ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ಲಂಡನ್ನಲ್ಲಿ ದಾಳಿ; ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತನಿಂದ ಕೃತ್ಯ
ಇಮ್ರಾನ್ ಖಾನ್ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ಎಂದು ಬಲವಾದ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಮೇಲೆ ಲಂಡನ್ನಲ್ಲಿ ದಾಳಿಯಾಗಿದೆ. ಪಾಕಿಸ್ತಾನದಲ್ಲಿ ಸದ್ಯದ ಮಟ್ಟಿಗೆ ಆಡಳಿತದಲ್ಲಿರುವ ಪಕ್ಷ ಪಾಕಿಸ್ತಾನ್-ಇ-ಇನ್ಸಾಫ್ (ಪಿಟಿಐ-ಇಮ್ರಾನ್ ಖಾನ್ ಪಕ್ಷ)ನ ಕಾರ್ಯಕರ್ತನೊಬ್ಬ ಶರೀಫ್ ಮೇಲೆ ದಾಳಿ ನಡೆಸಿದ್ದಾಗಿ ಪಾಕ್ ಪತ್ರಕರ್ತರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಪ್ರಾರಂಭವಾಗಿದ್ದಾಗಿಯೂ ತಿಳಿಸಲಾಗಿದೆ. ಟ್ವೀಟ್ ಮಾಡಿದ ಪತ್ರಕರ್ತನ ಹೆಸರು ಅಹ್ಮದ್ ರೂನಾನಿ. ಪಾಕಿಸ್ತಾನದ ಫ್ಯಾಕ್ಟ್ ಫೋಕಸ್ ವರದಿಗಾರ. ಈ ದಾಳಿಯಲ್ಲಿ ನವಾಜ್ ಶರೀಫ್ ಪಾರಾಗಿದ್ದಾರೆ, ಆದರೆ ಅವರ ಅಂಗರಕ್ಷಕನಿಗೆ ಗಾಯವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಇತ್ತ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಇಳಿಯುವ ಕಾಲ ಸನ್ನಿಹಿತವಾಗಿದೆ. ಇಂದು ಇನ್ನು ಕೆಲವೇ ಹೊತ್ತಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ನಾನು ಕೊನೇ ಕ್ಷಣದವರೆಗೂ ಹೋರಾಡುತ್ತೇನೆ ಎಂದು ಹಿಂದೆಯೇ ಹೇಳಿರುವ ಇಮ್ರಾನ್ ಖಾನ್, ತಮ್ಮ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವಂತೆ ಪಾಕ್ ಜನರಿಗೆ ಕರೆಕೊಟ್ಟಿದ್ದಾರೆ. ಇದೇ ಘಟನೆ ಬೇರೆ ಯಾವುದೇ ದೇಶಗಳಲ್ಲಿ ನಡೆದಿದ್ದರೆ, ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದರು. ಹಾಗೇ ನೀವು ಕೂಡ ಬೀದಿಗಿಳಿಯಬೇಕು ಎಂದು ಹೇಳಿದ್ದಾರೆ.
ಇನ್ನು ಇಮ್ರಾನ್ ಖಾನ್ ನಂತರ ಪಾಕಿಸ್ತಾನ ಪ್ರಧಾನಿ ಹುದ್ದೆಗೆ ಏರುವುದು ನವಾಜ್ ಶರೀಫ್ ಸಹೋದರ ಶೆಹಬಾಜ್ ಶರೀಫ್ ಎಂದು ಬಲವಾದ ಮೂಲಗಳು ತಿಳಿಸಿವೆ. ಇಂದು ಇಮ್ರಾನ್ ಖಾನ್ ಯಾವ್ ಕಾರಣಕ್ಕೂ ವಿಶ್ವಾಸ ಮತ ಯಾಚನೆಯಲ್ಲಿ ಗೆಲ್ಲುವುದಿಲ್ಲ. ಇವರು ಹುದ್ದೆಯಿಂದ ಇಳಿದ ಬಳಿಕ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಪಕ್ಷದ ಶೆಹಬಾಜ್ ಶರೀಫ್ ಅವರೇ ಹುದ್ದೆಗೆ ಏರಲಿದ್ದಾರೆ ಎಂಬುದು ಪಾಕ್ ಮಾಧ್ಯಮಗಳ ವರದಿ. ಶೆಹಬಾಜ್ ಬಗ್ಗೆ ಇಮ್ರಾನ್ ಖಾನ್ ನಿನ್ನೆ ಟೀಕಿಸಿದ್ದರು. ಶೆಹಬಾಜ್ ಶರೀಫ್ ಖಂಡಿತ ಅಮೆರಿಕದ ಗುಲಾಮನಾಗುತ್ತಾನೆ. ಭಿಕ್ಷುಕರರು ಆಯ್ಕೆ ಮಾಡಿಕೊಳ್ಳಲು ಯೋಗ್ಯರಲ್ಲ ಎಂದು ಶೆಹಬಾಜ್ ಹೇಳುತ್ತಾರೆ. ಅದರ ಅರ್ಥವೇನು? ಬಡವರು ಮತ್ತು ಭಿಕ್ಷುಕರು ಗುಲಾಮರೇ? ಪಾಕಿಸ್ತಾನಕ್ಕೆ ಈ ಗತಿ ತಂದವರು ಯಾರು ಎಂಬುದನ್ನು ಶೆಹಬಾಜ್ ಬಳಿಯೇ ಕೇಳಿ ಎಂದು ಹೇಳುವ ಮೂಲಕ ನವಾಜ್ ಶರೀಫ್ ವಿರುದ್ಧ ವ್ಯಂಗ್ಯ ಮಾಡಿದ್ದರು.
ಇದನ್ನೂ ಓದಿ: ಮತ್ತೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ; IPS ಭಾಸ್ಕರ್ ರಾವ್ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ