ನೋಟಿನಲ್ಲಿ ಭಾರತದ ಪ್ರದೇಶಗಳನ್ನು ಮುದ್ರಿಸಿದ ಪ್ರಕರಣ; ನೇಪಾಳದ ಅಧ್ಯಕ್ಷರ ಸಲಹೆಗಾರ ರಾಜೀನಾಮೆ
ಭಾರತ- ನೇಪಾಳದ ಗಡಿಯಲ್ಲಿರುವ ಲಿಪುರೇಖ್, ಲಿಂಪಿಯಾಧುರಾ, ಕಾಲಾಪಾನಿಯನ್ನು ತೋರಿಸುವ ನಕ್ಷೆಯನ್ನು ನೇಪಾಳದ ಹೊಸ 100 ರೂ. ನೋಟುಗಳಲ್ಲಿ ಮುದ್ರಣ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ನೇಪಾಳದ ಅಧ್ಯಕ್ಷರ ಆರ್ಥಿಕ ಸಲಹೆಗಾರ ಚಿರಂಜೀವಿ ನೇಪಾಳ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕಠ್ಮಂಡು: ಭಾರತದ 3 ಪ್ರದೇಶಗಳನ್ನು ಒಳಗೊಂಡಿರುವ ನಕ್ಷೆಯನ್ನು ಹೊಂದಿರುವ ಹೊಸ 100 ರೂ. ನೋಟುಗಳನ್ನು ಬಿಡುಗಡೆ ಮಾಡುವ ಸರ್ಕಾರದ ನಿರ್ಧಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ (Ram Chandra Paudel) ಅವರ ಆರ್ಥಿಕ ಸಲಹೆಗಾರ ಚಿರಂಜೀವಿ ರಾಜೀನಾಮೆ ನೀಡಿದ್ದಾರೆ. ನೇಪಾಳದ ಈ ಕ್ರಮಕ್ಕೆ ಈಗಾಗಲೇ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ನೇಪಾಳದ ಅಧ್ಯಕ್ಷರ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಚಿರಂಜೀವಿ ನೇಪಾಳ (Chiranjivi Nepal) ಅವರ ರಾಜೀನಾಮೆಯನ್ನು ಅಧ್ಯಕ್ಷ ಭಾನುವಾರ ಅಂಗೀಕರಿಸಿದ್ದಾರೆ.
ನೇಪಾಳ ದೇಶದ 100 ರೂ.ಗಳ ಹೊಸ ನೋಟುಗಳನ್ನು ಮುದ್ರಿಸುವಾಗ ಹಳೆಯ ನಕ್ಷೆಯನ್ನು ಹೊಸದಕ್ಕೆ ಬದಲಾಯಿಸಲು ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಹೊಸ ನಕ್ಷೆಯು ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾದಂತಹ ಪ್ರದೇಶಗಳನ್ನು ಒಳಗೊಂಡಿದೆ. ಭಾರತವು ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ತನಗೆ ಸೇರಿದ್ದು ಎಂದು ಹೇಳಿದೆ. ಸಿಪಿಎನ್-ಯುಎಂಎಲ್ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಚಿರಂಜೀವಿ ನೇಪಾಳ ಅವರ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಟೀಕಿಸಿದ್ದರು.
ಇದನ್ನೂ ಓದಿ: ಪಾಠ ಕಲಿಯದ ನೇಪಾಳ; ಭಾರತದ ಪ್ರದೇಶಗಳನ್ನು ತನ್ನ ನೋಟಿನಲ್ಲಿ ಮುದ್ರಿಸಲು ನಿರ್ಧಾರ
“ಜನರಿಗೆ ಪ್ರಾಯೋಗಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬ ಕಾರಣದಿಂದ ಸಾರ್ವಜನಿಕರ ಗಮನವನ್ನು ಸೆಳೆಯಲು ನಾನು ಈ ಗಂಭೀರ ವಿಷಯವನ್ನು ಎತ್ತಿದ್ದೇನೆ” ಎಂದು ಚಿರಂಜೀವಿ ನೇಪಾಳ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಹೇಳಿಕೆಯನ್ನು ಉಲ್ಲೇಖಿಸಿ ಅನಗತ್ಯವಾಗಿ ನೇಪಾಳದ ಅಧ್ಯಕ್ಷರನ್ನು ವಿವಾದಕ್ಕೆ ಎಳೆಯುವ ಪ್ರಯತ್ನಗಳು ನಡೆದಿದ್ದರಿಂದ ನೇಪಾಳದ ರಾಷ್ಟ್ರಪತಿಯ ಘನತೆಯನ್ನು ಕಾಪಾಡಿಕೊಳ್ಳಲು ನಾನು ಈ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ” ಎಂದು ಚಿರಂಜೀವಿ ನೇಪಾಳ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Daily Devotional: ಅಂಗಡಿ ಬಾಗಿಲು ಯಾವ ದಿಕ್ಕಿಗೆ ಇದ್ದರೆ ಒಳ್ಳೆಯದು? ವಿಡಿಯೋ ನೋಡಿ
ಈ ಹಿಂದೆ ತಿದ್ದುಪಡಿ ಮಾಡಿದ ಸಂವಿಧಾನದ ಪ್ರಕಾರ, ನೇಪಾಳದ ನಕ್ಷೆಯೊಂದಿಗೆ ಹೊಸ 100 ರೂ. ನೋಟುಗಳನ್ನು ಮುದ್ರಿಸುವ ಸರ್ಕಾರದ ನಿರ್ಧಾರದ ವಿರುದ್ಧ ಚಿರಂಜೀವಿ ನೇಪಾಳದ ಟೀಕೆಗಳ ಕುರಿತು ನಾಗರಿಕ ಸಮಾಜದ ಮುಖಂಡರ ಗುಂಪು ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿತ್ತು. ಹೊಸ ನೋಟುಗಳನ್ನು ಬಿಡುಗಡೆ ಮಾಡುವ ನೇಪಾಳ ಸರ್ಕಾರದ ನಿರ್ಧಾರದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ್ ಕಳೆದ ವಾರ ಅಸಮಾಧಾನ ವ್ಯಕ್ತಪಡಿಸಿದ್ದರು.
ನೇಪಾಳವು 5 ಭಾರತೀಯ ರಾಜ್ಯಗಳೊಂದಿಗೆ 1,850 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಗಡಿಗಳಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ