
ಇಸ್ಲಾಮಾಬಾದ್, ಜೂನ್ 20: ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್(Operation Sindoor) ಸಮಯದಲ್ಲಿ ಭಾರತದಿಂದ ತಮ್ಮನ್ನು ಕಾಪಾಡುವಂತೆ ಕೇಳಿ ಪಾಕಿಸ್ತಾನವು ಸೌದಿ ರಾಜಕುಮಾರನಿಗೆ ಕರೆ ಮಾಡಿತ್ತು ಎನ್ನುವ ವಿಚಾರ ಬಹಿರಂಗಗೊಂಡಿದೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಖುದ್ದಾಗಿ ಹೇಳಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ತಾವೇ ಮೊದಲು ಮನವಿ ಮಾಡಿದ್ದು ಎಂಬ ಪಾಕ್ ಗುಟ್ಟು ಹೊರಬಿದ್ದಂತಾಗಿದೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡಾಗ, ಸೌದಿ ಅರೇಬಿಯಾ ಪಾಕಿಸ್ತಾನದ ಮನವಿ ಮೇರೆಗೆ ಭಾರತದ ಮನವೊಲಿಸಲು ಬಹಳ ಪ್ರಯತ್ನಿಸಿತ್ತು. ಭಾರತವು ನೂರ್ ಖಾನ್ ವಾಯುನೆಲೆ ಮತ್ತು ಶೋರ್ಕೋಟ್ ವಾಯುನೆಲೆ ಮೇಲೆ ದಾಳಿ ಮಾಡುವ ಮೊದಲು ನಾವು ಭಾರತದ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದೆವು ಎಂದು ಇಶಾಕ್ ದಾರ್ ಒಪ್ಪಿಕೊಂಡಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮೇ 7ರ ರಾತ್ರಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿತ್ತು. ಉಗ್ರರ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.
ಮತ್ತಷ್ಟು ಓದಿ: ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
ಜಿಯೋ ನ್ಯೂಸ್ ಸಂದರ್ಶನದಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್, ಭಾರತ ನೂರ್ ಖಾನ್ ವಾಯುನೆಲೆ ಹಾಗೂ ಶೋರ್ಕೋರ್ಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದಾಗ ಪಾಕಿಸ್ತಾನ ಪ್ರತಿದಾಳಿ ನಡೆಸಲು ಮುಂದಾಯಿತು ಎಂದು ಹೇಳಿದ್ದಾರೆ.
ಇದರರ್ಥ ಭಾರತವು ತ್ವರಿತವಾಗಿ ಕಾರ್ಯನಿರ್ವಹಿಸಿತ್ತು, ಪಾಕಿಸ್ತಾನಕ್ಕೆ ಮತ್ತೆ ದಾಳಿ ಮಾಡುವ ಕುರಿತು ಆಲೋಚಿಸಲೂ ಕೂಡ ಸಮಯ ಕೊಟ್ಟಿರಲಿಲ್ಲ. ಇಂತಹ ತ್ವರಿತ ದಾಳಿಯಿಂದ ಪಾಕಿಸ್ತಾನವು ಆಶ್ಚರ್ಯಚಕಿತವಾಗಿತ್ತು.
ಸಂದರ್ಶನಲ್ಲಿ ಇಶಾಕ್ ದಾರ್ ಮಾತನಾಡಿ, ಭಾರತದ ದಾಳಿ ಬಳಿಕ, ಪ್ರಧಾನಿ ಸಶಸ್ತ್ರ ಪಡೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಧಿಕಾರ ನೀಡಿದರು. ನಾವು ಏನು ಮಾಡಬೇಕೆಂದು ನಿರ್ಧರಿಸಲಾಯಿತು. ನಾವು ನಾಲ್ಕು ಗಂಟೆಗಳ ಬಳಿಕ ದಾಳಿ ಪ್ರಾರಂಭಿಸೆವು. ಆದರೆ ದುರಾದೃಷ್ಟವಶಾತ್, ಭಾರತವು 2.30ಕ್ಕೆ ಮತ್ತೆ ದಾಳಿ ಮಾಡಿತು. ಅದೇ ರಾತ್ರಿ ನೂರ್ ಖಾನ್ ಹಾಗೂ ಶೋರ್ಕೋರ್ಟ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರು.
ಈ ದಾಳಿಯ ಕೇವಲ 45 ನಿಮಿಷಗಳ ನಂತರ, ಸೌದಿ ರಾಜಕುಮಾರ ಫೈಸಲ್ ಬಿನ್ ಸಲ್ಮಾನ್ಗೆ ಕರೆ ಮಾಡಿ,
ಪಾಕಿಸ್ತಾನ ಯುದ್ಧ ನಿಲ್ಲಿಸಲು ತಯಾರಿದೆ ಎಂದು ಜೈಶಂಕರ್ಗೆ ನೀವು ಹೇಳಬಹುದೇ ಎಂದು ಮನವಿ ಮಾಡಲಾಯಿತು. ಭಾರತದೊಂದಿಗಿನ ಉದ್ವಿಗ್ನತೆಯಲ್ಲಿ ಮಧ್ಯಸ್ಥಿಕೆವಹಿಸಲು ಪಾಕಿಸ್ತಾನವು ಅಮೆರಿಕದ ಜತೆಗೆ ಸೌದಿ ಅರೇಬಿಯಾದ ಬಳಿಯೂ ಮನವಿ ಮಾಡಿತ್ತು ಎನ್ನುವ ವಿಚಾರವನ್ನು ಇಶಾಕ್ದಾರ್ ಬಿಚ್ಚಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ