ಪಾಕಿಸ್ತಾನ: ಪೊಲೀಸ್ ಠಾಣೆಯಲ್ಲೇ ಭಾರೀ ಸ್ಫೋಟ, 12 ಮಂದಿ ಪೊಲೀಸರ ಸಾವು
ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 12 ಪೊಲೀಸರು ಮೃತಪಟ್ಟಿದ್ದಾರೆ. ಹಾಗೂ 40 ಜನರಿಗೆ ಗಾಯಗಳಾಗಿವೆ.
ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 12 ಪೊಲೀಸರು ಮೃತಪಟ್ಟಿದ್ದಾರೆ. ಹಾಗೂ 40 ಜನರಿಗೆ ಗಾಯಗಳಾಗಿವೆ. ಪಾಕಿಸ್ತಾನದ ಸ್ವಾಟ್ನಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿದೆ. ಇನ್ನು ಪೊಲೀಸ್ ಠಾಣೆಯೊಳಗೆ ಎರಡು ಸ್ಫೋಟಗಳು ಸಂಭವಿಸಿದ್ದು ಇಡೀ ಕಟ್ಟಡ ನಾಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಅಧಿಕಾರಿಗಳು ಹೆಚ್ಚಿನ ಅಲರ್ಟ್ನಲ್ಲೇ ಇದ್ದರು. ಆದರೂ ಸ್ಟೋಟ ಸಂಭವಿಸಿದೆ ಎಂದು ಖೈಬರ್ ಪಖ್ತುಂಕ್ವಾ ಪೊಲೀಸ್ ಮಹಾನಿರೀಕ್ಷಕ ಅಖ್ತರ್ ಹಯಾತ್ ಖಾನ್ ತಿಳಿಸಿದರು. CTD ಡಿಐಜಿ ಖಾಲಿದ್ ಸೊಹೈಲ್ ಮಾತನಾಡಿ ಇಲ್ಲಿ ಸಂಭವಿಸಿದ ಸ್ಫೋಟವು “ಆತ್ಮಾಹುತಿ ದಾಳಿಯಲ್ಲ” ಮತ್ತು ಠಾಣೆಯಲ್ಲಿ ಮದ್ದುಗುಂಡುಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್ ಠಾಣೆ ಮೇಲೆ ಯಾವುದೇ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಜೋಧ್ಪುರದಲ್ಲಿ 11 ಮಂದಿ ಪಾಕಿಸ್ತಾನಿ ವಲಸಿಗರ ಸಾಮೂಹಿಕ ಆತ್ಮಹತ್ಯೆ ಪ್ರಕರಣ, 3 ವರ್ಷದ ಬಳಿಕ ಅಂತೂ ಕಾರಣ ಬಹಿರಂಗವಾಯ್ತು
ಠಾಣೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಫೋಟದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿವೆ. ಕುಸಿದ ಕಟ್ಟಡ ಹಳೆಯದಾಗಿದ್ದು, ಹೆಚ್ಚಿನ ಕಚೇರಿಗಳು ಮತ್ತು ಸಿಬ್ಬಂದಿಗಳು ಹೊಸ ಕಟ್ಟಡದಲ್ಲಿದ್ದಾರೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ. ಸ್ಫೋಟದಿಂದ ಠಾಣೆ ಕಟ್ಟಡ ಕುಸಿದಿದ್ದು ಇದರಿಂದ ಆ ಏರಿಯಾದ ವಿದ್ಯುತ್ ಕಡಿತಗೊಂಡಿದೆ.
Pakistan | At least 12 policemen were killed and more than 40 people injured in explosions at a Counter Terrorism Department (CTD) police station in Swat's Kabal town, reports Pakistan's Geo News citing police
— ANI (@ANI) April 24, 2023
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ವಾತ್‌ನ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ಅಧಿಕಾರಿ ಶಫಿ ಉಲ್ಲಾ ಗಂಡಾಪುರ (ಡಿಪಿಒ) ಎಂಬುವವರು ಇಲ್ಲಿ ಸಂಭವಿಸಿದ್ದು ‘ಆತ್ಮಾಹುತಿ ದಾಳಿ’ ಎಂದು ಉಲ್ಲೇಖಿಸಿದ್ದರು. ದಾಳಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸ್ಫೋಟವನ್ನು ಖಂಡಿಸಿದ್ದರು ಮತ್ತು ಘಟನೆಯಲ್ಲಿ ಮೃತಪಟ್ಟ ಅಧಿಕಾರಿಗಳಿಗೆ ದುಃಖ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ವರದಿಯನ್ನು ಸಲ್ಲಿಸುವಂತೆ ಪಾಕ್ ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:10 am, Tue, 25 April 23