ಪಾಕಿಸ್ತಾನ: ಪಂಜಾಬ್ ಪ್ರಾಂತ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪುತ್ರ ಹಮ್ಜಾ ಶೆಹಬಾಜ್

| Updated By: ರಶ್ಮಿ ಕಲ್ಲಕಟ್ಟ

Updated on: May 01, 2022 | 5:35 PM

ಹಮ್ಜಾ ಶೆಹಬಾಜ್ ಅವರು 11 ಕೋಟಿ ಜನರನ್ನು ಹೊಂದಿರುವ ದೇಶದ ಅತ್ಯಂತ ಜನಸಂಖ್ಯೆಯ ಪ್ರಾಂತ್ಯವಾದ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ಪಾಕಿಸ್ತಾನ: ಪಂಜಾಬ್ ಪ್ರಾಂತ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪುತ್ರ ಹಮ್ಜಾ ಶೆಹಬಾಜ್
ಪಂಜಾಬ್ ಪ್ರಾಂತ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪುತ್ರ ಹಮ್ಜಾ ಶೆಹಬಾಜ್
Follow us on

ಇಸ್ಲಾಮಾಬಾದ್: ಕೊನೆಯ ಕ್ಷಣದ ನಾಟಕೀಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರ ಪುತ್ರ ಹಮ್ಜಾ ಶೆಹಬಾಜ್ (Hamza Shehbaz) ಅವರು 11 ಕೋಟಿ ಜನರನ್ನು ಹೊಂದಿರುವ ದೇಶದ ಅತ್ಯಂತ ಜನಸಂಖ್ಯೆಯ ಪ್ರಾಂತ್ಯವಾದ ಪಂಜಾಬ್‌ನ (Punjab province) ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ರಾಜಾ ಪರ್ವೈಜ್ ಅಶ್ರಫ್ ಅವರು ಲಾಹೋರ್‌ನ ಗವರ್ನರ್ ಹೌಸ್‌ನಲ್ಲಿ 47ರ ಹರೆಯದ ಹಮ್ಜಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಶನಿವಾರ ಬೆಳಗ್ಗೆ ರಾಜ್ಯಪಾಲ ಒಮರ್ ಸರ್ಫ್ರಾಜ್ ಚೀಮಾ ಅವರು ನಿರ್ಗಮಿತ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿ ಅವರ ಸಚಿವ ಸಂಪುಟವನ್ನು ಪುನಃಸ್ಥಾಪಿಸಿದರು. ಅದೇ ವೇಳೆ ಹಮ್ಜಾ ಅವರ ಆಯ್ಕೆಯನ್ನು ಸಾಂವಿಧಾನಿಕವಾಗಿ ಅಸಿಂಧು ಎಂದು ಚೀಮಾ ಘೋಷಿಸಿದರು. ಹಮ್ಜಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸುಗಮವಾಗಿ ನಡೆಸಲು ಪಂಜಾಬ್ ಪೊಲೀಸರು ಗವರ್ನರ್ ಭವನದ ಉಸ್ತುವಾರಿಯನ್ನು ಅದರ ಭದ್ರತಾ ಸಿಬ್ಬಂದಿಯಿಂದ ವಹಿಸಿಕೊಂಡಿರುವುದಕ್ಕೆ ಗವರ್ನರ್ ಚೀಮಾ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಸಮಾರಂಭ ನಡೆಯುತ್ತಿದ್ದಂತೆಯೇ ರಾಜ್ಯಪಾಲ ಚೀಮಾ ಅವರು ರಾಜ್ಯಪಾಲರ ಭವನವನ್ನು ಆಕ್ರಮಿಸಿಕೊಂಡಿರುವ ಪೊಲೀಸರ ಬಗ್ಗೆ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತಂದಿದ್ದಾರೆ. ಅಸಾಂವಿಧಾನಿಕ ರೀತಿಯಲ್ಲಿ ನಕಲಿ ಮುಖ್ಯಮಂತ್ರಿ ಪ್ರಮಾಣ ವಚನದ ನಾಟಕ ನಡೆಸಲಾಗಿದ್ದು, ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಗಮನಹರಿಸಬೇಕು, ಈ ಕುರಿತು ರಾಷ್ಟ್ರಪತಿ ಆರಿಫ್ ಅಲ್ವಿ ಅವರಿಗೂ ಪತ್ರ ಬರೆಯುವುದಾಗಿ ರಾಜ್ಯಪಾಲ ಚೀಮಾ ಹೇಳಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ  ಪಂಜಾಬ್ ಮುಖ್ಯ ಕಾರ್ಯದರ್ಶಿ ಹಮ್ಜಾ ಅವರು ಮುಖ್ಯಮಂತ್ರಿ ಕಚೇರಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಸೂಚನೆ ನೀಡಿದರು.  ಶುಕ್ರವಾರ ಲಾಹೋರ್ ಹೈಕೋರ್ಟ್ ಹಮ್ಜಾಗೆ ಪ್ರಮಾಣ ವಚನ ಬೋಧಿಸುವಂತೆ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ಗೆ ಕೇಳಿದೆ. ಇದಕ್ಕೂ ಮೊದಲು ಪ್ರಮಾಣ ವಚನ ಬೋಧಿಸಲು ರಾಜ್ಯಪಾಲ ಚೀಮಾ ಅವರಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಅವರು ಹಮ್ಜಾ ಆಯ್ಕೆಯನ್ನು ಅಸಾಂವಿಧಾನಿಕ ಎಂದು ಉಲ್ಲೇಖಿಸಿ ನಿರಾಕರಿಸಿದರು.
ಏಪ್ರಿಲ್ 16 ರಂದು ಹಮ್ಜಾ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ದಿನ ನಡೆದ ವಿಧಾನಸಭೆ ಅಧಿವೇಶನದಲ್ಲಿ ಘರ್ಷಣೆಯುಂಟಾಗಿದ್ದು ಸ್ಪೀಕರ್ ಪರ್ವೇಜ್ ಇಲಾಹಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಶಾಸಕಿ ಆಸಿಯಾ ಅಮ್ಜದ್ ಗಾಯಗೊಂಡಿದ್ದರು.


ಪಿಟಿಐ ನೇತೃತ್ವದ ಒಕ್ಕೂಟವು ತನ್ನ 26 ಶಾಸಕರು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಗೆ ಪಕ್ಷಾಂತರಗೊಂಡು ಹಮ್ಜಾಗೆ ಮತ ಹಾಕಿದ ನಂತರ ಚುನಾವಣೆಯನ್ನು ಬಹಿಷ್ಕರಿಸಿತ್ತು.

ಹಮ್ಜಾ ಅವರ ತಂದೆ ಮತ್ತು ಪ್ರಧಾನ ಮಂತ್ರಿ ಶೆಹಬಾಜ್ ಅವರು 11 ಕೋಟಿ ಜನರಿರುವ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದರು. ಇಮ್ರಾನ್ ಖಾನ್ ಅವರ ಹಿಂದಿನ ಸರ್ಕಾರದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಆದಾಯ ಮೀರಿದ ಪ್ರಕರಣಗಳಲ್ಲಿ 20 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಹಮ್ಜಾ ಅವರು ಮೊದಲ ಬಾರಿಗೆ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯಿಂದ ಸ್ಥಾಪಿಸಲಾದ ₹14 ಶತಕೋಟಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣವನ್ನು ಅವರು ಎದುರಿಸುತ್ತಿದ್ದಾರೆ ಮತ್ತು ಈ ಪ್ರಕರಣದಲ್ಲಿ ಮೇ 14 ರವರೆಗೆ ಬಂಧನಕ್ಕೆ ಮುಂಚಿತವಾಗಿ ಜಾಮೀನಿನ ಮೇಲೆ ಇದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ