AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದಿ ಅರೇಬಿಯಾದಲ್ಲಿ ಗಲಾಟೆ; ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿ 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪಂಜಾಬ್​ ಪೊಲೀಸರು​

ಘೋಷಣೆ ಕೂಗಿದವರ ವಿರುದ್ಧ ಸೌದಿ ಅರೇಬಿಯಾದ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಮದೀನಾದಲ್ಲಿರುವ ಪವಿತ್ರವಾದ ಪ್ರವಾದಿ ಮಸೀದಿ ಬಳಿ ಹೀಗೆ ಕೆಟ್ಟ ಶಬ್ದಗಳನ್ನು ಮಾತನಾಡುವ ಮೂಲಕ ಅಲ್ಲಿ ಗೂಂಡಾಗಿರಿ ತೋರಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಗಲಾಟೆ; ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿ 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪಂಜಾಬ್​ ಪೊಲೀಸರು​
ಇಮ್ರಾನ್ ಖಾನ್
TV9 Web
| Edited By: |

Updated on: May 01, 2022 | 5:46 PM

Share

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಅವರ ಕ್ಯಾಬಿನೆಟ್​​ನಲ್ಲಿ ಇದ್ದ ಕೆಲವು ಸಚಿವರು ಸೇರಿ ಒಟ್ಟು 150 ಮಂದಿಯ ವಿರುದ್ಧ ಪಂಜಾಬ್ ಪ್ರಾಂತ್ಯದ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಪಾಕ್​​ನ ಈಗಿನ ಪ್ರಧಾನಿ ಶೆಹಬಾಜ್​ ಶರೀಫ್​ ಮತ್ತು ಅವರ ನಿಯೋಗ ಸೌದಿ ಅರೇಬಿಯಾದ ಮಸೀದ್​ ಇ ನಬ್ವಿಗೆ ಭೇಟಿಕೊಟ್ಟಿತ್ತು. ಈ ವೇಳೆ ಅಲ್ಲಿಯೇ ನಿಂತಿದ್ದ ಅನೇಕರು ಶೆಹಬಾಜ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಶೆಹಬಾಜ್​ ಮತ್ತು ಅವರೊಂದಿಗೆ ಇದ್ದವರನ್ನು ಕಳ್ಳರು, ದೇಶದ್ರೋಹಿಗಳು ಎಂದು ನಿಂದಿಸಿ, ಗಲಾಟೆ ಎಬ್ಬಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ವೈರಲ್ ಆಗಿದೆ. ಹೀಗೆ ಘೋಷಣೆ ಕೂಗಿದವರು ಪಾಕಿಸ್ತಾನದ ಮೂಲದವರೇ ಆಗಿದ್ದು, ಇಮ್ರಾನ್​ ಖಾನ್​ ಬೆಂಬಲಿಗರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.  ಅಷ್ಟೇ ಅಲ್ಲ, ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಘೋಷಣೆ ಕೂಗಿದವರ ವಿರುದ್ಧ ಸೌದಿ ಅರೇಬಿಯಾದ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಮದೀನಾದಲ್ಲಿರುವ ಪವಿತ್ರವಾದ ಪ್ರವಾದಿ ಮಸೀದಿ ಬಳಿ ಹೀಗೆ ಕೆಟ್ಟ ಶಬ್ದಗಳನ್ನು ಮಾತನಾಡುವ ಮೂಲಕ ಅಲ್ಲಿ ಗೂಂಡಾಗಿರಿ ತೋರಲಾಗಿದೆ. ಈ ಮೂಲಕ ಅಪವಿತ್ರಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಮ್ರಾನ್ ಖಾನ್​, ಅವರ ಸರ್ಕಾರದಲ್ಲಿದ್ದ ಸಚಿವರಾದ ಫಾವದ್​ ಚೌಧರಿ, ಶೇಖ್​ ರಶೀದ್​, ಪ್ರಧಾನಿ ಮಾಜಿ ಸಲಹೆಗಾರನಾಗಿದ್ದ ಶಹಬಾಜ್​ ಗಲ್​, ಮಾಜಿ ಸ್ಪೀಕರ್​ ಖಾಸಿಂ ಸೂರಿ, ಪ್ರಧಾನಿ ಸಹಾಯಕರಾಗಿದ್ದ ಅನಿಲ್​ ಮುಸ್ರತ್​ ಸೇರಿ ಇನ್ನೂ ಹಲವರ ಹೆಸರು ಎಫ್​ಐಆರ್​​ನಲ್ಲಿದೆ.ಅಂದಹಾಗೇ, ಪಂಜಾಬ್​ ಪ್ರಾಂತ್ಯದ (ಪಾಕಿಸ್ತಾನದಲ್ಲಿರುವ) ಫೈಸಲಾಬಾದ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್​ ಶರೀಫ್​ ಮತ್ತು ಅವರ ಬೆಂಬಲಿಗರು ಸೌದಿ ಅರೇಬಿಯಾದ ಪವಿತ್ರವಾದ ಮಸೀದಿಗೆ ಭೇಟಿ ಕೊಡುತ್ತಾರೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ, ಅವರ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನೆ ನಡೆಸಲೆಂದೇ ಸುಮಾರು 100 ಜನರನ್ನು ಪಾಕಿಸ್ತಾನ ಮತ್ತು ಯುನೈಟೆಡ್​ ಕಿಂಗ್​ಡಮ್​​ನಿಂದ ಕಳಿಸಲಾಗಿದೆ. ಇದರ ಉಸ್ತುವಾರಿ ವಹಿಸಿದ್ದು ಪಾಕಿಸ್ತಾನ ತೆಹ್ರೀಕ್​ ಐ ಇನ್ಸಾಫ್​ ಪಕ್ಷದ ನಾಯಕರು ಎಂಬುದು ಗೊತ್ತಾಗಿದೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಹಾಗೇ, ಎಫ್​ಐಆರ್​​ನಲ್ಲಿ ಯಾರೆಲ್ಲರ ಹೆಸರು ಉಲ್ಲೇಖವಾಗಿದೆಯೋ ಅವರ ವಿರುದ್ಧ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳುವುದಾಗಿ ಫೈಸಲಾಬಾದ್ ಪೊಲೀಸರು ತಿಳಿಸಿದ್ದಾರೆ.

ಆರೋಪ ತಳ್ಳಿ ಹಾಕಿದ ಇಮ್ರಾನ್ ಖಾನ್ ಇನ್ನು ಸೌದಿ ಅರೇಬಿಯಾದಲ್ಲಿ ನಡೆದ ಗಲಾಟೆಗೂ ನನಗೂ ಸಂಬಂಧವಿಲ್ಲ. ಅಂಥ ಪವಿತ್ರ ಸ್ಥಳದಲ್ಲಿ ಒಬ್ಬ ಪ್ರಧಾನಿ ವಿರುದ್ಧ ಕೂಗಲಾದ ಘೋಷಣೆಗಳು ನಿಜಕ್ಕೂ ಅಚ್ಚರಿ ಹುಟ್ಟಿಸಿದೆ ಮತ್ತು ನನಗೂ ಶಾಕ್ ಆಗಿದೆ. ನನಗೆ ಇಂಥ ಘಟನೆಗಳನ್ನೆಲ್ಲ ಕಲ್ಪನೆಯನ್ನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀ ನಾರಾಯಣ ಮೇಘಾಜಿ ಲೋಖಂಡೆ: ಭಾರತೀಯ ಕಾರ್ಮಿಕ ಸಂಘದ ಪಿತಾಮಹನ ಬಗ್ಗೆ ನಿಮಗೆಷ್ಟು ಗೊತ್ತು?