ನವದೆಹಲಿ, ನವೆಂಬರ್ 21: ಭಾರತ ಕಳೆದ 10 ವರ್ಷದಲ್ಲಿ ಗಮನಾರ್ಹವಾಗಿ ಬೆಳವಣಿಗೆ ಹೊಂದಿದೆ. ವಿಶ್ವದ 10ನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದ ಭಾರತ ಈಗ 5ನೇ ಸ್ಥಾನಕ್ಕೆ ಏರಿದೆ. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳು ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎ ವೈಷ್ಣವ್, ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್ಗಳನ್ನು ವಿವರಿಸಿದ್ದಾರೆ.
ಭಾರತದ ಪ್ರಗತಿಯ ಕಾರ್ಯತಂತ್ರವು ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಇನ್ಫ್ರಾಸ್ಟ್ರಕ್ಚರ್ನಲ್ಲಿ ಸಾರ್ವಜನಿಕ ಹೂಡಿಕೆ. ಎರಡನೆಯದು ಸಮಗ್ರ ಪ್ರಗತಿ. ಮೂರನೆಯದು ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್. ನಾಲ್ಕನೆಯದು ಕಾನೂನುಗಳ ಸರಳೀಕರಣ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ಇನ್ಫ್ರಾಸ್ಟ್ರಕ್ಚರ್ನಲ್ಲಿ ಅವರು ಭೌತಿಕ ಮೂಲಸೌಕರ್ಯ, ಡಿಜಿಟಲ್ ಮೂಲಸೌಕರ್ಯ ಮತ್ತು ಸಾಮಾಜಿಕ ಮೂಲಸೌಕರ್ಯದಲ್ಲಿ ಭಾರತ ಯಾವ್ಯಾವ ರೀತಿ ಬೆಳವಣಿಗೆ ಸಾಧಿಸಿದೆ ಎನ್ನುವುದನ್ನು ತಿಳಿಸಿದರು.
ಸಮಗ್ರ ಪ್ರಗತಿ ಅಥವಾ ಇನ್ಕ್ಲೂಸಿವ್ ಗ್ರೋತ್ ವಿಚಾರದ ಬಗ್ಗೆ ಮಾತನಾಡಿದ ಅವರು, ಸಮಾಜದ ಕೆಳಗಿನ ಸ್ತರದ ಜನರನ್ನು ಮೇಲಕ್ಕೆ ತರಲು ಸರ್ಕಾರ ಯಶಸ್ವಿಯಾಗಿರುವುದನ್ನು ತಿಳಿಸಿದರು.
545 ಮಿಲಿಯನ್ ಜನರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಪಬ್ಲಿಕ್ ಹೌಸಿಂಗ್ ಪ್ರೋಗ್ರಾಮ್ನಲ್ಲಿ 40 ಮಿಲಿಯನ್ ಜನರಿಗೆ ಮನೆ ನಿರ್ಮಿಸಲಾಗಿದೆ. 100 ಮಿಲಿಯನ್ ಕುಟುಂಬಗಳು ಗ್ಯಾಸ್ ಬಳಕೆ ಆರಂಭಿಸಿವೆ. ಹೆಲ್ತ್ ಕೇರ್ ಪ್ರೋಗ್ರಾಮ್ 350 ಮಿಲಿಯನ್ ಜನರನ್ನು ವ್ಯಾಪಿಸಿದೆ. 70 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಿಗೆ ಉಚಿತವಾಗಿ ಕವರೇಜ್ ಕೊಡಲಾಗುತ್ತಿದೆ. ಹತ್ತು ವರ್ಷದಲ್ಲಿ 250 ಮಿಲಿಯನ್ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ. ಇಂಥದ್ದು ಬೇರೆ ಯಾವ ದೇಶದಲ್ಲೂ ಆಗಿದ್ದನ್ನು ಕಂಡಿಲ್ಲ ಎಂದು ಹೇಳಿದರು.
ಮೂರನೇ ಪಿಲ್ಲರ್ ಕುರಿತು ಮಾತನಾಡಿದ ಅವರು ಭಾರತವು ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್ನಲ್ಲಿ ಎಷ್ಟು ಬೆಳವಣಿಗೆ ಹೊಂದುತ್ತಿದೆ ಎಂಬುದರ ನಿದರ್ಶನಗಳನ್ನು ನೀಡಿದರು. ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಗಮನಾರ್ಹವಾಗಿ ಬೆಳೆಯುತ್ತಿದೆ. ಸೆಮಿಕಂಡಕ್ಟರ್ ಸೆಕ್ಟರ್ ಆರಂಭಗೊಂಡಿದೆ ಎಂದು ಅವರು ವಿವರಿಸಿದರು.
ನಾಲ್ಕನೇ ಪಿಲ್ಲರ್ ಆದ ಕಾನೂನು ಸರಳೀಕರಣ ಕುರಿತು ಮಾತನಾಡಿದ ಅವರು, ಮೋದಿ ನೇತೃತ್ವದ ಸರ್ಕಾರ ವಸಾಹತುಶಾಹಿ ಕಾಲದಿಂದ ಉಳಿದುಕೊಂಡು ಬಂದಿದ್ದ ಕಾನೂನುಗಳನ್ನು ಕಿತ್ತುಹಾಕಿ ಹೊಸ ಕಾನೂನುಗಳನ್ನು ಸ್ಥಾಪಿಸಿರುವ ಬಗ್ಗೆ ಮಾತನಾಡಿದರು.
ಕಳೆದ ಕೆಲ ವರ್ಷಗಳಲ್ಲಿ ಮೂರು ಪ್ರಮುಖ ಘಟನೆಗಳನ್ನು ಕಂಡಿದ್ದೇವೆ. ಕೋವಿಡ್ ಸ್ಥಿತಿ ಕಂಡಿದ್ದೇವೆ. 60 ರಾಷ್ಟ್ರಗಳು ಚುನಾವಣೆ ಎದುರಿಸುತ್ತಿವೆ. ನಾವು ಕೂಡ ಚುನಾವಣೆ ನಡೆಸಿದೆವು. 800 ಮಿಲಿಯನ್ ಮತದಾರರು ಮತ ಚಲಾಯಿಸಿದ್ದರು. ಅದು ಮಾನವ ಇತಿಹಾಸದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವದ ಮತದಾನವಾಗಿತ್ತು. ಬಿಜೆಪಿ ಪಕ್ಷ ಸತತ ಮೂರು ಬಾರಿ ಆಯ್ಕೆಯಾಗಿತ್ತು. ಆರು ದಶಕದಲ್ಲಿ ಈ ರೀತಿ ಸತತ ಮೂರನೇ ಬಾರಿ ಆಯ್ಕೆ ಆಗಿದ್ದು ಇದೇ ಮೊದಲು. ಇದು ನರೇಂದ್ರ ಮೋದಿ ನಾಯಕತ್ವದಲ್ಲಿ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದು ಕೇಂದ್ರ ರೈಲ್ವೆ ಸಚಿವ ಡಾ. ವೈಷ್ಣವ್ ಅವರು ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಹೇಳಿದರು.
ಮೋದಿ ಪ್ರಧಾನಿಯಾದಾಗ ಭಾರತ 10ನೇ ಅತಿದೊಡ್ಡ ದೇಶ ಎನಿಸಿತ್ತು. ಭಾರತವನ್ನು ಐದು ಫ್ರಜೈಲ್ ಆರ್ಥಿಕತೆಯಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಒಂದು ದಶಕದ ಅವಧಿಯಲ್ಲಿ ಭಾರತದ ಜಿಡಿಪಿ 5ನೇ ಅತಿದೊಡ್ಡದಾಗಿದೆ. ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ. ಮುಂದಿನ ಹಲವು ವರ್ಷಗಳಲ್ಲಿ ಭಾರತವು ಶೇ. 6ರಿಂದ 8ರ ದರದಲ್ಲಿ ಬೆಳವಣಿಗೆ ಹೊಂದುತ್ತಾ ಹೋಗುತ್ತದೆ. ಭಾರತವು ಹೂಡಿಕೆ ಮೇಲೆ ಗಮನ ಹರಿಸಿದೆ. ಜಿಡಿಪಿ ಬೆಳವಣಿಗೆ ದರವು ಸಾಲಕ್ಕಿಂತ ಹೆಚ್ಚು ಇರುವುದು ಗಮನಾರ್ಹ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:08 pm, Thu, 21 November 24