ಪಾಕ್ ಸೇನಾ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹಿಸಿದ ಕಂಪ್ಯೂಟರ್ ಇಂಜಿನಿಯರ್ಗೆ 5 ವರ್ಷ ಜೈಲು ಶಿಕ್ಷೆ; ಹೈಕೋರ್ಟ್ ಮೆಟ್ಟಿಲೇರಿದ ಸೇನಾ ನಿವೃತ್ತ ಅಧಿಕಾರಿ
ಹಸನ್ ಅಸ್ಕಾರಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಮರ್ ಜಾವೇದ್ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು.
ಕರಾಚಿ: ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ(General Qamar Javed Bajwa) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದ ಸೇನೆಯ ನಿವೃತ್ತ ಮೇಜರ್ ಜನರಲ್ವೊಬ್ಬರ ಪುತ್ರನಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ (Pakistan Military Court) ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ನಿವೃತ್ತ ಮೇಜರ್ ಜನರಲ್ ಜಫರ್ ಮೆಹ್ದಿ ಅಸ್ಕಾರಿ ಅವರ ಪುತ್ರ ಹಸನ್ ಅಸ್ಕಾರಿ ಇದೀಗ ಜೈಲು ಶಿಕ್ಷೆಗೆ ಗುರಿಯಾದವರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾರ ಅಧಿಕಾರ ಅವಧಿ ವಿಸ್ತರಿಸಿದ್ದನ್ನು ಟೀಕಿಸಿ, ರಾಜೀನಾಮೆ ನೀಡುವಂತೆ ಆಗ್ರಹಿಸಿ ಅವರಿಗೇ ಪತ್ರ ಬರೆದಿದ್ದರು ಎಂದು ಬಿಬಿಸಿ ಉರ್ದು ಮಾಧ್ಯಮ ವರದಿ ಮಾಡಿದೆ.
ಈ ಹಸನ್ ಅಸ್ಕಾರಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕಮರ್ ಜಾವೇದ್ಗೆ ಪತ್ರ ಬರೆದಿದ್ದರು. ಆಡಳಿತ ಅವಧಿ ವಿಸ್ತರಣೆಯಾಗಿದ್ದನ್ನು ಕಟುವಾಗಿ ಟೀಕಿಸಿದ್ದಲ್ಲದೆ, ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದರು. ಜನವರಿಯಲ್ಲಿ ಇಸ್ಲಮಾಬಾದ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಜುಲೈನಿಂದ ಪಾಕಿಸ್ತಾನ ಮಿಲಿಟರಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿದೆ. ಜುಲೈನಲ್ಲಿ ನಡೆದ ವಿಚಾರಣೆ ವೇಳೆ ಪಾಕಿಸ್ತಾನ ಸೇನಾ ನ್ಯಾಯಾಲಯದಲ್ಲಿ ಅಧಿಕಾರಿಯೊಬ್ಬರು ಹಸನ್ ಅಸ್ಕಾರಿಯನ್ನು ಪ್ರತಿನಿಧಿಸಿದ್ದರು. ಸಾಹಿವಾಲ್ನ ಉನ್ನತ ಭದ್ರತೆಯುಳ್ಳ ಜೈಲಿನಲ್ಲಿ ತನ್ನ ಮಗನನ್ನು ಇಟ್ಟಿದ್ದರಿಂದ, ಆತನನ್ನು ಭೇಟಿಯಾಗಲು ತುಂಬ ಕಷ್ಟಪಡುತ್ತಿದ್ದೇನೆ ಎಂದು ಇದೇ ವೇಳೆ ಅಸ್ಕಾರಿ ತಂದೆ ಕೋರ್ಟ್ನಲ್ಲಿ ಹೇಳಿಕೊಂಡಿದ್ದರು.
ಸದ್ಯ ಇದನ್ನೊಂದು ದೇಶದ್ರೋಹ ಪ್ರಕರಣವೆಂದು ಪರಿಗಣಿಸಿ ಸೇನಾ ಕೋರ್ಟ್ ಆದೇಶ ನೀಡಿದೆ. ಈ ಆದೇಶದ ವಿರುದ್ಧ ಲಾಹೋರ್ ಹೈಕೋರ್ಟ್ನ ರಾವಲ್ಪಿಂಡಿ ಪೀಠಕ್ಕೆ ಹಸನ್ ತಂದೆ ನಿವೃತ್ತ ಮೇಜರ್ ಜನರಲ್ ಜಫರ್ ಮೆಹ್ದಿ ಅಸ್ಕಾರಿ ಅರ್ಜಿ ಸಲ್ಲಿಸಿದ್ದಾರೆ. ತನ್ನ ಮಗನನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಬೇಕಾದಂತೆ ವಕೀಲರ ನೇಮಕ ಮಾಡಿಕೊಳ್ಳಲೂ ನಮಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಗನನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಕೂಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Galaxy M52 5G: ಸ್ಯಾಮ್ಸಂಗ್ ವೆಬ್ಸೈಟ್ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಕೈಗೆಟಕುವ ದರದಲ್ಲಿ ಗ್ಯಾಲಕ್ಸಿ M52 5G
Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು