10 ಮಕ್ಕಳನ್ನು ಹೆತ್ತವರಿಗೆ 10 ಲಕ್ಷ ರೂಬಲ್ ಪುರಸ್ಕಾರ: ರಷ್ಯಾ ದೇಶದ ಜನಸಂಖ್ಯೆ ಹೆಚ್ಚಿಸಲು ವ್ಲಾದಿಮಿರ್ ಪುಟಿನ್ ಪ್ಲಾನ್
ದೊಡ್ಡ ಕುಟುಂಬ ಹೊಂದಿರುವವರು ಹೆಚ್ಚು ದೇಶಭಕ್ತರಾಗಿರುತ್ತಾರೆ ಎಂದು ಪುಟಿನ್ ಹೇಳಿದ್ದಾರೆ.
ಮಾಸ್ಕೊ: ಕೊವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ಉಕ್ರೇನ್ ಸಂಘರ್ಷದ ನಂತರ ರಷ್ಯಾದ ಜನವಸತಿ ಮತ್ತು ಜನವಾಸ್ತವ್ಯದಲ್ಲಿ ಆಗಿರುವ ಏರುಪೇರು ಸರಿಪಡಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಮುಂದಾಗಿದ್ದಾರೆ. 10 ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಹೆರುವ ತಾಯಂದಿರಿಗೆ 10 ಲಕ್ಷ ರೂಬಲ್ (ಭಾರತದ ರೂಪಾಯಿ ಲೆಕ್ಕದಲ್ಲಿ ₹ 13 ಲಕ್ಷ) ಮೊತ್ತದ ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದ್ದಾರೆ. ರಷ್ಯದಲ್ಲಿ ಸಾಂಪ್ರದಾಯಿಕ ರಷ್ಯನ್ (Ethnic Russian Population) ಜನರನ್ನು ಉಳಿಯುವಂತೆ ಮಾಡಲು ಪುಟಿನ್ ನಡೆಸುತ್ತಿರುವ ಹತಾಶ ಪ್ರಯತ್ನ ಇದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಯೋಜನೆಗೆ ಪುಟಿನ್ ‘ತಾಯಿಯೇ ನಾಯಕಿ’ (Mother Heroine) ಎಂದು ನಾಮಕರಣ ಮಾಡಿದ್ದಾರೆ. ಜನಸಂಖ್ಯೆಯ ಕುಸಿತಕ್ಕೆ ತಡೆಯೊಡ್ಡಲು ಪುಟಿನ್ ಅನುಷ್ಠಾನಗೊಳಿಸಿರುವ ಕ್ರಮ ಇದು. ರಷ್ಯಾದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಪಿಡುಗು ವ್ಯಾಪಕವಾಗಿ ಹರಡಿದರೆ ಸಹಜವಾಗಿಯೇ ಸಾವಿನ ಪ್ರಮಾಣ ಹೆಚ್ಚಾಗಲಿದೆ. ಇದರ ಜೊತೆಗೆ ಉಕ್ರೇನ್ ಜೊತೆಗಿನ ಸಂಘರ್ಷ ಆರಂಭವಾದ ನಂತರ ಈವರೆಗೆ ರಷ್ಯಾದ 50,000ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ. ರಷ್ಯಾದ ಜನಸಂಖ್ಯೆಯ ಮೇಲೆ ಈ ಅಂಶವೂ ಪರಿಣಾಮ ಬೀರಿದೆ.
ದೊಡ್ಡ ಕುಟುಂಬ ಹೊಂದಿರುವವರು ಹೆಚ್ಚು ದೇಶಭಕ್ತರಾಗಿರುತ್ತಾರೆ ಎಂದು ಪುಟಿನ್ ಹೇಳಿದ್ದಾರೆ. ಸೊವಿಯತ್ ಕಾಲದಲ್ಲಿ ಅಂದರೆ 90ರ ದಶಕಕ್ಕೂ ಮೊದಲು ರಷ್ಯಾದಲ್ಲಿ ಇಂಥದ್ದೇ ಯೋಜನೆ ಜಾರಿಯಲ್ಲಿತ್ತು. ರಷ್ಯಾದ ಜನಸಂಖ್ಯೆಯ ವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪುಟಿನ್ ‘ಮದರ್ ಹಿರೋಯಿನ್’ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸಿದ್ದಾರೆ.
10ನೇ ಮಗು ಹೆತ್ತ ಮಹಿಳೆಗೆ 10 ಲಕ್ಷ ರೂಬಲ್ ನಗದು ಪುರಸ್ಕಾರ ನೀಡಲಾಗುತ್ತದೆ. 10ನೇ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬದಂದು ಈ ಮೊತ್ತವನ್ನು ಪಾವತಿಸಲಾಗುತ್ತದೆ. ಆ ಮಗುವಿನ 9 ಮಂದಿ ಅಣ್ಣ/ಅಕ್ಕಂದಿರು ಜೀವಂತ ಇರಬೇಕು ಎಂಬ ನಿಯಮವಿದೆ. 1990ರ ನಂತರ ರಷ್ಯಾದಲ್ಲಿ ಜನಸಂಖ್ಯೆ ನಿರಂತರ ಕುಸಿತ ಕಾಣುತ್ತಿದೆ. ರಷ್ಯಾದ ಹಲವು ಪ್ರದೇಶಗಳಲ್ಲಿ ಜನರೇ ಕಾಣಿಸುತ್ತಿಲ್ಲ. ಹೀಗಾಗಿ ಇಂಥ ಹತಾಶ ಪ್ರಯತ್ನಕ್ಕೆ ರಷ್ಯಾ ಅಧ್ಯಕ್ಷರು ಮುಂದಾಗಿದ್ದಾರೆ.
ದೊಡ್ಡ ಕುಟುಂಬ ಹೊಂದಬೇಕು ಎಂದು ರಷ್ಯಾದ ಮಹಿಳೆಯರನ್ನು ಪ್ರೇರೇಪಿಸಲು ಸರ್ಕಾರ ಹಲವು ಉತ್ತೇಜಕ ಕ್ರಮಗಳನ್ನು ಘೋಷಿಸಿರುವುದೇನೋ ಸರಿ. ಆದರೆ 10 ಲಕ್ಷ ರೂಬಲ್ಗಳ ಆಸೆಗೆ 10 ಮಕ್ಕಳನ್ನು ಹೆರಲು ಮಹಿಳೆಯರು ಸಿದ್ಧರಾಗುತ್ತಾರೆಯೇ? ಹಲವು ರೀತಿಯ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಲ್ಲಿ ಮುಳುಗಿರುವ ರಷ್ಯಾದ ಜನರಿಗೆ ಹೆಚ್ಚು ಮಕ್ಕಳನ್ನು ಹೆತ್ತು ಸಾಕುವುದು ಮತ್ತೊಂದು ಸಮಸ್ಯೆ ಆಗಬಲ್ಲದು ಎಂದು ರಷ್ಯಾದ ರಾಜಕಾರಣ ಮತ್ತು ಭದ್ರತೆಯನ್ನು ಅಭ್ಯಾಸ ಮಾಡಿರುವ ಚಿಂತಕ ಡಾ ಜೆನ್ನಿ ಮ್ಯಾಥರ್ಸ್ ಅಭಿಪ್ರಾಯಪಟ್ಟಿದ್ದಾರೆ.