ನ್ಯೂಯಾರ್ಕ್​ನಲ್ಲಿ ₹ 19 ಕೋಟಿ ಮೌಲ್ಯದ ವಂಚನೆ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2020 | 6:30 PM

41ರ ಹರೆಯದ ನೆಹಾಲ್ ವಿರುದ್ಧ ನ್ಯೂಯಾರ್ಕ್ ಸುಪ್ರೀಂಕೋರ್ಟ್​​ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಮ್ಯಾನ್​ಹಟನ್ ಜಿಲ್ಲಾ ಅಟರ್ನಿ ಸೈರಸ್ ವಾನ್ಸ್ ಜೂನಿಯರ್ ಹೇಳಿದ್ದಾರೆ.

ನ್ಯೂಯಾರ್ಕ್​ನಲ್ಲಿ ₹ 19 ಕೋಟಿ ಮೌಲ್ಯದ ವಂಚನೆ: ನೀರವ್ ಮೋದಿ ಸೋದರ ನೆಹಾಲ್ ವಿರುದ್ಧ ಆರೋಪ
ನೆಹಾಲ್ ಮೋದಿ
Follow us on

ನ್ಯೂಯಾರ್ಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪ ಹೊತ್ತ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರ ಕಿರಿಯ ಸಹೋದರ ನೆಹಾಲ್ ಮೋದಿ ವಿರುದ್ಧ ವಜ್ರ ವಂಚನೆ ಆರೋಪ ದಾಖಲಾಗಿದೆ. ಅಮೆರಿಕದ ಮ್ಯಾನ್​ಹಟನ್​ನಲ್ಲಿರುವ ಜಗತ್ತಿನ ಅತಿ ದೊಡ್ಡ ವಜ್ರ ಕಂಪನಿಗೆ 2.6 ದಶಲಕ್ಷ ಡಾಲರ್ (₹19.13 ಕೋಟಿ) ಮೌಲ್ಯದ ವಂಚನೆ ನಡೆಸಿದ್ದಾರೆ ಎಂಬುದು ಆರೋಪ.

41ರ ಹರೆಯದ ನೆಹಾಲ್ ವಿರುದ್ಧ ನ್ಯೂಯಾರ್ಕ್ ಸುಪ್ರೀಂಕೋರ್ಟ್​​ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಮ್ಯಾನ್​ಹಟನ್ ಜಿಲ್ಲಾ ಅಟರ್ನಿ ಸೈರಸ್ ವಾನ್ಸ್ ಜೂನಿಯರ್ ಹೇಳಿದ್ದಾರೆ.

‘ವಜ್ರಗಳು ಎಂದೆಂದಿಗೂ ವ್ರಜವೇ. ಆದರೆ ಇಂಥ ದೋಷಪೂರ್ಣ ಸಂಚು ಮಾತ್ರ ಹಿಂದೆಂದೂ ಇರಲಿಲ್ಲ. ಈಗ ಮೋದಿಯವರು ನ್ಯೂಯಾರ್ಕ್ ಸುಪ್ರೀಂಕೋರ್ಟ್​ನಲ್ಲಿ ಆರೋಪ ಎದುರಿಸಲಿದ್ದಾರೆ. ಮ್ಯಾನ್​​ಹಟನ್​ನಲ್ಲಿ ವಜ್ರದ ವ್ಯಾಪಾರಕ್ಕೆ ಐತಿಹಾಸಿಕ ಮಹತ್ವವಿದೆ. ಗ್ರಾಹಕರಿಗೆ ವಂಚನೆ ನಡೆಸಲು ನಮ್ಮ ಕಚೇರಿ ಅನುಮತಿಸುವುದಿಲ್ಲ’ ಎಂದು ವಾನ್ಸ್ ಹೇಳಿಕೆ ನೀಡಿದ್ದಾರೆ.

ನೋಬಲ್ ಟೈಟನ್ ಹೋಲ್ಡಿಂಗ್ಸ್​ನ ಮಾಜಿ ಸದಸ್ಯ ನೀರವ್ ಮೋದಿ ಮಾರ್ಚ್ 2015 ಮತ್ತು ಆಗಸ್ಟ್ 2015ರ ನಡುವಿನ ಅವಧಿಯಲ್ಲಿ ಅಮೆರಿಕದಲ್ಲಿರುವ ಎಲ್​​ಎಲ್​ಡಿ ಡೈಮಂಡ್ಸ್​​ಗೆ ನಕಲಿ ದಾಖಲೆ ಸಲ್ಲಿಸಿ 2.6 ಕೋಟಿ ಅಮೆರಿನ್ ಡಾಲರ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಜ್ರ ಉದ್ಯಮದಲ್ಲಿ ಖ್ಯಾತಿ ಗಳಿಸಿರುವ ಕುಟುಂಬದಿಂದ ಬಂದ ನೆಹಾಲ್ ಅವರು ಉದ್ಯಮಿಗಳ ಮೂಲಕ ಎಲ್​​ಎಲ್​​ಡಿ ಡೈಮಂಡ್ಸ್ ನ ಅಧ್ಯಕ್ಷರಿಗೆ ಪರಿಚಿತರಾಗಿದ್ದರು.

ಮಾರ್ಚ್ 2015ರಲ್ಲಿ ನೆಹಾಲ್ ಮೋದಿ ತಾನು ಕೋಸ್ಟ್ ಕೊ ಹೋಲ್ ಸೇನ್ ಕಾರ್ಪೊರೇಷನ್ ಅಂಗ ಎಂದು ಪರಿಚಯ ಮಾಡಿಕೊಂಡು ನ್ಯೂಯಾರ್ಕ್ ಮೂಲದ ವಜ್ರ ಕಂಪನಿಯಿಂದ 8 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ವಜ್ರವನ್ನು ಕೋಸ್ಟ್ ಕೋ ಮುಂದೆ ಪ್ರಸ್ತುತಪಡಿಸಲು ಬೇಕು ಎಂದು ಕೇಳಿಕೊಂಡಿದ್ದರು.

ಎಲ್ಎಲ್​​ಡಿ ವಜ್ರಗಳನ್ನು ಒದಗಿಸಿದ ನಂತರ ಕೋಸ್ಟ್ ಕೋ ಕಂಪನಿಯು ಅದೆಲ್ಲವನ್ನೂ ಖರೀದಿಸಲು ತೀರ್ಮಾನಿಸಿದೆ ಎಂದು ಸುಳ್ಳು ಹೇಳಿದ್ದರು. ಹಾಗಾಗಿ ಅಷ್ಟೊಂದು ವಜ್ರಗಳನ್ನು ಸಾಲವಾಗಿ ನೀಡಿದ ಎಲ್​​ಎಲ್​​ಡಿ 90 ದಿನಗಳೊಳಗೆ ಪೂರ್ತಿ ಹಣ ಪಾವತಿಸುವಂತೆ ಹೇಳಿತ್ತು. ಆದರೆ ನೆಹಾಲ್ ಮೋದಿ ಆ ವಜ್ರಗಳ ಮೇಲೆ ‘ಮೋಡೆಲ್ಸ್ ಕೊಲೆಟ್ರಲ್’ ಕಂಪನಿಯಲ್ಲಿ ಅಡಮಾನ ಸಾಲ ಪಡೆದುಕೊಂಡಿದ್ದರು ಮ್ಯಾನ್​​ಹಟನ್ ಜಿಲ್ಲಾ ಅಟರ್ನಿ ಕಚೇರಿ ಹೇಳಿದೆ.

ಏಪ್ರಿಲ್ ಮತ್ತು ಮೇ 2015ರ ನಡುವಿನ ಅವಧಿಯಲ್ಲಿ ನೆಹಾಲ್ ಎಲ್​​ಎಲ್​​ಡಿಗೆ ಮೂರು ಬಾರಿ ಹೋಗಿ ಕೋಸ್ಟ್ ಕೋ ಗೆ ಮಾರಲು 1 ದಶಲಕ್ಷ ಅಮೆರಿಕನ್ ಡಾಲರ್ ಗಿಂತಲೂ ಹೆಚ್ಚು ಮೌಲ್ಯದ ವಜ್ರಗಳನ್ನು ಪಡೆದಿದ್ದರು. ಎಲ್​​ಎಲ್​​ಡಿಗೆ ಹಲವಾರು ಬಾರಿ ಪಾವತಿ ಮಾಡಿದ್ದರೂ ಹೆಚ್ಚಿನ ಆದಾಯವನ್ನು ವೈಯಕ್ತಿಕ ಬಳಕೆ ಮತ್ತು ಇತರ ವ್ಯವಹಾರಗಳಿಗಾಗಿ ಬಳಿಸಿದ್ದರು.

ತನ್ನ ವಂಚನೆ ಕೃತ್ಯಗಳನ್ನು ಮರೆ ಮಾಚುವುದಕ್ಕಾಗಿ ಕೋಸ್ಟ್ ಕೋ ಹಣ ಪಾವತಿಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಹೇಳಿ, ಹಣ ಪಾವತಿ ಮಾಡುವುದಾಗಿ ಭರವಸೆ ನೀಡುತ್ತಲೇ ಬಂದಿದ್ದರು. 2015 ಆಗಸ್ಟ್ ತಿಂಗಳಲ್ಲಿ ನೆಹಾಲ್ ಮತ್ತೊಮ್ಮೆ ಎಲ್​​ಎಲ್​​ಡಿಗೆ ಬಂದು ಕೋಸ್ಟ್ ಕೊ ಮತ್ತಷ್ಟು ವಜ್ರಗಳನ್ನು ಖರೀದಿಸಲು ಬಯಸಿದೆ ಎಂದು ಹೇಳಿದ್ದಾರೆ. ಹೆಚ್ಚುವರಿ ವಜ್ರಗಳನ್ನು ಕೊಟ್ಟ ಎಲ್​​ಎಲ್​​ಡಿಗೆ ಸಂಸ್ಥೆ ತಮ್ಮ ಅನುಮತಿ ಇಲ್ಲದೆ ವಜ್ರಗಳನ್ನು ಮಾರಾಟ ಮಾಡುವ ಅಧಿಕಾರ ತಮಗಿಲ್ಲ ಎಂಬ ನಿಯಮ ವಿಧಿಸಿತ್ತು.
ಆ ಹೊತ್ತಿನಲ್ಲಿ ನೆಹಾಲ್ ಬಾಕಿ ಪಾವತಿಸಬೇಕಾದ ಮೊತ್ತ 1 ದಶಲಕ್ಷ ಅಮೆರಿಕನ್ ಡಾಲರ್​ನಷ್ಟಾಗಿತ್ತು. ಹಾಗಾಗಿ ಮುಂಗಡವಾಗಿ ಸ್ವಲ್ಪ ಹಣ ಪಾವತಿಸುವಂತೆ ಹೇಳಿತ್ತು.

ನೆಹಾಲ್ ಹೆಚ್ಚುವರಿ ಸಾಲಕ್ಕಾಗಿ ‘ಮೋಡೆಲ್ಲ್ ಲೋನ್ಸ್’ ಸಂಪರ್ಕಿಸಿದ್ದರು. ಎಲ್​​ಎಲ್​​ಡಿಯಿಂದ ವಜ್ರ ಪಡೆದ ಅವರು ಅದರಲ್ಲಿ ಬಹುತೇಕ ವಜ್ರಗಳನ್ನು ಅಡವಿಟ್ಟು ಎರಡು ಪ್ರತ್ಯೇಕ ಸಾಲ ಪಡೆದಿದ್ದರು. ಉಳಿದ ವಜ್ರಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರು.

ಈ ವಂಚನೆಯನ್ನು ಪತ್ತೆ ಹಚ್ಚಿದ ಎಲ್​​ಎಲ್​​ಡಿ ತಕ್ಷಣವೇ ಬಾಕಿ ಉಳಿದಿರುವ ಹಣವನ್ನು ಪಾವತಿ ಮಾಡಿ ಇಲ್ಲವೇ ವಜ್ರಗಳನ್ನು ಮರಳಿಸಿ ಎಂದು ಹೇಳಿತ್ತು. ಆದರೆ ಮೋದಿ ಆ ವಜ್ರಗಳನ್ನು ಮಾರಿ, ಅಡವಿಟ್ಟು ಅದರಲ್ಲಿ ಗಳಿಸಿದ ಹಣವನ್ನು ಖರ್ಚು ಮಾಡಿದ್ದರು. ಈ ವಂಚನೆ ಬಗ್ಗೆಎಲ್​​ಎಲ್​​ಡಿ ಮ್ಯಾನ್​​ಹಟ್ಟನ್ ಜಿಲ್ಲಾ ಅಟರ್ನಿ ಕಚೇರಿಗೆ ದೂರು ನೀಡಿತ್ತು.

ವಿಚಾರಣೆ ವೇಳೆ ನೆಹಾಲ್ ಪರ ವಾದಿಸಿದ ವಕೀಲ ರೋಜರ್ ಬೆರ್ನ್ ಸ್ಟೈನ್ ಇದೊಂದು ವಾಣಿಜ್ಯ ವಿವಾದ. ನೆಹಾಲ್ ತಪ್ಪಿತಸ್ಥನಲ್ಲ ಎಂದು ಹೇಳಿರುವುದಾಗಿ ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ನೀರವ್​ ಮೋದಿಗೆ ಸತತ 6ನೇ ಬಾರಿ ಹಿನ್ನಡೆ: ಲಂಡನ್​ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ