ಭಾರತ ಮೂಲದ ಗರ್ಭಿಣಿಯೊಬ್ಬರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಪೋರ್ಚುಗಲ್‌ನ ಆರೋಗ್ಯ ಸಚಿವೆ ಟೆಮಿಡೋ ರಾಜೀನಾಮೆ ನೀಡಿದ್ದಾರೆ. ಪೋರ್ಚುಗಲ್‌ನ ಅತಿದೊಡ್ಡ ಆಸ್ಪತ್ರೆಯಾದ ಲಿಸ್ಬನ್‌ನ ಸಾಂಟಾ ಮಾರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಆಕೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆ ಮೃತಪಟ್ಟಿದ್ದರೂ, ತುರ್ತು ಸಿಸೇರಿಯನ್ ಮಾಡಿ ನಂತರ ಆಕೆಯ ಮಗುವನ್ನು ತಾಯಿಯ ಗರ್ಭದಿಂದ ಹೊರ ತೆಗೆದಿದ್ದು, ಮಗು ಬದುಕುಳಿದಿದೆ ಮಹಿಳೆಯ ಸಾವಿನ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಮಿಡೋ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ, ಕೋವಿಡ್ 19 ವಿರುದ್ಧ ಯಶಸ್ವಿ ವ್ಯಾಕ್ಸಿನೇಷನ್ ಅಭಿಯಾನವನ್ನು ಆಯೋಜಿಸುವುದನ್ನು ಒಳಗೊಂಡಂತೆ ಅವರ ಕೆಲಸಕ್ಕಾಗಿ ಧನ್ಯವಾದ ಎಂದು ಪ್ರಧಾನಿ ಆಂಟೋನಿಯೊ ಕೋಸ್ಟಾ ಹೇಳಿದ್ದಾರೆ.
ಪೋರ್ಚುಗಲ್‌ನ ಆರೋಗ್ಯ ಸಿಬ್ಬಂದಿಯ ಕೊರತೆ, ವಿಶೇಷವಾಗಿ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿಶಾಸ್ತ್ರದಲ್ಲಿ ಪರಿಣತಿ ಹೊಂದಿರುವವರ ಕೊರತೆ ಇದೆ. ಈ ಹಿನ್ನೆಲೆ, ವಿದೇಶದಿಂದ ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬುದುಜ ತಿಳಿದುಬಂದಿದೆ.
ಕೆಲವು ಪ್ರಸೂತಿ ಘಟಕಗಳ ಮುಚ್ಚುವಿಕೆಯಂತಹ ಘಟನೆಗಳಿಗೆ ವಿರೋಧ ಪಕ್ಷಗಳು, ವೈದ್ಯರು ಮತ್ತು ದಾದಿಯರು ಮಾಜಿ ಆರೋಗ್ಯ ಸಚಿವೆಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದೂ ವರದಿಯಾಗಿದೆ.
ಬೇಸಿಗೆ ರಜೆಯಲ್ಲಿ ಹಲವಾರು ಆಸ್ಪತ್ರೆಗಳನ್ನು ಸಾಕಷ್ಟು ವೈದ್ಯರು ಇಲ್ಲದ ಕಾರಣ ತುರ್ತು ಪ್ರಸೂತಿ ಸೇವೆಗಳನ್ನು ವಿಶೇಷವಾಗಿ ವಾರಾಂತ್ಯದಲ್ಲಿ ಮುಚ್ಚಲು ಸರ್ಕಾರ ಕ್ರಮ ಕೈಗೊಂಡಿತ್ತು. ಈ ಕ್ರಮಕ್ಕೆ ಪ್ರತಿಪಕ್ಷಗಳು ಮತ್ತು ಪುರಸಭೆಗಳು ಆರೋಗ್ಯ ಸಚಿವರನ್ನು ಟೀಕಿಸಿದ್ದವು. ಗರ್ಭಿಣಿಯರು ಕೆಲವೊಮ್ಮೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅಪಾಯವನ್ನು ಎದುರಿಸುವಂತಾಗಿತ್ತು.
ಡಾ. ಮಾರ್ಟಾ ಟೆಮಿಡೋ ಅವರು ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಯಾವುದೇ ಮಾರ್ಗವನ್ನು ಹೊಂದಿಲ್ಲದ ಕಾರಣ ರಾಜೀನಾಮೆ ನೀಡಿದ್ದಾರೆ ಎಂದು ಪೋರ್ಚುಗೀಸ್ ವೈದ್ಯರ ಸಂಘದ ಅಧ್ಯಕ್ಷ ಮಿಗುಯೆಲ್ ಗೈಮಾರೆಸ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ