ಇಸ್ಲಾಮಾಬಾದ್: ಸೆನೆಟ್ ಚುನಾವಣೆ ಹಿನ್ನಡೆಯ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ‘ನನ್ನ ಪಕ್ಷದ ಜನಪ್ರತಿನಿಧಿಗಳು ನನ್ನನ್ನು ಅಸಮರ್ಥ ಎಂದುಕೊಂಡರೆ ಸಂತೋಷವಾಗಿ ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇನೆ,’ ಎಂದು ಹೇಳಿಕೆ ನೀಡಿದ್ದಾರೆ. ತಮ್ಮ ಸಂಪುಟದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ರ ಸೋಲಿನಿಂದ ಕಳಾಹೀನರಾಗಿರುವ ಇಮ್ರಾನ್ ಖಾನ್, ಸೋಲಿಗೆ ಪ್ರತಿಪಕ್ಷ ಪಿಪಿಪಿ ಮತ್ತು ಚುನಾವಣಾ ಆಯೋಗವೇ ಕಾರಣ ಎಂದು ದೂರಿದ್ದಾರೆ. ಸಂಕಷ್ಟ ಪರಿಸ್ಥಿತಿಯನ್ನು ದೇಶದ ಜನರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಭಾಷಣ ಮಾಡಲು ಟಿವಿ ಸ್ಟುಡಿಯೋಗೆ ಬಂದಿದ್ದ ಇಮ್ರಾನ್ ಖಾನ್, ಭಾಷಣ ಮಾಡುವಾಗ ಪದಗಳಿಗೆ ತಡಬಡಾಯಿಸಿದ್ದು ವ್ಯಾಪಕವಾಗಿ ಟ್ರೋಲ್ ಆಗಿದೆ.
ದೇಶದ ಹಣವನ್ನು ಲಪಟಾಯಿಸಿರುವ ಭ್ರಷ್ಟರು ಅದನ್ನು ಹಿಂತಿರುಗಿಸಲೇಬೇಕು. ಅಧಿಕಾರ ಕಳೆದುಕೊಂಡರೂ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ನಾನು ನಿಲ್ಲಿಸುವುದಿಲ್ಲ. ಇದು ನಿಮ್ಮೆಲ್ಲರ (ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಿಟಿಐ ಪಕ್ಷದವರ) ಪ್ರಜಾಸತ್ತಾತ್ಮಕ ಹಕ್ಕು. ನಿಮಗೆ ನಾನು ಅಸಮರ್ಥ ಎನಿಸಿದರೆ, ಪ್ರತಿಪಕ್ಷದಲ್ಲಿ ಕೂರಲು ಸಿದ್ಧ’ ಎಂದು ಇಮ್ರಾನ್ ಖಾನ್ ಪಾಕ್ ಪ್ರಜೆಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು. ‘ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಂ) ಮೈತ್ರಿಕೂಟಕ್ಕೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ, ನಾನು ಅಧಿಕಾರ ಕಳೆದುಕೊಂಡರೂ ಭ್ರಷ್ಟರು ಹಣ ಹಿಂತಿರುಗಿಸುವವರೆಗೂ ಸುಮ್ಮನೆ ಬಿಡುವುದಿಲ್ಲ,’ ಎಂದು ಹೇಳಿದರು.
ಅತಿಮುಖ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷವು ಸೋಲನುಭವಿಸಿತ್ತು. ಇಮ್ರಾನ್ ಸಂಪುಟದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರನ್ನು ಪಾಕಿಸ್ತಾನ ಸಂಸತ್ತಿನ ಪ್ರಮುಖ ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಮುಖ್ಯಸ್ಥರೂ ಆಗಿರುವ ಮಾಜಿ ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿ ಸೋಲಿಸಿದ್ದರು. ಈ ಫಲಿತಾಂಶವು ಇಮ್ರಾನ್ ಖಾನ್ ಮತ್ತು ಅವರ ಪಿಟಿಐ ಪಕ್ಷಕ್ಕೆ ವ್ಯಾಪಕ ಹಿನ್ನಡೆ ತಂದೊಡ್ಡಿದೆ. ಗೌಪ್ಯ ಮತದಾನದಲ್ಲಿ ಕೆಲ ಸದಸ್ಯರು ಅಥವಾ ಮಿತ್ರಪಕ್ಷಗಳು ಪಕ್ಷಾಂತರ ಮಾಡಿರುವ ಸಾಧ್ಯತೆ ಕಂಡುಬಂದಿದೆ.
ಸಂಸತ್ ಅಧಿವೇಶನವನ್ನು ಶನಿವಾರ ಕರೆಯಲಾಗಿದೆ. ಅಧಿವೇಶನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಯಾಚಿಸಲಿದ್ದಾರೆ.ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವ ಇಮ್ರಾನ್ ಖಾನ್, ತಮ್ಮ ಪಕ್ಷದ ಸೋಲಿಗೆ ಪಾಕಿಸ್ತಾನ ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ಅಪವಿತ್ರ ಮೈತ್ರಿ ಕಾರಣ ಎಂದು ದೂರಿದ್ದಾರೆ. ಮೇಲೆ ಇಮ್ರಾನ್ ಖಾನ್ ಗುರುವಾರ ಆರೋಪ ಹೊರಿಸಿದ್ದರು. ‘ಪಾರದರ್ಶಕತೆ ಕಾಯ್ದುಕೊಳ್ಳುವುದು ಚುನಾವಣಾ ಆಯೋಗದ ಪ್ರಾಥಮಿಕ ಜವಾಬ್ದಾರಿ. ಗೋಪ್ಯ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಏಕೆ’ ಎಂದು ಇಮ್ರಾನ್ ಖಾನ್ ಪ್ರಶ್ನಿಸಿದ್ದರು.
ಪಾಕಿಸ್ತಾನದಲ್ಲಿ ಟ್ರೋಲ್ ಆದ ಇಮ್ರಾನ್ ಖಾನ್
ಮೇಲ್ಮನೆ ಚುನಾವಣೆ ಸೋಲಿನ ನಂತರ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಂದರ್ಭ ಇಮ್ರಾನ್ ಖಾನ್ ತಡವರಿಸಿದ್ದನ್ನು ನೆಟ್ಟಿಗರು ವ್ಯಾಪಕವಾಗಿ ಟ್ರೋಲ್ ಮಾಡಿದ್ದಾರೆ. ‘ಕ್ಯಾ ಹೇ ಯೆ, ಜೋ ಭಿ ಹೇ’ ಎಂದ ಇಮ್ರಾನ್ ಖಾನ್ ಮಾತಿಗೆ ಹಲವು ಬಣ್ಣಗಳನ್ನು ಹಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗಳನ್ನು ಹರಿಬಿಡಲಾಗಿದೆ.
ಇದನ್ನೂ ಓದಿ: ನಾವು ಎಂದಿಗೂ ಶಾಂತಿಯ ಪರ; ಭಾರತ-ಪಾಕಿಸ್ತಾನ ಕದನವಿರಾಮ ಒಪ್ಪಂದ ಸ್ವಾಗತಿಸಿ ಇಮ್ರಾನ್ ಖಾನ್ ಟ್ವೀಟ್
ಇದನ್ನೂ ಓದಿ: Pakistan: ಭಾರತದ ವಾಯು ಗಡಿಯಲ್ಲಿ ಸಂಚರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಮಾನಕ್ಕೆ ಅನುಮತಿ
Published On - 5:24 pm, Fri, 5 March 21