ಕಾಡಿನ ಬೆಂಕಿ ಮುಂದೆ ವಿಡಿಯೋ ಶೂಟ್ ಮಾಡಿರುವ ಪಾಕ್ ಟಿಕ್ ಟಾಕ್ ತಾರೆ ಹುಮೈರಾಗೆ ಅಸ್ಘರ್ ಗೆ ಜನರಿಂದ ಛೀಮಾರಿ

ಹುಮೈರಾ ಅವರಿಗೆ ಒಂದು ಕೋಟಿಗಿಂತ ಹೆಚ್ಚು ಟಿಕ್ ಟಾಕ್ ಫಾಲೋಯರ್ಸ್ ಇದ್ದಾರೆ. ತಮ್ಮ ಸಹಾಯಕನೊಬ್ಬನ ಮೂಲಕ ಬಿಡುಗಡೆ ಮಾಡಿಸಿರುವ ಹೇಳಿಕೆಯಲ್ಲಿ ಅವರು, ‘ಕಾಡಿಗೆ ಬೆಂಕಿ ಹಚ್ಚಿದ್ದು ನಾನಲ್ಲ, ಅದನ್ನು ಹಿನ್ನೆಲೆಯಲ್ಲಿಟ್ಟು ವಿಡಿಯೋ ಮಾಡಿದರೆ ಅದರಲ್ಲಿ ತಪ್ಪೇನಿದೆ?’ ಎಂದು ಹೇಳಿದ್ದಾರೆ.

ಕಾಡಿನ ಬೆಂಕಿ ಮುಂದೆ ವಿಡಿಯೋ ಶೂಟ್ ಮಾಡಿರುವ ಪಾಕ್ ಟಿಕ್ ಟಾಕ್ ತಾರೆ ಹುಮೈರಾಗೆ ಅಸ್ಘರ್ ಗೆ ಜನರಿಂದ ಛೀಮಾರಿ
ಹುಮೈರಾ ಅಸ್ಘರ್, ಪಾಕಿಸ್ತಾನದ ಟಿಕ್ ಟಾಕ್ ತಾರೆ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 18, 2022 | 12:47 PM

ಇಸ್ಲಾಮಾಬಾದ್: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಪಾಕಿಸ್ತಾನದ ಸೋಶೀಯಲ್ ಮೀಡಿಯಾ ತಾರೆಯೊಬ್ಬರು ದೇಶದಲ್ಲಿ ವ್ಯಾಪಕವಾಗಿ ಬಿಸಿಗಾಳಿಗೆ (heatwave) ಕಾರಣವಾಗಿ ಜನರ ಬದುಕನ್ನು ದುರ್ಬಾರಗೊಳಿಸುತ್ತಿರುವ ಕಾಡಿನ ಬೆಂಕಿಯ ಮುಂದೆ ಟಿಕ್ ಟಾಕ್ ವಿಡಿಯೋವೊಂದನ್ನು ಶೂಟ್ ಮಾಡಿರುವುದಕ್ಕೆ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಹುಮೈರಾ ಅಸ್ಘರ್ (Humaira Asghar) ಹೆಸರಿನ ತಾರೆ ಬೆಳ್ಳಿ ಬಣ್ಣದ ಬಾಲ್ ಗೌನ್ (silver ball gown) ತೊಟ್ಟು ಹೊತ್ತಿ ಉರಿಯುತ್ತಿರುವ ಬೆಟ್ಟವೊಂದರ ಮುಂಭಾಗದಲ್ಲಿ ಬಳುಕುತ್ತಾ ನಡೆದು ಬರುತ್ತಿರುವುದನ್ನು ಶೂಟ್ ಮಾಡಿಸಿ ನಾನು ‘ಹೋದೆಡೆಯೆಲ್ಲ ಬೆಂಕಿ ಹೊತ್ತಿಕೊಳ್ಳುತ್ತದೆ,’ ಅಂತ ಶೀರ್ಷಿಕೆ ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಉದ್ದೇಶಪೂರ್ವಕವಾಗಿ ಕಾಳ್ಗಿಚ್ಚನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಡಿಯೊವೊಂದನ್ನು ತಯಾರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಸೆರೆಮನೆ ತಳ್ಳಿದ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿರುವಾಗಲೇ ಹುಮೈರಾ ಇಂಥದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ತಾಪಮಾನ 51 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ಜನ ಸಹಿಸಲಾಗದ ಉಷ್ಣಾಂಶದಿಂದ ಅಕ್ಷರಶಃ ಬಳಲಿ ಬೆಂಡಾಗುತ್ತಿದ್ದಾರೆ. ಈಗಾಗಲೇ ಬಡತನದಲ್ಲಿರುವ ದೇಶದ ಬಡವರ ಗೋಳು ಹೇಳತೀರದಂತಾಗಿದೆ.

ಹುಮೈರಾ ಅವರಿಗೆ ಒಂದು ಕೋಟಿಗಿಂತ ಹೆಚ್ಚು ಟಿಕ್ ಟಾಕ್ ಫಾಲೋಯರ್ಸ್ ಇದ್ದಾರೆ. ತಮ್ಮ ಸಹಾಯಕನೊಬ್ಬನ ಮೂಲಕ ಬಿಡುಗಡೆ ಮಾಡಿಸಿರುವ ಹೇಳಿಕೆಯಲ್ಲಿ ಅವರು, ‘ಕಾಡಿಗೆ ಬೆಂಕಿ ಹಚ್ಚಿದ್ದು ನಾನಲ್ಲ, ಅದನ್ನು ಹಿನ್ನೆಲೆಯಲ್ಲಿಟ್ಟು ವಿಡಿಯೋ ಮಾಡಿದರೆ ಅದರಲ್ಲಿ ತಪ್ಪೇನಿದೆ?’ ಎಂದು ಹೇಳಿದ್ದಾರೆ.

ಸದರಿ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮಿಡಿಯಾದಿಂದ ತೆಗೆದುಹಾಕಲಾಗಿದೆ.

‘ಕಾಡಿನಲ್ಲಿ ಹೊತ್ತಿರುವ ಬೆಂಕಿಯನ್ನು ಸೌಂದರ್ಯೀಕರಣಗೊಳಿಸುವ ಬದಲು ಅದನ್ನು ನಂದಿಸಲು ಅವರು ಒಂದು ಬಕೆಟ್ ನೀರು ಹಿಡಿದು ನಿಂತಿರಬೇಕಿತ್ತು,’ ಎಂದು ಪರಿಸರ ಹೋರಾಟಗಾತಿ ಮತ್ತು ಇಸ್ಲಾಮಾಬಾದ್ ವನ್ಯಜೀವಿ ನಿರ್ವಹಣೆ ನಿಗಮದ ಅಧ್ಯಕ್ಷರೂ ಅಗಿರುವ ರೀನಾ ಸಯೀದ್ ಖಾನ್ ಸತ್ತಿ ಅವರು ಎ ಎಫಿ ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪಾಕಿಸ್ತಾನದ ರಾಜಧಾನಿಯನ್ನು ಸುತ್ತುವರೆದಿರುವ ಬೆಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ವಿಡಿಯೋ ಶೂಟ್ ಮಾಡಲೆಂದೇ ಕನಿಷ್ಟ ಒಂದು ಭಾಗವನ್ನು ಹೊತ್ತಿ ಉರಿಯುವಂತೆ ಮಾಡಲಾಗಿದೆ ಎಂದು ನಿಗಮ ಹೇಳಿದೆ.

‘ಈ ವಿಡಿಯೋಗಳು ರವಾನಿಸುತ್ತಿರುವ ಸಂದೇಶ ಬಹಳ ಅಪಾಯಕಾರಿಯಾಗಿದೆ ಮತ್ತು ಇವುಗಳನ್ನು ಕೂಡಲೇ ನಿಯಂತ್ರಿಸಬೇಕಾಗಿದೆ’ ಎಂದು ಸತ್ತಿ ಹೇಳಿದ್ದಾರೆ.
‘ಇದು ನಿರ್ಲಕ್ಷ್ಯತನದ ಪರಮಾವಧಿ ಮತ್ತು ಅಪ್ಪಟ ಹುಚ್ಚುತನ,’ ಎಂದು ಹುಮೈರಾ ವಿಡಿಯೋ ಕೆಳಗೆ ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಜರ್ಮನ್‌ವಾಚ್ ಹೆಸರಿನ ಒಂದು ಎನ್‌ಜಿಒ ಕಲೆ ಹಾಕಿರುವ ಜಾಗತಿಕ ಹವಾಮಾನ ಅಪಾಯದ ಸೂಚ್ಯಂಕದ ಪ್ರಕಾರ, ಜಾಗತಿಕ ತಾಪಮಾನದಿಂದ ಉಂಟಾಗುವ ಹವಾಮಾನ ವೈಪರೀತ್ಯಕ್ಕೆ ಈಡಾಗುವ ನಿಸ್ಸಾಹಯಕ ರಾಷ್ಟ್ರಗಳ ಪೈಕಿ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ.

ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪಾಕಿಸ್ತಾನದ ಜನತೆಯಲ್ಲಿ ಜಾಗೃತಿಯ ಕೊರತೆಯಿದೆ ಇದೆಯೆಂದು ತಜ್ಞರು ಹೇಳುತ್ತಾರೆ

ಪಾಕಿಸ್ತಾನದಲ್ಲಿ ಏಪ್ರಿಲ್ ಮಧ್ಯಭಾಗದಿಂದ ಜುಲೈ ಅಂತ್ಯದವರೆಗೆ ಕಾಡುಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದು ಸಾಮಾನ್ಯವಾಗಿದೆ. ವಿಪರೀತ ತಾಪಮಾನ, ಸಿಡಿಲು ಮತ್ತು ಕಡಿದು ಸುಡುವ ಕೃಷಿ ವಿಧಾನ ಮೊದಲಾದವು ಕಾಳ್ಗಿಚ್ಚಿಗೆ ಕಾರಣವಾಗುತ್ತವೆ.

ಪಾಕಿಸ್ತಾನದ ಯುವ ಜನತೆಯಲ್ಲಿ ಟಿಕ್ ಟಾಕ್ ಗೀಳು ಅಪರಿಮಿತವಾಗಿದೆ, ಕೆಲವು ಸಲ ವಿಡಿಯೋಗಳು ಲಕ್ಷಾಂತರ ಲೈಕ್ ಗಳನ್ನು ಗಿಟ್ಟಿಸುತ್ತವೆ.

ಇದನ್ನೂ ಓದಿ:   Watch ಬಿಸಿಗಾಳಿಗೆ ಕರಗಿದ ಹಿಮನದಿ; ಪ್ರವಾಹಕ್ಕೆ ಕುಸಿದು ಬಿತ್ತು ಪಾಕಿಸ್ತಾನದ ಐತಿಹಾಸಿಕ ಹಸನಾಬಾದ್ ಸೇತುವೆ