Shehbaz Sharif: ಮೊದಲ ಭಾಷಣದಲ್ಲೇ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ ಪ್ರಧಾನಿ ಶಾಹಬಾಝ್ ಷರೀಫ್

‘ಅಕ್ಕಪಕ್ಕದವರನ್ನು ನಾವು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಭಾರತದೊಂದಿಗೆ ನಾವು ಎಂದಿಗೂ ಮಧುರ ಬಾಂಧವ್ಯ ಹೊಂದಲು ಸಾಧ್ಯವೇ ಆಗಲಿಲ್ಲ’ ಎಂದು ಶಾಹಬಾಝ್ ಷರೀಫ್ ವಿಷಾದಿಸಿದರು.

Shehbaz Sharif: ಮೊದಲ ಭಾಷಣದಲ್ಲೇ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕ್ ಪ್ರಧಾನಿ ಶಾಹಬಾಝ್ ಷರೀಫ್
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಾಹಬಾಝ್ ಷರೀಫ್
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 12, 2022 | 8:58 AM

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಸತ್ತಿನಲ್ಲಿ ಮಾತನಾಡಿದ ಶಾಹಬಾಝ್ ಷರೀಫ್ ಕಾಶ್ಮೀರ ವಿಷಯ ಪ್ರಸ್ತಾಪಿಸಿದರು. ‘ಭಾರತ ಸಂವಿಧಾನದ 370ನೇ ಪರಿಚ್ಛೇದದ ಅನ್ವಯ ಕಾಶ್ಮೀರಕ್ಕೆ ಸಿಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರದ ಬೆಳವಣಿಗೆಗಳನ್ನು ಅಂದಿನ ಪ್ರಧಾನಿ ಇಮ್ರಾನ್ ಖಾನ್ ಸಮರ್ಪಕವಾಗಿ ನಿರ್ವಹಿಸಲಿಲ್ಲ’ ಎಂದು ನೇರ ಆರೋಪ ಮಾಡಿದರು. ‘ಕಾಶ್ಮೀರ ಕಣಿವೆಯ ಜನರು ರಕ್ತ ಸುರಿಸುತ್ತಿದ್ದಾರೆ. ಪಾಕಿಸ್ತಾನವು ಅವರಿಗೆ ಎಲ್ಲ ರೀತಿಯ ಅಗತ್ಯ ನೈತಿಕ ಮತ್ತು ರಾಜತಾಂತ್ರಿಕ ನೆರವು ಒದಗಿಸಲಿದೆ. ವಿಶ್ವ ವೇದಿಕೆಗಳಲ್ಲಿ ಕಾಶ್ಮೀರ ವಿಷಯಗಳನ್ನು ಪ್ರಸ್ತಾಪಿಸಲಿದೆ’ ಎಂದು ಹೇಳಿದರು.

‘ನೆರೆ ದೇಶ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕು ಎಂದು ನಾವು ಬಯಸುತ್ತೇವೆ. ಆದರೆ ಕಾಶ್ಮೀರ ವಿವಾದ ಪರಿಹಾರವಾಗುವವರೆಗೆ ಇದು ಸಾಧ್ಯವಾಗುವುದಿಲ್ಲ. ಅಕ್ಕಪಕ್ಕದವರನ್ನು ನಾವು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಭಾರತದೊಂದಿಗೆ ನಾವು ಎಂದಿಗೂ ಮಧುರ ಬಾಂಧವ್ಯ ಹೊಂದಲು ಸಾಧ್ಯವೇ ಆಗಲಿಲ್ಲ’ ಎಂದು ವಿಷಾದಿಸಿದರು.

‘ಆಗಸ್ಟ್ 2019ರಲ್ಲಿ ಒತ್ತಾಯದಿಂದ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಯಿತು. ಅದಾದ ನಂತರ ನಾವು ಮಾಡಿದ್ದೇನು? ಕಾಶ್ಮೀರದ ರಸ್ತೆಗಳಲ್ಲಿ ಕಾಶ್ಮೀರಿಗಳ ರಕ್ತ ಹರಿಯುತ್ತಿದೆ. ಇಡೀ ಕಾಶ್ಮೀರ ಕಣಿವೆ ಅವರ ರಕ್ತದಿಂದ ಕೆಂಪಾಗಿದೆ’ ಎಂದು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಕಾಶ್ಮೀರ ವಿಚಾರದಲ್ಲಿ ನಾವಿಬ್ಬರೂ ಒಂದು ತೀರ್ಮಾನಕ್ಕೆ ಬರೋಣ. ಅದು ಸಾಧ್ಯವಾದರೆ ಎರಡೂ ದೇಶಗಳು ಬಡತನ ನಿರ್ಮೂಲನೆ, ನಿರುದ್ಯೋಗ ಸಮಸ್ಯೆ, ಔಷಧಿಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗಮನ ಕೊಡಬಹುದು’ ಎಂದು ಹೇಳಿದರು.

ಮೋದಿ ಅಭಿನಂದನೆ
ಪಾಕಿಸ್ತಾನದ ಪ್ರಧಾನಿಯಾಗಿ ಶಾಹಬಾಝ್ ಆಯ್ಕೆಯಾದ ನಂತರ ಟ್ವೀಟ್ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆಯ ನೆರಳು ಇಲ್ಲದ ಶಾಂತಿಯನ್ನು ಭಾರತ ಬಯಸುತ್ತದೆ. ಅಂಥ ಸಂದರ್ಭದಲ್ಲಿ ನಾವು ನಮ್ಮ ಅಭಿವೃದ್ಧಿ ಸವಾಲುಗಳು ಮತ್ತು ಜನರ ಸಮೃದ್ಧ ಜೀವನದ ಬಗ್ಗೆ ಗಮನ ಹರಿಸಬಹುದು’ ಎಂದು ಹೇಳಿದ್ದರು. ಈ ಹಿಂದೆ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದಾಗಲೂ ಮೋದಿ ಇದೇ ರೀತಿ ಅಭಿನಂದಿಸಿದ್ದರು.

ಪ್ರಸ್ತುತ ಭಾರತ ಮತ್ತು ಪಾಕ್ ನಡುವಣ ರಾಜತಾಂತ್ರಿಕ ಸಂಬಂಧ ಅತ್ಯಂತ ಕನಿಷ್ಠಮಟ್ಟದಲ್ಲಿದೆ. ಎರಡೂ ದೇಶಗಳು ಮತ್ತೆ ಮಾತುಕತೆಗೆ ಮುಂದಾಗಬೇಕು, ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಿಕೊಳ್ಳಬೇಕು ಎಂಬ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಶಾಹಬಾಝ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. 2013ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಶಾಹಬಾಝ್, ಎರಡೂ ದೇಶಗಳ ನಡುವೆ ಸೌಹಾರ್ದ ಸಂಬಂಧ ಇರಬೇಕು ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ನೆನೆಯಬಹುದು.

ಹತ್ತಾರು ಸಮಸ್ಯೆ
2016ರಲ್ಲಿ ಭಾರತದ ಪಠಾಣ್​ಕೋಟ್ ವಾಯುನೆಲೆ ಮತ್ತು ಉರಿಯ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ಮಾಡಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಸಂಪೂರ್ಣ ಹಳಸಿತ್ತು. ಇದಕ್ಕೆ ಭಾರತ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತಿಕ್ರಿಯಿಸಿತ್ತು. ಇದಾದ ನಂತರ ಪುಲ್ವಾಮಾದಲ್ಲಿ ಸಶಸ್ತ್ರಪಡೆಗಳ ಬಸ್​ ಮೇಲೆ ನಡೆದ ಬಾಂಬ್ ದಾಳಿಗೆ ಭಾರತವು ಪಾಕಿಸ್ತಾನದ ಭಯೋತ್ಪಾದಕ ಶಿಬಿರದ ಮೇಲೆ ವಾಯುದಾಳಿಯ ಮೂಲಕ ಪ್ರತಿಕ್ರಿಯಿಸಿತ್ತು. ಆಗಸ್ಟ್ 2019ರಲ್ಲಿ ಜಮ್ಮು ಕಾಶ್ಮೀರವನ್ನು ವಿಭಜಿಸಿದ್ದು ಮತ್ತು ವಿಶೇಷ ಸ್ಥಾನಮಾನ ಹಿಂಪಡೆದ ಭಾರತದ ಕ್ರಮವನ್ನು ಪಾಕಿಸ್ತಾನ ವಿಶ್ವಸಂಸ್ಥೆ ಸೇರಿದಂತೆ ಹಲವೆಡೆ ಪ್ರಸ್ತಾಪಿಸಿ ದೊಡ್ಡ ಸುದ್ದಿ ಮಾಡಲು ಯತ್ನಿಸಿತಾದರೂ ಅಂಥ ಯಶಸ್ಸು ಸಿಕ್ಕಿರಲಿಲ್ಲ.

ಆದರೆ ಭಾರತದ ಕ್ರಮ ಖಂಡಿಸಿ ಪಾಕಿಸ್ತಾನವು ಇಸ್ಲಾಮಾಬಾದ್​ನಲ್ಲಿದ್ದ ಭಾರತದ ಹೈಕಮಿಷನರ್ ಅವರನ್ನು ಉಚ್ಚಾಟಿಸಿತ್ತು. ಇದರ ಜೊತೆಗೆ ಭಾರತದೊಂದಿಗೆ ಹೊಂದಿದ್ದ ವಿಮಾನ ಸಂಚಾರ, ಭೂಸಾರಿಗೆ ಮತ್ತು ರೈಲ್ವೆ ಸಂಪರ್ಕವನ್ನು ಕಡಿದುಕೊಂಡಿತ್ತು. ಪಾಕಿಸ್ತಾನದೊಂದಿಗೆ ಸೌಹಾರ್ದ ಸಂಬಂಧ ಕಾಪಾಡಿಕೊಳ್ಳುವ ಇಚ್ಛೆ ತನಗಿದೆ ಎಂದು ಭಾರತ ಬಹುಕಾಲದಿಂದ ಹೇಳುತ್ತಲೇ ಇದೆ. ‘ಭಯ, ಮುಜುಗರ ಮತ್ತು ಹಿಂಸಾಚಾರವಿಲ್ಲದ ವಾತಾವರಣ ನಿರ್ಮಿಸುವ ಹೊಣೆಗಾರಿಕೆಯನ್ನು ಪಾಕಿಸ್ತಾನ ನಿರ್ವಹಿಸಿದರೆ ಎರಡೂ ದೇಶಗಳ ನಡುವೆ ಉತ್ತಮ ಸಂಬಂಧ ಸಾಧ್ಯ’ ಎಂದು ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕು, ಆದರೆ ಕಾಶ್ಮೀರ ಸಮಸ್ಯೆ ಪರಿಹರಿಸದೆ ಶಾಂತಿ ಸಾಧ್ಯವಿಲ್ಲ: ಶಹಬಾಜ್ ಷರೀಫ್

ಇದನ್ನೂ ಓದಿ: Shehbaz Sharif: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ