ಟೊಕಿಯೊ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಭೇಟಿಗಾಗಿ ಜಪಾನ್ಗೆ ಭೇಟಿ ನೀಡಿದ್ದಾರೆ. ಜಪಾನ್ ರಾಜಧಾನಿ ಟೋಕಿಯೊದಲ್ಲಿ ಮೋದಿ ಅವರಿಗೆ ಭಾರತೀಯರು ಸಂಭ್ರಮದ ಸ್ವಾಗತ ನೀಡಿದರು. ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜನದ ಪ್ಲೆಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮೂರು ವಾಕ್ಯ ಮಾತನಾಡಿದ. ಇದನ್ನು ಕೇಳಿ ಮೋದಿ ಖುಷಿಯಿಂದ ಹಸ್ತಾಕ್ಷರ ಹಾಕಿದ್ದಷ್ಟೇ ಅಲ್ಲದೆ, ಬಾಲಕನ ತಲೆ ನೇವರಿಸಿದರು. ‘ವಾವ್, ನೀನು ಹಿಂದಿ ಎಲ್ಲಿ ಕಲಿತೆ? ನಿನಗೆ ಹಿಂದೆ ಚೆನ್ನಾಗಿ ಬರುತ್ತಾ?’ ಎಂದು ಮೋದಿ ಪ್ರಶ್ನಿಸಿದರು.
‘ನನಗೆ ಹಿಂದಿ ಹೆಚ್ಚು ಮಾತನಾಡೋಕೆ ಬರುವುದಿಲ್ಲ. ಆದರೆ ಅರ್ಥವಾಗುತ್ತೆ. ಮುಂದೆ ಇನ್ನೂ ಚೆನ್ನಾಗಿ ಕಲೀತೀನಿ. ಮೋದಿ ಅವರೊಂದಿಗೆ ಮಾತನಾಡೋಕೆ ಅಂತ ಮೂರು ವಾಕ್ಯ ಅಭ್ಯಾಸ ಮಾಡಿಕೊಂಡು ಬಂದಿದ್ದೆ’ ಎಂದು ಮೋದಿ ಅವರ ಮೆಚ್ಚುಗೆಗೆ ಪಾತ್ರನಾದ ಜಪಾನಿ ಬಾಲಕ ವಿಝುಕಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮುಂಜಾನೆ ಜಪಾನ್ಗೆ ಬಂದಿಳಿದಿದ್ದು, ಕ್ವಾಡ್ ಸಮಾವೇಶ ಮತ್ತು ಹಲವು ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
#WATCH | “Waah! Where did you learn Hindi from?… You know it pretty well?,” PM Modi to Japanese kids who were awaiting his autograph with Indian kids on his arrival at a hotel in Tokyo, Japan pic.twitter.com/xbNRlSUjik
— ANI (@ANI) May 22, 2022
ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಅಭಿವೃದ್ಧಿ ಸಂಬಂಧ ಹಲವು ಮಹತ್ವದ ಮಾತುಕತೆಗಳು ಈ ಸಂದರ್ಭದಲ್ಲಿ ನಡೆಯಲಿವೆ. ‘ಟೋಕಿಯೊದಲ್ಲಿ ಲ್ಯಾಂಡ್ ಆದೆ. ಕ್ವಾಡ್ ಸಮಾವೇಶವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಕ್ವಾಡ್ ದೇಶಗಳ ನಾಯಕರನ್ನು ಭೇಟಿಯಾಗುವುದರೊಂದಿಗೆ ಜಪಾನ್ ಪ್ರಧಾನಿ, ಉದ್ಯಮಿಗಳು ಮತ್ತು ಜಪಾನ್ನಲ್ಲಿ ನೆಲೆಸಿರುವ ಭಾರತೀಯರೊಂದಿಗೂ ಮಾತನಾಡುತ್ತೇನೆ’ ಎಂದು ಮೋದಿ (PM Narendra Modi) ಜಪಾನೀಸ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
‘ಕ್ವಾಡ್ ನಾಯಕರೊಂದಿಗೆ ಎರಡನೇ ಬಾರಿಗೆ ಮುಖತಃ ಮಾತುಕತೆ ನಡೆಯುತ್ತಿದೆ. ಕ್ವಾಡ್ ಉಪಕ್ರಮಗಳ ಪ್ರಗತಿ ಬಗ್ಗೆ ವಿವಿಧ ದೇಶಗಳು ಸಾಧಿಸಿರುವ ಪ್ರಗತಿ ಕುರಿತು ಈ ವೇಳೆ ಪರಿಶೀಲನೆ ನಡೆಯಲಿದೆ’ ಎಂದು ಮೋದಿ ಅವರು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದರು. ‘ಇಂಡೋ-ಪೆಸಿಫಿಕ್ ವಲಯದ ಬೆಳವಣಿಗೆಗಳ ಜೊತೆಗೆ ಪರಸ್ಪರ ಆಸಕ್ತಿಯಿರುವ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ವಿವಿಧ ದೇಶಗಳ ನಾಯಕರು ಈ ಸಂದರ್ಭದಲ್ಲಿ ವಿಚಾರ ವಿನಿಮಯ ನಡೆಸಲಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
Published On - 8:56 am, Mon, 23 May 22