Sneha Dubey: ‘ಕಾಶ್ಮೀರದಿಂದ ಮೊದಲು ಜಾಗ ಖಾಲಿ ಮಾಡಿ..’-ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಕಟು ಉತ್ತರ ನೀಡಿದ ಭಾರತ

| Updated By: Lakshmi Hegde

Updated on: Sep 25, 2021 | 11:21 AM

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿನ್ನೆ ಮಾತನಾಡಿದ್ದ ಪಾಕ್​ ಪ್ರಧಾನಿ ಇಮ್ರಾನ್ ಖಾನ್​, ಜಮ್ಮು-ಕಾಶ್ಮೀರವನ್ನು ಪ್ರಸ್ತಾಪಿಸಿದ್ದರು. ವಿಶೇಷ ಸ್ಥಾನಮಾನ ರದ್ದತಿ ಬಗ್ಗೆಯೂ ಮಾತನಾಡಿದ್ದರು.

Sneha Dubey: ‘ಕಾಶ್ಮೀರದಿಂದ ಮೊದಲು ಜಾಗ ಖಾಲಿ ಮಾಡಿ..’-ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಕಟು ಉತ್ತರ ನೀಡಿದ ಭಾರತ
ವಿಶ್ವಸಂಸ್ಥೆ ಸಾಮಾನ್ಯ ಸಭೆ ಸೆಷನ್​ನಲ್ಲಿ ಮಾತನಾಡಿದ ಸ್ನೇಹಾ ದುಬೆ
Follow us on

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವಕಾಶ ಸಿಕ್ಕಾಗಲೆಲ್ಲ ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಾಗೇ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA)ಶುಕ್ರವಾರ ಭಾಷಣ ಮಾಡುವಾಗಲೂ ಕಾಶ್ಮೀರ (Kashmir)ದ ವಿಚಾರ ತೆಗೆದಿದ್ದರು. ಅದಕ್ಕೀಗ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ‘ವಾಸ್ತವವಾಗಿ ಬೆಂಕಿ ಇಡುವ ಸ್ವಭಾವ ಹೊಂದಿರುವ ಪಾಕಿಸ್ತಾನ, ಜಗತ್ತಿನೆದುರು ತನ್ನನ್ನು ತಾನು ಬೆಂಕಿ ಶಮನ ಮಾಡುವವನಂತೆ  ಬಿಂಬಿಸಿಕೊಳ್ಳುತ್ತಿದೆ’ಎಂದು ಭಾರತದ ಪ್ರತಿನಿಧಿ ಸ್ನೇಹಾ ದುಬೆ ತಿರುಗೇಟು ನೀಡಿದ್ದಾರೆ. ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಇಮ್ರಾನ್​ ಖಾನ್ ಭಾಷಣವನ್ನು ವಿರೋಧಿಸಿದ ಅವರು, ಪಾಕ್​ ಪ್ರಧಾನಿ ದುರುದ್ದೇಶ ಪೂರಿತವಾಗಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿನ್ನೆ ಮಾತನಾಡಿದ್ದ ಪಾಕ್​ ಪ್ರಧಾನಿ ಇಮ್ರಾನ್ ಖಾನ್​, ಜಮ್ಮು-ಕಾಶ್ಮೀರವನ್ನು ಪ್ರಸ್ತಾಪಿಸಿದ್ದರು. 2019ರ ಆಗಸ್ಟ್​ 5ರಂದು ಭಾರತ ಸರ್ಕಾರ ಅಲ್ಲಿನ ವಿಶೇಷ ಸ್ಥಾನಮಾನ ತೆಗೆದು, ಜಮ್ಮು-ಕಾಶ್ಮೀರ ಮತ್ತು ಲಡಾಖ್​​ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ್ದರ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ, ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್​ ಅಲಿ ಗೀಲಾನಿಯವರ ಸಾವಿನ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ಸೆಷನ್​​ನಲ್ಲಿ ಮಾತನಾಡಿದ ಸ್ನೇಹಾ ದುಬೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನನ್ನ ದೇಶ ಭಾರತದ ಆಂತರಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯ ಮಹಾನ್​ ವೇದಿಕೆಯ ಘನತೆಗೆ ಧಕ್ಕೆ ತಂದಿದ್ದಾರೆ.  ಜಾಗತಿಕ ವೇದಿಕೆಯಲ್ಲಿ ಮತ್ತೆ ಸುಳ್ಳು ಹೇಳಿದ್ದಾರೆ ಎಂದು ಹೇಳಿದರು.  ಅಷ್ಟೇ ಅಲ್ಲ,  ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್​ಗಳು ಯಾವಾಗಲೂ ನಮ್ಮ ಭಾರತದ ಅವಿಭಾಜ್ಯ ಪ್ರದೇಶಗಳು. ಅದನ್ನು ಭಾರತದಿಂದ ಬೇರ್ಪಡಿಸಲು ಯಾರಿಗೂ, ಯಾವಾಗಲೂ ಸಾಧ್ಯವಿಲ್ಲ. ಪಾಕಿಸ್ತಾನ ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗಗಳೂ ಕೂಡ ಭಾರತದ್ದೇ ಆಗಿದೆ. ಹೀಗೆ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಿಂದ ಕೂಡಲೇ ಪಾಕಿಸ್ತಾನ ಜಾಗ ಖಾಲಿ ಮಾಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಸ್ನೇಹಾ ದುಬೆ ಕಟುವಾಗಿ ಹೇಳಿದ್ದಾರೆ.

ಇನ್ನು ಸ್ನೇಹಾ ದುಬೆ ಪಾಕಿಸ್ತಾನ ಉಗ್ರರರ ಪೋಷಕ ಎಂಬುದನ್ನೂ ಒತ್ತಿ ಹೇಳಿದರು. ಪಾಕಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಬೆಳೆಸುತ್ತಿದೆ ಎಂಬುದು ಜಗತ್ತಿಗೇ ಗೊತ್ತಿರುವ ವಿಚಾರ. ಪಾಕ್​ನ ಈ ನೀತಿಯಿಂದಾಗಿ ನಮ್ಮ ನೆಲವಷ್ಟೇ ಅಲ್ಲ, ಇಡೀ ಜಗತ್ತು ಸಂಕಷ್ಟಕ್ಕೀಡಾಗಿದೆ. ಇನ್ನು ಪಾಕಿಸ್ತಾನದ ಒಳಗೆ ನಡೆಯುತ್ತಿರುವ ಮತಾಂಧತೆಯ ಹಿಂಸಾಚಾರವನ್ನೂ ಕೂಡ ಅವರು ಉಗ್ರರ ಕೃತ್ಯ ಎಂದೇ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಭಾರತ ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಪ್ರಧಾನಿ ಸಂಕಟ ಹೆಚ್ಚಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಈ ಬಗ್ಗೆ ಮಾತನಾಡುತ್ತಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರದ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಹಿಂದೆ ಕೂಡ ಮಾತನಾಡಿದ್ದರು. ಆದರೆ ವಿಶ್ವ ಸಂಸ್ಥೆ ಸದಸ್ಯ ರಾಷ್ಟ್ರಗಳು ಈ ವಿಚಾರದಲ್ಲಿ ನಾವು ತಲೆ ಹಾಕೋದಿಲ್ಲ, ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯ ಎಂದು ಹೇಳಿದ್ದವು.

ಇದನ್ನೂ ಓದಿ: SPB Death Anniversary: ಎಸ್​ಪಿಬಿ ನಿಧನರಾಗಿ ಒಂದು ವರ್ಷ; ಮಹಾನ್​ ಗಾಯಕನ ಪುಣ್ಯಸ್ಮರಣೆಗೆ ವಿಶೇಷ ಹಾಡು, ನುಡಿ ನಮನ

PM Modi in Nee York: ನ್ಯೂಯಾರ್ಕ್​ ತಲುಪಿದ ಪ್ರಧಾನಿ ಮೋದಿ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ

(Pakistan to immediately vacate all areas under its illegal occupation India reacted to speech of Imran Khan)

Published On - 11:07 am, Sat, 25 September 21