ಆಪರೇಷನ್ ಸಿಂಧೂರ ನಡೆದು 2 ತಿಂಗಳಾದರೂ ಪಾಕ್ನ ರಹೀಮ್ ಯಾರ್ ಖಾನ್ ವಾಯುನೆಲೆ ಇನ್ನೂ ತೆರೆದಿಲ್ಲ
ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂದೂರ್ದ ಮೂಲಕ ದಾಳಿ ನಡೆಸಿ ಎರಡು ತಿಂಗಳು ಕಳೆಯುತ್ತ ಬಂತು, ಅದರೂ ಪಾಕಿಸ್ತಾನ ತನ್ನ ವಾಯುನೆಲೆಗಳನ್ನು ಸರಿ ಮಾಡಲು ಸಾಧ್ಯವಾಗಿಲ್ಲ. ಭಾರತ ನಡೆಸಿದ ದಾಳಿಗೆ ಪಾಕಿಸ್ತಾನದ ವಾಯುನಲೆಗಳು ಅಕ್ಷರಶಃ ತತ್ತರಿಸಿ ಹೋಗಿದೆ. ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿರುವ ತನ್ನ ವಾಯುನೆಲೆಯ ರನ್ವೇಗಳನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ.

ಪಹಲ್ಗಾಮ್ ಮೇಲೆ ಪಾಕಿಸ್ತಾನ ಉಗ್ರರು ನಡೆಸಿದ ದಾಳಿಯ ನಂತರ ಭಾರತ ಸೇನೆ ಪಾಕಿಸ್ತಾನದ ಅನೇಕ ಪ್ರದೇಶಗಳ ಮೇಲೆ ದಾಳಿಯನ್ನು ನಡೆಸಿತ್ತು. ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು ನೀಡಿತ್ತು. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಗುರಿಯಾಗಿ ಈ ದಾಳಿಯನ್ನು ನಡೆಸಿ, ಪಾಕಿಸ್ತಾನದ ಹುಟ್ಟುಹಡಗಿಸಿತ್ತು. ಈ ದಾಳಿಗೆ ಹಾನಿಗೊಳಗಾದ ವಾಯುನೆಲೆಗಳಲ್ಲಿ ರಹೀಮ್ ಯಾರ್ ಖಾನ್ ವಾಯುನೆಲೆ (Rahim Yar Khan airbase) ಕೂಡ ಒಂದು. ಇದೀಗ ಆಪರೇಷನ್ ಸಿಂಧೂರ ನಡೆದು ಎರಡು ತಿಂಗಳಾದರೂ, ರಹೀಮ್ ಯಾರ್ ಖಾನ್ ವಾಯುನೆಲೆ ಕಾರ್ಯನಿರ್ವಹಿಸುತ್ತಿಲ್ಲ, ಇದು ಕಾರ್ಯತಂತ್ರದ ಮಿಲಿಟರಿ ಸ್ಥಾಪನೆಗೆ ಉಂಟಾದ ಹಾನಿಯ ಪ್ರಮಾಣವನ್ನು ಸೂಚಿಸುತ್ತದೆ. ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರವು ಈಗಾಗಲೇ ರನ್‌ವೇಗಾಗಿ ಮತ್ತೊಂದು ವಾಯುಪಡೆ ನೋಟಮ್ ಜಾರಿಗೊಳಿಸಿದ್ದರು, ಅದನ್ನು ಆಗಸ್ಟ್ 5ರವರೆಗೆ ಬಳಸಲಾಗುವುದಿಲ್ಲ ಎಂದು ಹೇಳಿದೆ.
ಬಹಾವಲ್ಪುರದಿಂದ ದಕ್ಷಿಣಕ್ಕೆ ಸುಮಾರು 230 ಕಿ.ಮೀ ದೂರದಲ್ಲಿರುವ ಈ ವಾಯುನೆಲೆಯು ಭಾರತದ ರಾಜಸ್ಥಾನ ಗಡಿಗೆ ಹತ್ತಿರದಲ್ಲಿರುವುದರಿಂದ ಪಾಕಿಸ್ತಾನದ ದಕ್ಷಿಣ ವಾಯು ರಕ್ಷಣೆಯಲ್ಲಿ ಕಾರ್ಯತಂತ್ರದ ಸ್ಥಾನವನ್ನು ಹೊಂದಿದೆ. ಮೇ ತಿಂಗಳ ಆರಂಭದಲ್ಲಿ ಭಾರತ ನಡೆಸಿದ ದಾಳಿಯಲ್ಲಿ ಇದು ಭಾರಿ ಹಾನಿಗೆ ಒಳಗಾಗಿದೆ. ಇನ್ನು ಪ್ರಧಾನಿ ಮೋದಿ ಅವರು ಮೇ ಅಂತ್ಯದಲ್ಲಿ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನದ ವಾಯುನೆಲೆ ‘ಐಸಿಯು’ಯಲ್ಲಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದರು. ಈ ದಾಳಿಯಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಧಿಯೊಳಗೆ ಇರುವ ವಾಯುನೆಲೆಯ ರನ್‌ವೇಗಳು ಮೇ 10ರಿಂದ ಮೇ 18ವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದ್ದರು.
ಜೂನ್ ಆರಂಭದಲ್ಲಿ ಮತ್ತೆ ಈ ಸೂಚನೆಯನ್ನು ಹೊರಡಿಸಲಾಯಿತು, ನಂತರ ವಾಯುನೆಲೆಯ ಮುಚ್ಚುವಿಕೆಯನ್ನು ಜುಲೈ 4 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಕೆಲಸ ಪ್ರಗತಿಯಲ್ಲಿದೆ ಎಂಬ ಸೂಚನೆಯನ್ನು ಹೊರಡಿಸಿದೆ. ಈ ವಾಯುನೆಲೆಯು ಪಾಕಿಸ್ತಾನ ವಾಯುಪಡೆಯ ಕೇಂದ್ರ ಕಮಾಂಡ್‌ಗೆ ಫಾರ್ವರ್ಡ್ ಆಪರೇಟಿಂಗ್ ಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಹೆಚ್ಚಾಗಿ ಬಳಸಲ್ಪಡುತ್ತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆದರಿಕೆ ಹಾಕಿ ಭಾರತ – ಪಾಕ್ ಯುದ್ಧ ನಿಲ್ಲಿಸಿದೆ, 5 ಜೆಟ್ ಹೊಡೆದುರುಳಿಸಲಾಗಿತ್ತು: ನಿಲ್ಲದ ಡೊನಾಲ್ಡ್ ಟ್ರಂಪ್ ಕ್ಯಾತೆ
ಭಾರತ ನಡೆಸಿದ ದಾಳಿಯಿಂದ ರಹೀಮ್ ಯಾರ್ ಖಾನ್ ವಾಯುನೆಲೆಯ ಮೇಲೆ ಹಾರಿಸಿದ ಕ್ಷಿಪಣಿಗಳು ಅದರ ರನ್‌ವೇಯಲ್ಲಿ ಬಹುದೊಡ್ಡ ಹಾನಿಯನ್ನು ಉಂಟು ಮಾಡಿತ್ತು. ಈ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ವಾಯುನೆಲೆ ಎರಡು ತಿಂಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸದ ಕಾರಣ ಮತ್ತಷ್ಟು ಹದಗೆಟ್ಟಿದೆ. ಇನ್ನು ಈ ವಾಯುನೆಲೆಯಲ್ಲದೆ, ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್ ವಾಯುನೆಲೆ, ಪಂಜಾಬ್‌ನ ಶೋರ್ಕೋಟ್‌ನಲ್ಲಿರುವ ರಫೀಕಿ ವಾಯುನೆಲೆ, ಚಕ್ವಾಲ್‌ನ ಮುರಿಯದ್ ವಾಯುನೆಲೆ ಮತ್ತು ಪಂಜಾಬ್‌ನ ಚುನಿಯನ್ ವಾಯುನೆಲೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಯಿತು. ನೂರ್ ಖಾನ್‌ನಲ್ಲಿರುವ ಸಾರಿಗೆ ವಿಮಾನಗಳು ಮತ್ತು ಚುನಿಯನ್‌ನಲ್ಲಿರುವ ತಾಂತ್ರಿಕ ಸೌಲಭ್ಯಗಳಿಗೆ ಹಾನಿಯಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇನ್ನು ಭಾರತದ ಈ ವೈಮಾನಿಕ ದಾಳಿಯಲ್ಲಿ ಶಿಥಿಲಗೊಂಡಿದ್ದ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ ಭಯೋತ್ಪಾದಕ ಶಿಬಿರವನ್ನು ಕೂಡ ಮುಚ್ಚಲಾಗಿದೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




