ಪಾಠ ಕಲಿಯದ ನೇಪಾಳ; ಭಾರತದ ಪ್ರದೇಶಗಳನ್ನು ತನ್ನ ನೋಟಿನಲ್ಲಿ ಮುದ್ರಿಸಲು ನಿರ್ಧಾರ
ಭಾರತ ಮತ್ತು ನೇಪಾಳದ ನಡುವಿನ ಗಡಿ ಸಮಸ್ಯೆ ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಕಂಡುಬರುತ್ತಿವೆ. ಭಾರತದ ಆಕ್ಷೇಪದ ಹೊರತಾಗಿಯೂ ನೇಪಾಳ ತನ್ನ 100 ರೂ. ನೋಟಿನಲ್ಲಿ ಭಾರತದ ವ್ಯಾಪ್ತಿಯಲ್ಲಿರುವ 3 ವಿವಾದಿತ ಗಡಿ ಪ್ರದೇಶಗಳನ್ನು ನಕ್ಷೆಯಲ್ಲಿ ಸೇರಿಸಲು ನಿರ್ಧರಿಸಿದೆ.
ನವದೆಹಲಿ: ನೇಪಾಳ (Nepal) ತನ್ನ ಹೊಸ 100 ರೂ. ನೋಟುಗಳ ಮೇಲೆ ಭಾರತದ 3 ಗಡಿ ಪ್ರದೇಶಗಳಾದ ಲಿಪುರೇಖ್ (Lipulekh), ಲಿಂಪಿಯಾಧುರಾ (Limpiyadhura), ಕಾಲಾಪಾನಿಯನ್ನು (Kalapani) ತೋರಿಸುವ ನಕ್ಷೆಯನ್ನು ಮುದ್ರಣ ಮಾಡಲು ನಿರ್ಧಾರ ಮಾಡಿದೆ. ಭಾರತವು ಆ ಎಲ್ಲಾ 3 ಪ್ರದೇಶಗಳು ತನಗೆ ಸೇರಿದ್ದು ಎಂದು ಈ ಹಿಂದೆಯೂ ಸಮರ್ಥಿಸಿಕೊಂಡಿತ್ತು. ಇಷ್ಟಾದರೂ ಮತ್ತೆ ನೇಪಾಳ ಬಾಲ ಬಿಚ್ಚಿದೆ.
ಭಾರತದೊಂದಿಗಿನ ವಿವಾದದ ನಡುವೆ ನೇಪಾಳವು ತನ್ನ ಭೂಪ್ರದೇಶದ ಭಾಗವಾಗಿ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ಚಿತ್ರಿಸುವ ನಕ್ಷೆಯೊಂದಿಗೆ ದೇಶದಲ್ಲಿ ಹೊಸ 100 ರೂಪಾಯಿ ಕರೆನ್ಸಿ ನೋಟನ್ನು ಮುದ್ರಿಸಲು ನಿರ್ಧರಿಸಿದೆ. ಈ ಮೊದಲು 2020ರ ಜೂನ್ 18ರಂದು ನೇಪಾಳ ತನ್ನ ಸಂವಿಧಾನವನ್ನು ಬದಲಾಯಿಸುವ ಮೂಲಕ 3 ವಿವಾದಿತ ಪ್ರದೇಶಗಳನ್ನು ಸೇರಿಸುವ ಮೂಲಕ ದೇಶದ ರಾಜಕೀಯ ನಕ್ಷೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತ ಆ ಮೂರು ವಿವಾದಿತ ಪ್ರದೇಶಗಳು ನಮ್ಮ ದೇಶಕ್ಕೆ ಸೇರಿದ್ದು ಎಂದು ಹೇಳಿತ್ತು.
ಹೊಸ ಕರೆನ್ಸಿ ನೋಟು ಮುದ್ರಣದ ನಿರ್ಧಾರವನ್ನು ಪ್ರಕಟಿಸಿದ ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವೆ ರೇಖಾ ಶರ್ಮ, ಪ್ರಧಾನಿ ಪುಷ್ಪಕಮಲ್ ದಹಾಲ್ ಅಧ್ಯಕ್ಷತೆಯ ಮಂತ್ರಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಡಿ ಮತ್ತು ಸಂಬಂಧದ ವಿಚಾರದಲ್ಲಿ ನರೇಂದ್ರ ಮೋದಿ ಅಭಿಪ್ರಾಯ ಸ್ವಾಗತಿಸಿದ ಚೀನಾ
“ಪ್ರಧಾನಿ ಪುಷ್ಪಕಮಲ್ ದಹಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಮಂಡಳಿಯ ಸಭೆಯು ನೇಪಾಳದ ಹೊಸ ನಕ್ಷೆಯನ್ನು ಮುದ್ರಿಸಲು ನಿರ್ಧರಿಸಿತು. ಇದರಲ್ಲಿ 100 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಸೇರಿವೆ. ಏಪ್ರಿಲ್ 25 ಮತ್ತು ಮೇ 2 ರಂದು ನಡೆದ ಕ್ಯಾಬಿನೆಟ್ ಸಭೆಗಳಲ್ಲಿ 100 ರೂಪಾಯಿಗಳ ನೋಟನ್ನು ಮರು ವಿನ್ಯಾಸಗೊಳಿಸಲು ಮತ್ತು ಬ್ಯಾಂಕ್ ನೋಟಿನಲ್ಲಿ ಮುದ್ರಿಸಲಾದ ಹಳೆಯ ನಕ್ಷೆಯನ್ನು ಬದಲಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ” ಎಂದು ರೇಖಾ ಶರ್ಮ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನೇಪಾಳದ ಸಂಸತ್ತಿನಲ್ಲಿ 275 ಮತಗಳಲ್ಲಿ 258 ಮತಗಳು ವಿವಾದಾತ್ಮಕ ಮಸೂದೆಯನ್ನು ಬೆಂಬಲಿಸಿದವು ಎಂದು ಅವರು ಹೇಳಿದ್ದಾರೆ. ಈ ಮಸೂದೆಯನ್ನು ಬೆಂಬಲಿಸಲು 275 ಸದಸ್ಯರ ಕೆಳಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ನೇಪಾಳಿ ಕಾಂಗ್ರೆಸ್ (ಎನ್‌ಸಿ), ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ (ಆರ್‌ಜೆಪಿ-ಎನ್), ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (ಆರ್‌ಪಿಪಿ) ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಹೊಸ ನಕ್ಷೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ಭಾರತ-ನೇಪಾಳ ಗಡಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದ ಎಸ್‌ಎಸ್‌ಬಿ
ನೇಪಾಳವು ಐದು ಭಾರತೀಯ ರಾಜ್ಯಗಳೊಂದಿಗೆ 1,850 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಸೇರಿವೆ. 2023ರ ಜೂನ್ನಲ್ಲಿ ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಾಲ್ ‘ಪ್ರಚಂಡ’ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ಸ್ನೇಹದ ಮನೋಭಾವದ ಅಡಿಯಲ್ಲಿ ಗಡಿ ವಿವಾದವನ್ನು ಪರಿಹರಿಸಲು ಪ್ರತಿಜ್ಞೆ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಅದರ ಬಗ್ಗೆ ಯಾವ ಸೂಚನೆಯೂ ಕಂಡುಬಂದಿಲ್ಲ.
ಅಂದಹಾಗೆ, 2019ರಲ್ಲಿ ಭಾರತವು ತನ್ನ ಅಂತಾರಾಷ್ಟ್ರೀಯ ಗಡಿಯೊಳಗಿನ ವಿವಾದಿತ ಪ್ರದೇಶಗಳನ್ನು ತೋರಿಸುವ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ನೇಪಾಳಿ ಸಾರ್ವಜನಿಕರು ಈ ವಿವಾದಿತ ಪ್ರದೇಶಗಳನ್ನು ತಮ್ಮ ದೇಶಕ್ಕೆ ಸೇರಿಸಲು ನೇಪಾಳಿ ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ಪ್ರತಿಭಟನೆಗಳನ್ನು ನಡೆಸಿದ್ದರು. ನೇಪಾಳದ ಮೇಲೆ ಭಾರತವು ಅನಧಿಕೃತ ಆರ್ಥಿಕ ದಿಗ್ಬಂಧನವನ್ನು ಹೇರಿದ ನಂತರ 2015ರಿಂದ ಒತ್ತಡಕ್ಕೆ ಒಳಗಾಗಿದ್ದ ಭಾರತ-ನೇಪಾಳ ಸಂಬಂಧಗಳು ಇದರಿಂದಾಗಿ ಮತ್ತಷ್ಟು ಹದಗೆಟ್ಟವು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ