ಪಾಕ್ ಮೂಲದ ಅಬ್ದುಲ್ ಮಕ್ಕಿ ಈಗ ಜಾಗತಿಕ ಉಗ್ರ: ಚೀನಾ ತಡೆಯ ನಂತರವೂ ವಿಶ್ವಸಂಸ್ಥೆಯಿಂದ ಘೋಷಣೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 17, 2023 | 10:08 AM

ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಕ್ ಮೂಲದ ಅಬ್ದುಲ್ ಮಕ್ಕಿ ಈಗ ಜಾಗತಿಕ ಉಗ್ರ: ಚೀನಾ ತಡೆಯ ನಂತರವೂ ವಿಶ್ವಸಂಸ್ಥೆಯಿಂದ ಘೋಷಣೆ
ಪಾಕಿಸ್ತಾನದ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿ
Follow us on

ನ್ಯೂಯಾರ್ಕ್: ಪಾಕಿಸ್ತಾನ ಮೂಲದ ಉಗ್ರಗಾಮಿ ಅಬ್ದುಲ್ ರೆಹಮಾನ್ ಮಕ್ಕಿ ಎಂಬಾತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (The United Nations Security Council – UNSC) ಜಾಗತಿಕ ಉಗ್ರ ಎಂದು ಸೋಮವಾರ (ಜ 17) ಘೋಷಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐಸಿಸ್​ ಹಾಗೂ ಅಲ್​ಖೈದಾ ನಿಯಂತ್ರಣ ಸಮಿತಿಯು ಈ ನಿರ್ಧಾರ ತೆಗೆದುಕೊಂಡಿದೆ. ಲಷ್ಕರ್​-ಎ-ತಯ್ಯಬಾದ (Lashkar-e-Taiba – LeT) ಸಂಘಟನೆಯ ನಾಯಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸಲು ಭಾರತ ಸರ್ಕಾರವು ಹಲವು ಬಾರಿ ಪ್ರಯತ್ನ ಪಟ್ಟಿತ್ತು. ಜೂನ್ 2022ರಲ್ಲಿ ತನ್ನ ಪ್ರಯತ್ನಕ್ಕೆ ಚೀನಾ ಅಡ್ಡಿಯಾಗಿದೆ ಎಂದು ಭಾರತವು ದೂರಿತ್ತು. ವಿಶ್ವಸಂಸ್ಥೆಯ ನಿಷೇಧ ಸಮಿತಿಯ ಎದುರು ಚೀನಾ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಇದೀಗ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಬಂಧ ಹೇಳಿಕೆಯೊಂದನ್ನು ಹೊರಡಿಸಿರುವ ವಿಶ್ವಸಂಸ್ಥೆ, ಜನವರಿ 16, 2023ರಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಐಸಿಸ್, ಅಲ್​ಖೈದಾ ಹಾಗೂ ಇತರ ಸಹವರ್ತಿ ಸಂಘಟನೆಗಳು, ಗುಂಪುಗಳು, ಸಂಸ್ಥೆಗಳನ್ನು ಗುರುತಿಸಿ ನಿಷೇಧಿಸುವ ಬಗ್ಗೆ ಚರ್ಚಿಸಿತು. ಈ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವವರ ಪ್ರಯಾಣ ನಿಷೇಧಿಸುವ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು ಎಂದು ಹೇಳಿದೆ. ಭಾರತ ಮತ್ತು ಅಮೆರಿಕ ಸರ್ಕಾರಗಳು ಮಕ್ಕಿಯನ್ನು ಈಗಾಗಲೇ ಉಗ್ರಗಾಮಿ ಎಂದು ತಮ್ಮ ದೇಶಗಳ ಕಾನೂನುಗಳ ಪ್ರಕಾರ ಘೋಷಿಸಿವೆ. ಮಕ್ಕಿಯು ಹಣ ಸಂಗ್ರಹ, ಯುವಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವುದು, ಭಾರತದಲ್ಲಿ ಹಿಂಸಾಚಾರ ನಡೆಸುವುದು, ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವಲ್ಲಿ ಸಕ್ರಿಯನಾಗಿದ್ದ.

ಅಬ್ದುಲ್ ರೆಹಮಾನ್ ಮಕ್ಕಿಯು ಲಷ್ಕರ್-ಎ-ತಯ್ಯಬಾ ಉಗ್ರಗಾಗಿ ಸಂಘಟನೆಯ ಮುಖ್ಯಸ್ಥ ಮತ್ತು ಮುಂಬೈ ದಾಳಿಯ (26/11) ಸೂತ್ರಧಾರ ಹಫೀಜ್ ಸಯೀದ್​ನ ಸೋದರ. ಲಷ್ಕರ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಇವನು ವಿವಿಧ ಹಂತಗಳಲ್ಲಿ ನಾಯಕತ್ವ ನಿರ್ವಹಿಸುತ್ತಿದ್ದ. 2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮಕ್ಕಿಯನ್ನು ಉಗ್ರಗಾಮಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಈ ಮೊದಲು ಚೀನಾ ಹಲವು ಅಡೆತಡೆಗಳನ್ನು ಒಡ್ಡಿತ್ತು. ಪಾಕ್​ ಮೂಲದ ಜೈಷ್-ಎ-ಮೊಹಮದ್​ ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಅಡ್ಡಿಯುಂಟು ಮಾಡಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಶೇ.500ರಷ್ಟು ದುಬಾರಿ, ಚಿಕನ್ ಬೆಲೆ ಗಗನಕ್ಕೆ, ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Tue, 17 January 23