ನೈಜರ್ ದೇಶದಲ್ಲಿ ಭೀಕರ ಸಾಮೂಹಿಕ ಹತ್ಯಾಕಾಂಡ; ಬೈಕ್ನಲ್ಲಿ ಬಂದವರು ಗುಂಡು ಹಾರಿಸಿ ಕೊಂದವರ ಸಂಖ್ಯೆ 137
ನೈಜರ್ ದೇಶದಲ್ಲಿನ ಮಾಲಿ ಗಡಿಯ ಬಳಿ ಹಳ್ಳಿಗಳ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, 137 ಮಂದಿಯನ್ನು ಕೊಂದು ಹಾಕಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ದಾಳಿ ಇದಾಗಿದೆ.
ಚಲನೆ ಅಂತ ಇದ್ದ ಎಲ್ಲದರ ಮೇಲೂ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಹಳ್ಳಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಮುಂದುವರಿದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಗಾಯಾಳುಗಳು. ಅವರು ಹೇಳುವ ವಿವರಗಳು ಕೇಳಿಸಿಕೊಳ್ಳುತ್ತಿದ್ದರೆ ನೈಜರ್ ದೇಶದಲ್ಲಿ ನಡೆದ ಈ ಭೀಕರ ಹತ್ಯಾಕಾಂಡ ಎಂಥವರ ಎದೆ ಝಲ್ಲೆನ್ನಿಸುವಂತೆ ಮಾಡುತ್ತದೆ. ನೈಜರ್ ಹಾಗೂ ಮಾಲಿಯ ಗಡಿಯಲ್ಲಿನ ಹಳ್ಳಿಗಳ ಮೇಲೆ ಸರಣಿ ದಾಳಿ ಮಾಡಿದ ಬಂದೂಕುಧಾರಿಗಳು ಕನಿಷ್ಠ 137 ಮಂದಿಯನ್ನು ಕೊಂದಿದ್ದಾರೆ. ಈ ಹಂತಕರು ಮೋಟಾರ್ಬೈಕ್ನಲ್ಲಿ ಬಂದಿದ್ದು, ಆಫ್ರಿಕಾ ಖಂಡದಲ್ಲಿ ಬರುವ ನೈಜರ್ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಪೈಶಾಚಿಕ ದಾಳಿ ಇದಾಗಿದೆ. ನೈಜರ್ನಲ್ಲಿ ಈಚೆಗೆ ಮೊಹಮದ್ ಬೆಜೋಮ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಆ ನಂತರ ದಾಳಿ ಪ್ರಕರಣಗಳಲ್ಲಿ ಹೆಚ್ಚಾಗಿದೆ. ಅದರ ಮಧ್ಯೆ ಈಗಿನ ಸಾಮೂಹಿಕ ಹತ್ಯಾಕಾಂಡ ವರದಿ ಆಗಿದೆ.
ಸರ್ಕಾರದ ವಕ್ತಾರ ಅಬ್ದೌರಹಮನೆ ಝಕರಿಯಾ ಸೋಮವಾರ ಈ ಬಗ್ಗೆ ಮಾತನಾಡಿದ್ದಾರೆ. ಭಾನುವಾರದಂದು ಈ ಸಾಮೂಹಿಕ ಹತ್ಯಾಕಾಂಡ ನಡೆದಿದೆ. ನೈಜರ್ನ ಸಾಂವಿಧಾನಿಕ ಕೋರ್ಟ್ ಅದೇ ದಿನ ಅಧಿಕೃತವಾಗಿ ಬೆಜೋಮ್ ಅವರನ್ನು ಅಧ್ಯಕ್ಷ ಎಂದು ಘೋಷಣೆ ಮಾಡಿತ್ತು. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ನೈಜರ್ನಲ್ಲಿ ಚುನಾವಣೆ ನಡೆದಿತ್ತು. ಏಪ್ರಿಲ್ 2ನೇ ವಾರದಲ್ಲಿ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ನೆರೆಯ ಮಾಲಿ ದೇಶದಲ್ಲಿನ ಇಸ್ಲಾಮಿಕ್ ನುಸುಳುಕೋರರ ದಾಳಿಗೆ ಸಿಲುಕಿ ನೈಜರ್ ನಲುಗಿ ಹೋಗುತ್ತಿದೆ.
ಕನಿಷ್ಠ 66 ಮಂದಿ ಸಾವನ್ನಪ್ಪಿದರು ಕಳೆದ ಜನವರಿಯಲ್ಲಿ ನೈಜರ್ನ ಪಶ್ವಿಮದಲ್ಲಿ ಇರುವ ಹಳ್ಳಿಗಳ ಮೇಲೆ ದಾಳಿ ನಡೆಸಿ, ಕನಿಷ್ಠ 100 ಜನರನ್ನು ಕೊಲ್ಲಲಾಗಿತ್ತು. ಅದ ದಿನದಂದು, ಫೆಬ್ರವರಿ 21ಕ್ಕೆ ಎರಡನೇ ಸುತ್ತಿನ ಅಧ್ಯಕ್ಷೀಯ ಚುನಾವಣೆ ನಡೆಯುವುದಾಗಿ ನೈಜರ್ನಲ್ಲಿ ಘೋಷಿಸಲಾಯಿತು. ಅದಕ್ಕೆ ಒಂದು ವಾರಕ್ಕೆ ಮುಮಚೆ ನಡೆದ ದಾಳಿಯಲ್ಲಿ ಕನಿಷ್ಠ 66 ಮಂದಿ ಸಾವನ್ನಪ್ಪಿದರು.
ನೈಜರ್ನ ಹಳ್ಳಿಗಳ ಮೇಲೆ ನಡೆದ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಕೊಂಡಿಲ್ಲ. ನಾಗರಿಕರನ್ನು ಹತ್ಯೆ ಮಾಡಿದಾಗ ಅಪರೂಪಕ್ಕೆ ಇಸ್ಲಾಮಿಕ್ ಭಯೋತ್ಪಾದಕರು ಕೃತ್ಯದ ಹೊಣೆ ಹೊರುತ್ತಾರೆ. ನೈಜರ್ನ ನೆರೆ ದೇಶಗಳಾದ ಬುರ್ಕಿನಾ ಫಾಸೋ ಮತ್ತು ಮಾಲಿಯು ಕ್ರೂರ ಭಯೋತ್ಪಾದಕರಿಂದ ತುಂಬಿಹೋಗಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆ, ಅಲ್ ಕೈದಾ ಸೇರಿ ಹಲವು ಭಯೋತ್ಪಾದಕ ಸಂಘಟನೆಗಳ ದಾಳಿಯಿಂದ ಸಾವಿರಾರು ಜನರ ಹತ್ಯೆಯಾಗಿದೆ. ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ತುಕಡಿಗಳು ಇದ್ದ ಹೊರತಾಗಿಯೂ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ.
ತಿಲ್ಲಬೆರಿ ಭಾಗದಲ್ಲಿ ಜಿಹಾದಿಗಳು ಮಾತ್ರ ಸಕ್ರಿಯರಾಗಿಲ್ಲ. ಅದರ ಜತೆಗೆ ಭಯೋತ್ಪಾದನೆ ವಿರುದ್ಧ ಹೋರಾಡುವ ಗುಂಪುಗಳು ಸಹ ಸಶಸ್ತ್ರ ಹೋರಾಟವನ್ನೇ ಮಾಡುತ್ತಿವೆ. ಈ ಕಾರಣಕ್ಕೆ ನೈಜರ್- ಮಾಲಿ ಗಡಿಯಲ್ಲಿ ಅಂತರ್ಧರ್ಮೀಯ ಉದ್ವಿಗ್ನತೆ ಏರ್ಪಟ್ಟಿದೆ.
ಇದನ್ನೂ ಓದಿ: ಮುಂಬೈ ದಾಳಿಗೆ ಆರ್ಥಿಕ ನೆರವು ಒದಗಿಸಿದ ಭಯೋತ್ಪಾದಕ ಲಖ್ವಿಗೆ 15 ವರ್ಷ ಶಿಕ್ಷೆ ವಿಧಿಸಿದ ಪಾಕ್