ಮೇ 9ರ ಒಳಗೆ ಉಕ್ರೇನ್ ಯುದ್ಧ ಮುಗಿಸುವ ಆತುರ ರಷ್ಯಾಕ್ಕೆ ಇಲ್ಲ: ಪುಟಿನ್ ಆಪ್ತ ಲಾವ್ರೊವ್
ಉಕ್ರೇನ್ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮೇ 9ಕ್ಕೆ ಮುಕ್ತಾಯಗೊಳಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್ರೊವ್ ಹೇಳಿದ್ದಾರೆ.
ಮಾಸ್ಕೊ: ಉಕ್ರೇನ್ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮೇ 9ಕ್ಕೆ ಮುಕ್ತಾಯಗೊಳಿಸುವ ಯಾವುದೇ ಉದ್ದೇಶ ನಮಗಿಲ್ಲ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸರ್ಗೆ ಲಾವ್ರೊವ್ ಹೇಳಿದ್ದಾರೆ. ವ್ಲಾದಿಮಿರ್ ಪುಟಿನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಾವ್ರೊವ್ ಅವರ ಹೇಳಿಕೆಯು ಜಗತ್ತಿನ ಗಮನ ಸೆಳೆದಿದೆ. 1945ರ ಮೇ 9ರಂದು ಹಿಟ್ಲರ್ ಆಡಳಿತದ ಜರ್ಮನಿಯನ್ನು ರಷ್ಯಾ ಸೋಲಿಸಿದ ಕುರುಹಾಗಿ ಪ್ರತಿ ವರ್ಷ ಮೇ 9ರಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಬೃಹತ್ ಮಿಲಿಟರಿ ಪೆರೇಡ್ ನಡೆಯುತ್ತದೆ. ಈ ಪೆರೇಡ್ನಲ್ಲಿ ರಷ್ಯಾ ತನ್ನ ಜಗತ್ತಿಗೆ ತನ್ನ ತೋಳ್ಬಲ ಪ್ರದರ್ಶಿಸುತ್ತದೆ. ಐತಿಹಾಸಿಕವಾಗಿ ರಷ್ಯಾಕ್ಕೆ ಅತಿಮುಖ್ಯವಾಗಿರುವ ಈ ದಿನದಂದೇ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಜಯಗಳಿಸಿದ್ದಾಗಿ ರಷ್ಯಾ ಘೋಷಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ವಿಶ್ಲೇಷಣೆಯನ್ನು ತಳ್ಳಿ ಹಾಕಿರುವ ಲಾವ್ರೊವ್, ಯುದ್ಧ ಮತ್ತಷ್ಟು ದಿನಗಳ ಕಾಲ ಮುಂದುವರಿಯಬಹುದು ಎಂಬ ಹೊಸ ವಿಶ್ಲೇಷಣೆಗಳನ್ನು ಹುಟ್ಟುಹಾಕುವುದರೊಂದಿಗೆ ಉಕ್ರೇನ್ನಲ್ಲಿ ರಷ್ಯಾ ನಿಜಕ್ಕೂ ಸಾಧಿಸಬಯಸಿರುವುದು ಏನು ಎಂಬ ಪ್ರಶ್ನೆಯನ್ನೂ ಚರ್ಚೆಗೆ ತಂದಿದೆ.
ವಿಜಯೋತ್ಸವ ಸೇರಿದಂತೆ ಯಾವುದೇ ದಿನಾಂಕಕ್ಕೆ ಅನುಗುಣವಾಗಿ ನಮ್ಮ ಸೇನೆಯು ತನ್ನ ಕಾರ್ಯಾಚರಣೆಗಳನ್ನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಉಕ್ರೇನ್ ಕಾರ್ಯಾಚರಣೆಯಲ್ಲಿ ರಷ್ಯಾ ತನ್ನ ಸೇನಾ ಸಿಬ್ಬಂದಿ ಮತ್ತು ನಾಗರಿಕ ಸಾವುನೋವು ಕಡಿಮೆ ಮಾಡಲು ಮೊದಲ ಆದ್ಯತೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು. ಪ್ರತಿ ವರ್ಷವೂ ವಿಜಯೋತ್ಸವ ದಿನದಂದು ರಷ್ಯಾದಲ್ಲಿ ಬೃಹತ್ ಮಿಲಿಟರಿ ಪೆರೇಡ್ ನಂತರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾಷಣೆ ಇರುತ್ತಿತ್ತು. ಆದರೆ ಈ ವರ್ಷದ ಆಚರಣೆಗಳ ವಿವರಗಳು ಇನ್ನೂ ಅಸ್ಪಷ್ಟವಾಗಿವೆ. ಉಕ್ರೇನ್ನಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ರಷ್ಯಾ ವ್ಯಾಪಕ ಹಿನ್ನಡೆ ಅನುಭವಿಸಿದೆ. ಉಕ್ರೇನ್ನಲ್ಲಿ ನಾಜಿವಾದವನ್ನು ಸಂಪೂರ್ಣವಾಗಿ ಹತ್ತಿಕ್ಕಿದ ನಂತರವೇ ಶಾಂತಿ ಸ್ಥಾಪನೆ ಎಂದು ರಷ್ಯಾ ಇದೀಗ ಹೇಳಿಕೆಗಳನ್ನು ನೀಡುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ರಷ್ಯಾ ಮೇ 9ರ ವಿಜಯೋತ್ಸವವನ್ನು ಉತ್ಸಾಹದಿಂದ ಆಚರಿಸುತ್ತದೆ. ರಷ್ಯಾ ದೇಶವನ್ನು ನಾಜಿಗಳ ಹಿಡಿತದಿಂದ ಬಿಡುಗಡೆಗೊಳಿಸಲು ತ್ಯಾಗ ಮಾಡಿದವರನ್ನು ನೆನೆಯುತ್ತೇವೆ. ಅಣ್ವಸ್ತ್ರ ಯುದ್ಧ ನಡೆಯುವುದನ್ನು ತಡೆಯಲು ರಷ್ಯಾ ಎಲ್ಲ ರೀತಿಯಲ್ಲಿಯೂ ಕಾಳಜಿ ವಹಿಸುತ್ತಿದೆ ಎಂದು ಲ್ಯಾವ್ರೊವ್ ಹೇಳಿದರು. ಉಕ್ರೇನ್ ಮೇಲೆ ಕಳೆದ ಫೆಬ್ರುವರಿ 24ರಂದು ರಷ್ಯಾ ದಾಳಿ ನಡೆಸಿತು. ಅಂದಿನಿಂದ ಇಂದಿನವರೆಗೂ ಮುಂದುವರೆದಿರುವ ಸಂಘರ್ಷದಲ್ಲಿ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ. ರಷ್ಯಾದ ಹಲವು ಜನರಲ್ಗಳೂ ಸೇರಿ ದೊಡ್ಡ ಸಂಖ್ಯೆಯಲ್ಲಿ ಸೈನಿಕರು ಸಾವನ್ನಪ್ಪಿದ್ದಾರೆ. ರಷ್ಯಾ ದಾಳಿಯ ನಂತರ ಉಕ್ರೇನ್ನ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ನೆರೆ ದೇಶಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿಯ ದಿನವೇ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾದಿಂದ ತೀವ್ರ ದಾಳಿ