆ ರಾಷ್ಟ್ರಪತಿ ತಿಳಿಸಿದ್ದಾರೆ. ಸಂಸತ್ನಲ್ಲಿ ಕೆ.ಪಿ.ಶರ್ಮಾ ಓಲಿ ಅವರಿಗೆ ಬಹುಮತ ಪಡೆಯುವ ವಿಶ್ವಾಸವಿರಲಿಲ್ಲ ಎಂದು ನೇಪಾಳದ ದಿನಪತ್ರಿಕೆಯೊಂದು ವರದಿ ಮಾಡಿದೆ.
ಪ್ರಧಾನಿ ಕೆ.ಪಿ.ಶರ್ಮಾ ಪಕ್ಷದೊಳಗಿನ ಶೀತಲ ಸಮರದಿಂದ ಒತ್ತಡಕ್ಕೆ ಸಿಲುಕಿದ್ದರು. ಕಳೆದ ಮಂಗಳವಾರ ಹೊರಡಿಸಿದ್ದ ಕಾನ್ಸ್ಟಿಟ್ಯೂಷನಲ್ ಕೌನ್ಸಿಲ್ ಆಕ್ಟ್ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವಂತೆ ನೇಪಾಳ ಕಮ್ಯುನಿಸ್ಟ್ ಪಕ್ಷದ ಕೆಲ ಪ್ರಮುಖ ನಾಯಕರೇ ಒತ್ತಡ ಹಾಕಿದ್ದರು. ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ನೇಪಾಳದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗ ನೇಮಕಾತಿಯಲ್ಲಿ ಈ ಕಾಯ್ದೆ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿತ್ತು.
ಕೆ.ಪಿ.ಶರ್ಮಾ ಈ ಅಧಿಸೂಚನೆಯನ್ನು ಹೊರಡಿಸಿದ ಒಂದು ಗಂಟೆಯೊಳಗೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅವರ ಸಹಿಯೂ ದೊರೆತಿತ್ತು. ಆದರೆ ಸಂಸತ್ನಲ್ಲಿ ಹೊಸ ಕಾಯ್ದೆಯು ಅಂಗೀಕಾರವಾಗುವ ಸಾಧ್ಯತೆ ಕ್ಷೀಣವಾಗಿತ್ತು. ಮಾಜಿ ಪ್ರಧಾನಿಗಳಾದ ಪ್ರಚಂಡ, ಪುಷ್ಪಾ ಕಮಲ್ ದಹಲ್ ಮತ್ತು ಮಾಧವ್ ನೇಪಾಳ್ ಅವರ ತೀವ್ರ ವಿರೋಧದ ಸುಳಿಯಲ್ಲೂ ಕೆ.ಪಿ.ಶರ್ಮಾ ಸಿಲುಕಿದ್ದರು.