ನವದೆಹಲಿ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು (Srilanka Economic Crisis) ಎದುರಾಗಿರುವುದು ಗೊತ್ತೇ ಇದೆ. ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟದಿಂದಾಗಿ 1 ಲೀಟರ್ ಪೆಟ್ರೋಲ್ಗೆ 420 ರೂ., ಡೀಸೆಲ್ಗೆ 400 ರೂ. ಆಗಿದೆ! ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದ್ದು, ಈ ಮೂಲಕ ಶ್ರೀಲಂಕಾದಲ್ಲಿ ಜನರು ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರಾಂತ್ಯದವರೆಗೂ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿತ್ತು. ಇದೀಗ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ಕೂಡ ಶ್ರೀಲಂಕಾ ರೀತಿಯದ್ದೇ ಪರಿಸ್ಥಿತಿ ಎದುರಾಗಿದೆಯಾ? ಎಂಬ ಚರ್ಚೆಗಳು ಶುರುವಾಗಿವೆ. ಈ ಚರ್ಚೆಯನ್ನು ಹುಟ್ಟುಹಾಕಿದ್ದು ಪಾಕಿಸ್ತಾನದ (Pakistan Ecnomic Crisis) ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ (Mohammad Hafeez) ಅವರ ಒಂದು ಟ್ವೀಟ್.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ ಟ್ವೀಟ್ನಲ್ಲಿ ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳನ್ನು ಟ್ಯಾಗ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಶ್ರೀಲಂಕಾದಂತೆ ಪಾಕಿಸ್ತಾನದಲ್ಲೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆಯಾ? ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
No Petrol available in any petrol station in Lahore??? No cash available in ATM machines?? Why a common man have to suffer from political decisions. @ImranKhanPTI @CMShehbaz @MaryamNSharif @BBhuttoZardari
— Mohammad Hafeez (@MHafeez22) May 24, 2022
‘ಲಾಹೋರ್‌ನ ನಿಲ್ದಾಣದಲ್ಲಿ ಪೆಟ್ರೋಲ್ ಇಲ್ಲ, ಎಟಿಎಂನಲ್ಲಿ ಹಣವಿಲ್ಲ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಇಂದು ಪೋಸ್ಟ್ ಮಾಡಿದ ಟ್ವೀಟ್ ಅಲ್ಲಿನ ಆರ್ಥಿಕತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವರ್ಷ ಮಾರ್ಚ್ 10ರಂದು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ಪಾಕಿಸ್ತಾನದ ಆಡಳಿತದಲ್ಲಿ ಬದಲಾವಣೆಗಳು ಉಂಟಾದವು.
ಇದನ್ನೂ ಓದಿ: Sri Lanka Crisis: ಶ್ರೀಲಂಕಾದಲ್ಲಿ ಪೆಟ್ರೋಲ್ ಖಾಲಿ; ಆರ್ಥಿಕ ಬಿಕ್ಕಟ್ಟು ಉಲ್ಬಣ, ಏರ್ಲೈನ್ಸ್ ಮಾರಾಟಕ್ಕೆ ಮುಂದಾದ ಪ್ರಧಾನಿ
ಏಪ್ರಿಲ್ 10ರಂದು ಪಾಕಿಸ್ತಾನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ವಿಶ್ವಾಸ ಮತಯಾಚನೆ ವೇಳೆ ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸಲು ವಿಫಲರಾದ್ದರಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಈ ಮೂಲಕ ಇಮ್ರಾನ್ ಖಾನ್ ಅವಿಶ್ವಾಸ ಮತದ ಮೂಲಕ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಪಾಕಿಸ್ತಾನದ ಮೊದಲ ಪ್ರಧಾನ ಮಂತ್ರಿಯಾದರು.
ವಿಶ್ವಾಸಮತ ಯಾಚನೆಯ ನಂತರ ವಿರೋಧ ಪಕ್ಷಗಳಿಂದ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲಾಗಿತ್ತು. ಅವರು 2022ರ ಏಪ್ರಿಲ್ 11 ರಂದು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಬಲ್ಲ ಮೂಲಗಳ ಪ್ರಕಾರ, ಪಾಕಿಸ್ತಾನ ಇತ್ತೀಚೆಗೆ ದೀರ್ಘಾವಧಿಯ ಅಸ್ಥಿರತೆಯತ್ತ ಸಾಗುತ್ತಿದೆ. ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಪಾಕಿಸ್ತಾನದ ರೂಪಾಯಿಯ ಮೌಲ್ಯವೂ ಕುಸಿತಯುತ್ತಿದೆ. ಪಾಕಿಸ್ತಾನದ ಸೇನೆಯು ತಟಸ್ಥ ನಿಲುವುಗಳನ್ನು ಅಳವಡಿಸಿಕೊಂಡಿದೆ.
ಇದನ್ನೂ ಓದಿ: ಜನರ ಗಮನ ಬೇರೆಡೆಗೆ ಸೆಳೆಯುವುದರಿಂದ ಸತ್ಯಗಳು ಬದಲಾಗುವುದಿಲ್ಲ, ಭಾರತವು ಶ್ರೀಲಂಕಾದಂತೆ ಕಾಣುತ್ತದೆ: ರಾಹುಲ್ ಗಾಂಧಿ
ಇದರ ಮಧ್ಯೆ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನದಲ್ಲಿ ಸಾಮಾನ್ಯ ವ್ಯಕ್ತಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳನ್ನು ಟ್ಯಾಗ್ ಮಾಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎದ್ದಿರುವ ಸುದ್ದಿಗಳಿಗೆ ಇಂದು ಪಾಕ್ ಮಾಜಿ ಕ್ರಿಕೆಟಿಗ ಮಾಡಿರುವ ಟ್ವೀಟ್ ಪುಷ್ಠಿ ನೀಡುವಂತಿದೆ.
“ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಲಭ್ಯವಿಲ್ಲವೇ? ಎಟಿಎಂ ಯಂತ್ರಗಳಲ್ಲಿ ನಗದು ಲಭ್ಯವಿಲ್ಲವೇ? ಸಾಮಾನ್ಯ ಜನರು ರಾಜಕೀಯ ನಿರ್ಧಾರಗಳಿಂದ ಏಕೆ ಬಳಲಬೇಕಾಗಿದೆ?” ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಟ್ವಿಟರ್‌ನಲ್ಲಿ ಬರೆದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪ್ರಸ್ತುತ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Wed, 25 May 22