ಇಸ್ಲಾಮಾಬಾದ್: ಅವಿಶ್ವಾಸ ನಿರ್ಣಯವನ್ನು(no-confidence motion) ವಜಾಗೊಳಿಸಿದ ಉಪ ಸ್ಪೀಕರ್ ಖಾಸಿಂ ಸೂರಿ ಅವರ ತೀರ್ಪನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್(Pakistan Supreme Court) ಗುರುವಾರ ಅಸಂವಿಧಾನಿಕ ಎಂದು ಘೋಷಿಸಿದೆ. ವಿಧಾನಸಭೆಯನ್ನು ಮರುಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಏಪ್ರಿಲ್ 9 ರಂದು ಅವಿಶ್ವಾಸ ನಿರ್ಣಯದ ಮತದಾನ ನಡೆಯಲಿದ್ದು, ಅವಿಶ್ವಾಸ ಗೊತ್ತುವಳಿಯನ್ನು ವಿದೇಶಿ ಪಿತೂರಿ ಎಂದು ಆರೋಪಿಸಿರುವ ಇಮ್ರಾನ್ ಖಾನ್‌ಗೆ (Imran Khan) ಈ ತೀರ್ಪು ದೊಡ್ಡ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಶನಿವಾರ (ಏಪ್ರಿಲ್ 9) ಅವಿಶ್ವಾಸ ನಿರ್ಣಯವನ್ನು ಎದುರಿಸಲಿದ್ದಾರೆ.ತೀರ್ಪು ನೀಡಿದ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಿಯವರು ಸಂವಿಧಾನಕ್ಕೆ ಬದ್ಧರಾಗಿದ್ದಾರೆ. ಆದ್ದರಿಂದ ಅವರು ಅಸೆಂಬ್ಲಿಗಳನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಸಲಹೆ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ಇದಕ್ಕಿಂತ ಮುನ್ನಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ (CJP) ಉಮರ್ ಅಟಾ ಬಂಡಿಯಲ್, ಇಮ್ರಾನ್ ಖಾನ್ ಮತ್ತು ಅವರ ಮಿತ್ರರಿಗೆ ಸಂಸತ್ತನ್ನು ವಿಸರ್ಜಿಸಲು ಕಾನೂನುಬದ್ಧ ಹಕ್ಕಿದೆಯೇ ಎಂದು ಕೇಳಿದ್ದು, ಮಾಜಿ ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ಸೂರಿ ಅವರ ಆದೇಶವು “ತಪ್ಪು” ಎಂದು ಹೇಳಿದ್ದರು. ವಿವಾದಾತ್ಮಕ ತೀರ್ಪಿನ ಮೂಲಕ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸುವ ಕ್ರಮವು ಪ್ರಾಥಮಿಕವಾಗಿ ಸಂವಿಧಾನದ 95 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಬಂಡಿಯಲ್ ಹೇಳಿದ್ದರು.
ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ನೇತೃತ್ವದ ಐವರು ಸದಸ್ಯರ ಪೀಠವು ಪ್ರಕರಣವನ್ನು ಕೈಗೆತ್ತಿಕೊಂಡಾಗ ಈ ಹೇಳಿಕೆಗಳು ಬಂದಿವೆ. ಅಧ್ಯಕ್ಷ ಆರಿಫ್ ಅಲ್ವಿ ಅವರನ್ನು ಪ್ರತಿನಿಧಿಸುವ ಸೆನೆಟರ್ ಅಲಿ ಜಾಫರ್ ಅವರನ್ನು ಪೀಠವು ಪ್ರಧಾನ ಮಂತ್ರಿ ಜನಪ್ರತಿನಿಧಿಯೇ ಮತ್ತು ಸಂಸತ್ತು ಸಂವಿಧಾನದ ರಕ್ಷಕ ಅಲ್ಲವೇ ಎಂದು ಕೇಳಿದೆ.
ದೇಶದ ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಹೇಗೆ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಧ್ಯಕ್ಷರ ವಕೀಲರನ್ನು ಕೇಳಿದೆ. ಫೆಡರಲ್ ಸರ್ಕಾರದ ರಚನೆಯು ಸಂಸತ್ತಿನ “ಆಂತರಿಕ ವಿಷಯವೇ” ಎಂದು ಸಿಜೆಪಿ ಪ್ರಶ್ನಿಸಿದೆ.
ಏತನ್ಮಧ್ಯೆ, ಅಧ್ಯಕ್ಷರ ಕೋರಿಕೆಯಂತೆ 90 ದಿನಗಳಲ್ಲಿ ಕ್ಷಿಪ್ರ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಗುರುವಾರ ಹೇಳಿದ್ದು ಅಕ್ಟೋಬರ್‌ನಲ್ಲಿ ಅದನ್ನು ಮಾಡಬಹುದಾಗಿದೆ ಎಂದಿತ್ತು.”ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸಲು ಸಂಪೂರ್ಣವಾಗಿ ಬದ್ಧವಾಗಿದ್ದರೂ ಕನಿಷ್ಠ ನಾಲ್ಕು ಹೆಚ್ಚುವರಿ ತಿಂಗಳುಗಳ ಅಗತ್ಯವಿದೆ” ಎಂದು ಆಯೋಗ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಪ್ರಧಾನಿ ಖಾನ್ ಅವರು ಸಂಸತ್ತಿನ ಕೆಳಮನೆಯನ್ನು ಭಾನುವಾರ ವಿಸರ್ಜಿಸಿದ ನಂತರ ಚುನಾವಣೆ ನಡೆಸಲು ಮುಂದಿನ 90 ದಿನಗಳಲ್ಲಿ ದಿನಾಂಕವನ್ನು ಪ್ರಸ್ತಾಪಿಸುವಂತೆ ಅಧ್ಯಕ್ಷರು ಚುನಾವಣಾ ಆಯೋಗವನ್ನು ಕೇಳಿದ್ದರು.
ನ್ಯಾಷನಲ್ ಅಸೆಂಬ್ಲಿ ಡೆಪ್ಯೂಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ಅವಿಶ್ವಾಸ ನಿರ್ಣಯವು ಸರ್ಕಾರವನ್ನು ಉರುಳಿಸುವ “ವಿದೇಶಿ ಪಿತೂರಿ” ಯೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಅದನ್ನು ನಿರ್ವಹಿಸಲಾಗುವುದಿಲ್ಲ ಎಂದು ಭಾನುವಾರ ತೀರ್ಪು ನೀಡಿದರು. ಕೆಲವು ನಿಮಿಷಗಳ ನಂತರ ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ನ್ಯಾಷನಲ್ ಅಸೆಂಬ್ಲಿಯನ್ನು ವಿಸರ್ಜಿಸಿದರು.
ಇದನ್ನೂ ಓದಿ: ಇಮ್ರಾನ್ ಖಾನ್ ಅವಿಶ್ವಾಸ ಮತ ಪ್ರಕರಣ: ಸಂವಿಧಾನದ ಪ್ರಕಾರ ಎಲ್ಲವೂ ನಡೆಯುತ್ತಿದ್ದರೆ ಬಿಕ್ಕಟ್ಟು ಎಲ್ಲಿದೆ?: ಸಿಜೆಪಿ ಪ್ರಶ್ನೆ
Published On - 9:20 pm, Thu, 7 April 22