ಭಯೋತ್ಪಾದನೆ ವಿರುದ್ಧ ದ್ವಂದ್ವ ನಿಲುವಿಗೆ ಅವಕಾಶವಿಲ್ಲ; ಯುಕೆಯಲ್ಲಿ ಪಾಕ್ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಉಗ್ರರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಯುಕೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಗ್ರಗಾಮಿಗಳು ಪ್ರಜಾಪ್ರಭುತ್ವ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ. "ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗೆ ಯಾವುದೇ ಅವಕಾಶವಿಲ್ಲ" ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ದ್ವಂದ್ವ ನಿಲುವಿಗೆ ಅವಕಾಶವಿಲ್ಲ; ಯುಕೆಯಲ್ಲಿ ಪಾಕ್ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ
Pm Narendra Modi

Updated on: Jul 24, 2025 | 6:07 PM

ಲಂಡನ್, ಜುಲೈ 24: ಯುಕೆ ಭೇಟಿ ವೇಳೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi in UK) ಪಾಕಿಸ್ತಾನವನ್ನು (Pakistan) ಪರೋಕ್ಷವಾಗಿ ಟೀಕಿಸಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ “ದ್ವಂದ್ವ ನೀತಿಗಳಿಗೆ” ಜಗತ್ತಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಲಂಡನ್‌ನಲ್ಲಿ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗಿನ ಮಾಧ್ಯಮಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ ಭಾರತಕ್ಕೆ ನೀಡಿದ ಬೆಂಬಲಕ್ಕಾಗಿ ಯುಕೆ ಪ್ರಧಾನಿ ಸ್ಟಾರ್ಮರ್ ಅವರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಭದ್ರತಾ ಸಂಸ್ಥೆಗಳು ಆರ್ಥಿಕ ಅಪರಾಧಿಗಳ ಹಸ್ತಾಂತರದಂತಹ ವಿಷಯಗಳಲ್ಲಿ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.

ಇದನ್ನೂ ಓದಿ: Video: ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಕೈಯಲ್ಲಿ ಭಾರತದ ಬಾವುಟ, ಎಲ್ಲೆಲ್ಲೂ ಮೊಳಗಿದ ಜೈಕಾರ


“ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗಳಿಗೆ ಸ್ಥಳವಿಲ್ಲ. ಉಗ್ರಗಾಮಿ ಸಿದ್ಧಾಂತಗಳನ್ನು ಹೊಂದಿರುವ ಶಕ್ತಿಗಳು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿ ನೀಡುವುದಿಲ್ಲ” ಎಂದು ಮೋದಿ ಹೇಳಿದ್ದಾರೆ.


ಕುತೂಹಲಕಾರಿಯಾಗಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಪ್ರಯತ್ನಿಸಿದ ಒಂದು ದಿನದ ನಂತರ ಪ್ರಧಾನಿ ಮೋದಿ ಅವರ ಈ ಹೇಳಿಕೆ ಬಂದಿದೆ. ಎಲ್ಲಾ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪಾಕಿಸ್ತಾನ ಭಾರತದ ಜೊತೆ “ಅರ್ಥಪೂರ್ಣ ಸಂವಾದ” ನಡೆಸಲು ಸಿದ್ಧವಾಗಿದೆ ಎಂದು ಪಾಕ್ ಹೇಳಿತ್ತು. ಬುಧವಾರ ಇಸ್ಲಾಮಾಬಾದ್‌ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದ ಬ್ರಿಟಿಷ್ ಹೈಕಮಿಷನರ್ ಜೇನ್ ಮ್ಯಾರಿಯಟ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೀಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ