ಇಸ್ಲಾಮಾಬಾದ್: ಮಾಜಿ ಆಂತರಿಕ ಸಚಿವ ಶೇಖ್ ರಶೀದ್ (Sheikh Rashid) ಅವರ ವಿಗ್ ಅನ್ನು ಕಿತ್ತು ತಂದವರಿಗೆ 50,000 ಪಿಕೆಆರ್ (ಪಾಕಿಸ್ತಾನಿ ರೂಪಾಯಿ) ಬಹುಮಾನ ನೀಡಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿಶೇಷ ಸಹಾಯಕ ಹನೀಫ್ ಅಬ್ಬಾಸಿ (Hanif Abbasi) ಹೇಳಿದ್ದಾರೆ. ರಾವಲ್ಪಿಂಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ನಾಯಕ ಹನೀಫ್ ಅಬ್ಬಾಸಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್, ಶೇಖ್ ರಶೀದ್ ಮತ್ತು ಅವರ ಸೋದರಳಿಯರು ಸೌದಿ ಅರೇಬಿಯಾದ ಮಸ್ಜಿದ್-ಎ-ನಬ್ವಿಯಲ್ಲಿ ನಡೆದ ಘಟನೆಯ ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು. ಮಸ್ಜಿದ್-ಎ-ನಬ್ವಿಯಲ್ಲಿ ಶೆಹಬಾಜ್ ಷರೀಫ್ ನಿಯೋಗವನ್ನು ಅವಮಾನಿಸಿದ್ದನ್ನು ಅಬ್ಬಾಸಿ ಉಲ್ಲೇಖಿಸಿದ್ದಾರೆ. ಮಸ್ಜಿದ್-ಎ-ನಬ್ವಿಗೆ ತೆರಳುತ್ತಿರುವ ನಿಯೋಗವನ್ನು ನೋಡಿದ ನೂರಾರು ಯಾತ್ರಿಕರು “ಚೋರ್ ಚೋರ್” ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ವಿಡಿಯೊದಲ್ಲಿ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಇತರರೊಂದಿಗೆ ಕಾಣಿಸಿಕೊಂಡಿದ್ದಾರೆ. ಎಲ್ಲ ರಾಜಕೀಯ ವೇದಿಕೆಗಳಲ್ಲಿ ಶೇಖ್ ರಶೀದ್ ವಿರುದ್ಧ ಕಣಕ್ಕಿಳಿಯುವುದಾಗಿ ಹೇಳಿದ ಪ್ರಧಾನಮಂತ್ರಿಯವರ ವಿಶೇಷ ಸಹಾಯಕರು, ನಾನು ಅವರೊಂದಿಗೆ ಎಲ್ಲಿ ಚುನಾವಣೆಗೆ ಸ್ಪರ್ಧಿಸಲು ಬಯಸಿದರೂ ಮಾಜಿ ಸಚಿವರಿಗೆ ಸವಾಲು ಹಾಕಲು ಸಿದ್ಧ ಎಂದು ಹೇಳಿದರು.
ಮಸ್ಜಿದ್-ಎ-ನಬ್ವಿ ಆವರಣದಲ್ಲಿ ಮರ್ರಿಯಮ್ ಔರಂಗಜೇಬ್ ಮತ್ತು ಶಹಜೈನ್ ಬುಗ್ತಿ ಅವರನ್ನು ಪಿಟಿಐ ಕಾರ್ಯಕರ್ತರು ನಿಂದಿಸಿದ್ದಾರೆ ಎಂದು ಅವರು ಆರೋಪಿಸಿದ್ದು ಅಂತಹ ಕ್ರಮಗಳು ಮಸೀದಿ-ಎ-ನಬ್ವಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ಚೋರ್ ಚೋರ್ ಎಂದು ಕೂಗಿದ ಯಾತ್ರಿಕರು
ನಿಯೋಗವು ಮಸ್ಜಿದ್-ಎ-ನಬ್ವಿಯತ್ತ (Masjid-e-Nabawi) ಸಾಗುತ್ತಿರುವುದನ್ನು ನೋಡಿದ ನೂರಾರು ಯಾತ್ರಾರ್ಥಿಗಳು “ಚೋರ್ ಚೋರ್” (ಕಳ್ಳರು,ಕಳ್ಳರು) ಎಂದು ಘೋಷಣೆ ಕೂಗುತ್ತಿರುವುದನ್ನು ತೋರಿಸುವ ವಿಡಿಯೊ ಸೋಷ್ಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ಪವಿತ್ರತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ವಿಡಿಯೊವೊಂದರಲ್ಲಿ ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಶಹಜೈನ್ ಬುಗ್ತಿ ಇತರರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಪ್ರತಿಭಟನೆಗೆ ಔರಂಗಜೇಬ್ ಪರೋಕ್ಷವಾಗಿ ಪದಚ್ಯುತ ಇಮ್ರಾನ್ ಖಾನ್ ಅವರನ್ನು ದೂಷಿಸಿದರು. “ನಾನು ಈ ಪುಣ್ಯಭೂಮಿಯಲ್ಲಿ ಈ ವ್ಯಕ್ತಿಯ ಹೆಸರನ್ನು ಹೇಳುವುದಿಲ್ಲ. ಏಕೆಂದರೆ ನಾನು ಈ ಭೂಮಿಯನ್ನು ರಾಜಕೀಯಕ್ಕೆ ಬಳಸಲು ಬಯಸುವುದಿಲ್ಲ. ಆದರೆ ಅವರು ಪಾಕಿಸ್ತಾನಿ ಸಮಾಜವನ್ನು ನಾಶಪಡಿಸಿದ್ದಾರೆ ಎಂದು ಔರಂಗಜೇಬ್ ಹೇಳಿರುವುದನ್ನು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಉಲ್ಲೇಖಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೌದಿ ಅರೇಬಿಯಾಕ್ಕೆ ತಮ್ಮ ಮೊದಲ ಮೂರು ದಿನಗಳ ಅಧಿಕೃತ ಪ್ರವಾಸದಲ್ಲಿರುವಾಗ ಇದು ಸಂಭವಿಸಿದೆ. ಹತ್ತಾರು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಪಾಕಿಸ್ತಾನದ ಪ್ರಧಾನಿ ಜತೆ ಇದ್ದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿ 150 ಮಂದಿ ವಿರುದ್ಧ ಪ್ರಕರಣ ದಾಖಲು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಕ್ಯಾಬಿನೆಟ್ನಲ್ಲಿ ಇದ್ದ ಕೆಲವು ಸಚಿವರು ಸೇರಿ ಒಟ್ಟು 150 ಮಂದಿಯ ವಿರುದ್ಧ ಪಂಜಾಬ್ ಪ್ರಾಂತ್ಯದ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.ಘೋಷಣೆ ಕೂಗಿದವರ ವಿರುದ್ಧ ಸೌದಿ ಅರೇಬಿಯಾದ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಮದೀನಾದಲ್ಲಿರುವ ಪವಿತ್ರವಾದ ಪ್ರವಾದಿ ಮಸೀದಿ ಬಳಿ ಹೀಗೆ ಕೆಟ್ಟ ಶಬ್ದಗಳನ್ನು ಮಾತನಾಡುವ ಮೂಲಕ ಅಲ್ಲಿ ಗೂಂಡಾಗಿರಿ ತೋರಲಾಗಿದೆ. ಈ ಮೂಲಕ ಅಪವಿತ್ರಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಮ್ರಾನ್ ಖಾನ್, ಅವರ ಸರ್ಕಾರದಲ್ಲಿದ್ದ ಸಚಿವರಾದ ಫಾವದ್ ಚೌಧರಿ, ಶೇಖ್ ರಶೀದ್, ಪ್ರಧಾನಿ ಮಾಜಿ ಸಲಹೆಗಾರನಾಗಿದ್ದ ಶಹಬಾಜ್ ಗಲ್, ಮಾಜಿ ಸ್ಪೀಕರ್ ಖಾಸಿಂ ಸೂರಿ, ಪ್ರಧಾನಿ ಸಹಾಯಕರಾಗಿದ್ದ ಅನಿಲ್ ಮುಸ್ರತ್ ಸೇರಿ ಇನ್ನೂ ಹಲವರ ಹೆಸರು ಎಫ್ಐಆರ್ನಲ್ಲಿದೆ.ಅಂದಹಾಗೇ, ಪಂಜಾಬ್ ಪ್ರಾಂತ್ಯದ (ಪಾಕಿಸ್ತಾನದಲ್ಲಿರುವ) ಫೈಸಲಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Mon, 2 May 22