ಆರ್ಥಿಕ ಬಿಕ್ಕಟ್ಟಿನತ್ತ ಪಾಕಿಸ್ತಾನ: ಲಾಹೋರ್​ನಲ್ಲಿ ಪೆಟ್ರೋಲ್ ಸಿಗ್ತಿಲ್ಲ, ಎಟಿಎಂಗಳಲ್ಲಿ ನಗದು ಖಾಲಿ ಎಂದ ಕ್ರಿಕೆಟರ್ ಮೊಹಮದ್ ಹಫೀಜ್

ಶ್ರೀಲಂಕಾ ಮಾದರಿಯಲ್ಲಿಯೇ ಪಾಕಿಸ್ತಾನವೂ ದೀರ್ಘಾವಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿನತ್ತ ಪಾಕಿಸ್ತಾನ: ಲಾಹೋರ್​ನಲ್ಲಿ ಪೆಟ್ರೋಲ್ ಸಿಗ್ತಿಲ್ಲ, ಎಟಿಎಂಗಳಲ್ಲಿ ನಗದು ಖಾಲಿ ಎಂದ ಕ್ರಿಕೆಟರ್ ಮೊಹಮದ್ ಹಫೀಜ್
ಪಾಕಿಸ್ತಾನದ ಕರೆನ್ಸಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 26, 2022 | 9:04 AM

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ (Pakistan Economy Crisis). ರಾಜಕೀಯ ಅಸ್ಥಿರತೆಯತ್ತ ಮುಖಮಾಡಿರುವ ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರ ಶೀಘ್ರದಲ್ಲಿಯೇ ಜವಾಬ್ದಾರಿಯುತ ನಿರ್ಣಯಗಳನ್ನು ತೆಗೆದುಕೊಳ್ಳದಿದ್ದರೆ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಶ್ರೀಲಂಕಾ ಮಾದರಿಯಲ್ಲಿಯೇ ದೀರ್ಘಾವಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಇಷ್ಟು ದಿನ ಅಂಕಿಅಂಶಗಳನ್ನು ಎದುರಿಗಿಟ್ಟು ಅರ್ಥಶಾಸ್ತ್ರಜ್ಞರು ಮಾಡುತ್ತಿದ್ದ ಆರ್ಥಿಕ ಬಿಕ್ಕಟ್ಟಿನ ವಿಶ್ಲೇಷಣೆಗೆ ಜನಸಾಮಾನ್ಯರ ಉದಾಹರಣೆಯ ಮೂಲಕ ಪುಷ್ಟಿ ಒದಗಿಸಿದ್ದಾರೆ ಕ್ರಿಕೆಟ್ ಆಟಗಾರ ಮೊಹಮದ್ ಹಫೀಜ್ (Mohammad Hafeez). ಆಲ್​ರೌಂಡರ್ ಹಫೀಜ್ ಈ ಮೊದಲು ಪಾಕಿಸ್ತಾನದಲ್ಲಿ ಕ್ರಿಕೆಟ್ ಸುಧಾರಣೆಗಾಗಿ ದನಿಎತ್ತಿದ್ದರು. ಜನರ ಸಮಸ್ಯೆಗಳ ಕುರಿತು ಟ್ವೀಟ್ ಮಾಡಿರುವ ಅವರು ಹಲವು ರಾಜಕಾರಿಣಿಗಳನ್ನು ಟ್ಯಾಗ್ ಮಾಡಿದ್ದಾರೆ.

‘ಲಾಹೋರ್​ನ ಯಾವುದೇ ಬಂಕ್​ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂಗಳಲ್ಲಿ ನಗದು ಬರುತ್ತಿಲ್ಲ. ರಾಜಕೀಯ ನಿರ್ಧಾರಗಳಿಂದ ಸಾಮಾನ್ಯ ಜನರೇಕೆ ಕಷ್ಟ ಅನುಭವಿಸಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಶೆಹಬಾಜ್ ಷರೀಫ್ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಆರ್ಥಿಕ ಸ್ಥಿರತೆ ಮೂಡಿಸಬೇಕಾದ ಸವಾಲನ್ನೂ ಎದುರಿಸುತ್ತಿದ್ದಾರೆ.

ಕ್ರಿಕೆಟ್​ನ ವೈವಿಧ್ಯಮಯ ಪ್ರಕಾರಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಹಫೀಜ್ 2017ರಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದವರು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 12,000 ರನ್ ಗಳಿಸಿದ್ದ ಅವರು 250ಕ್ಕೂ ಹೆಚ್ಚು ವಿಕೆಟ್​ಗಳನ್ನು ಪಡೆದವರು. ಪಾಕಿಸ್ತಾನದ ತಂಡದ ಕ್ಯಾಪ್ಟನ್ ಆಗಿಯೂ ಒಂದಿಷ್ಟು ಸಮಯ ಆಡಿದ್ದರು.