ವಿಶ್ವಸಂಸ್ಥೆ ಮುಖ್ಯಸ್ಥರ ಭೇಟಿಯ ದಿನವೇ ಉಕ್ರೇನ್ ರಾಜಧಾನಿ ಕೀವ್ ನಗರದ ಮೇಲೆ ರಷ್ಯಾದಿಂದ ತೀವ್ರ ದಾಳಿ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ಗೆ 33 ಶತಕೋಟಿ ಡಾಲರ್ ಮೊತ್ತದ ನೆರವು ಘೋಷಿಸಿದ್ದು, ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್ ಪಡೆಗಳನ್ನು ಸಜ್ಜುಗೊಳಿಸಲು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.
ಕೀವ್: ಪೂರ್ವ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡಿದೆ. ಯುದ್ಧವು ಇದೀಗ 9ನೇ ವಾರಕ್ಕೆ ಪ್ರವೇಶಿಸಿದ್ದು, ಕದನ ವಿರಾಮದ ಸಾಧ್ಯತೆಯೇ ಕ್ಷೀಣಗೊಂಡಿದೆ. ದಿನದಿಂದ ದಿನಕ್ಕೆ ಅಮೆರಿಕ-ಉಕ್ರೇನ್ ಸಂಖ್ಯೆ ಗಟ್ಟಿಯಾಗುತ್ತಿದ್ದು, 3ನೇ ಮಹಾಯುದ್ಧದ ಭೀತಿಗೆ ನಾಂದಿ ಹಾಡಿದೆ. ವಿಶ್ವಸಂಸ್ಥೆ ಮುಖ್ಯಸ್ಥ ಆಂಟೊನಿಯೊ ಗುಟೇರಸ್ ಭೇಟಿಯ ಸಮಯದಲ್ಲಿಯೇ ಯುದ್ಧಗ್ರಸ್ಥ ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ರಷ್ಯಾದ ಕ್ಷಿಪಣಿಗಳು ಅಪ್ಪಳಿಸಿವೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್ಗೆ 33 ಶತಕೋಟಿ ಡಾಲರ್ ಮೊತ್ತದ ನೆರವು ಘೋಷಿಸಿದ್ದು, ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್ ಪಡೆಗಳನ್ನು ಸಜ್ಜುಗೊಳಿಸಲು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ನ್ಯಾಟೊ ಸದಸ್ಯ ದೇಶಗಳ ವಿರುದ್ಧ ಹರಿಹಾಯ್ದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬಲ್ಗೇರಿಯಾ ಮತ್ತು ಪೊಲೆಂಡ್ಗಳಿಗೆ ನೈಸರ್ಗಿಕ ಅನಿಲ ಸರಬರಾಜು ಕಡಿತಗೊಳಿಸಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ 10 ಮುಖ್ಯ ಬೆಳವಣಿಗೆಗಳಿವು….
- ಉಕ್ರೇನ್ ಅಧ್ಯಕ್ಷ ವೊಡೊಡಿಮಿರ್ ಝೆಲೆನ್ಸ್ಕಿ ಅವರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಭೇಟಿಯಾದ ಕೆಲ ಸಮಯದ ನಂತರ ರಾಜಧಾನಿಯ (ಕೀವ್) ಮೇಲೆ ರಷ್ಯಾದ ದಾಳಿ ನಡೆಯಿತು. ಈ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
- ಕೀವ್ ನಗರಕ್ಕೆ ಮುತ್ತಿಗೆ ಹಾಕಿದ್ದ ತನ್ನ ಸೇನಾಪಡೆಯನ್ನು ರಷ್ಯಾ ಹಿಂಪಡೆದ ನಂತರ ರಾಜಧಾನಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿತ್ತು. ಆದರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ಮತ್ತು ಬಲ್ಗೇರಿಯಾದ ಪ್ರಧಾನಿ ಕಿರಿಲ್ ಪೆಟ್ಕೊವ್ ಅವರು ಉಕ್ರೇನ್ಗೆ ಭೇಟಿ ನೀಡಿದ್ದು ರಷ್ಯಾವನ್ನು ಕೆರಳಿಸಿದೆ. ಹೀಗಾಗಿಯೇ ರಷ್ಯಾ ಕ್ಷಿಪಣಿ ದಾಳಿಗೆ ಮುಂದಾಗಿದೆ.
- ಉಕ್ರೇನ್ನಲ್ಲಿ ರಷ್ಯಾ ನಡೆಸಿರುವ ಯುದ್ಧಾಪರಾಧಗಳ ಬಗ್ಗೆ ವಿಸ್ತೃತ ತನಿಖೆ ಆಗಬೇಕು ಎಂದು ತಮ್ಮ ಉಕ್ರೇನ್ ಭೇಟಿ ಸಂದರ್ಭ ಆಂಟೊನಿಯೊ ಗುಟೇರಸ್ ಒತ್ತಾಯಿಸಿದ್ದರು. ಸಾಮೂಹಿಕ ಸಮಾಧಿಗಳು ಮತ್ತು ಬೀದಿಬದಿಯಲ್ಲಿ ಹೆಣಗಳು ಪತ್ತೆಯಾಗಿದ್ದ ಬುಚಾ ನಗರಕ್ಕೂ ಅವರು ಭೇಟಿ ನೀಡಿದ್ದರು.
- ಬಲ್ಗೇರಿಯಾದ ಪ್ರಧಾನಿ ಕಿರಿಲ್ ಪೆಟ್ಕೊವ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಪರಸ್ಪರ ಮಾತುಕತೆ ನಡೆಸಿದರು. ಇಂದನ ಮತ್ತು ರಕ್ಷಣಾ ವ್ಯವಹಾರಗಳ ಸಹಕಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಹಲವು ವಿಚಾರಗಳು ಚರ್ಚೆಗೆ ಬಂದವು. ಉಕ್ರೇನ್ ನಿಲುವಿನಿಂದ ಕೆರಳಿದ ರಷ್ಯಾ, ಬಲ್ಗೇರಿಯಾಕ್ಕೆ ನೈಸರ್ಗಿಕ ಅನಿಲ ಸರಬರಾಜು ಸ್ಥಗಿತಗೊಳಿಸಿತ್ತು.
- ಕೀವ್ ನಗರದ ಮೇಲೆ ರಷ್ಯಾ ಇತ್ತೀಚೆಗೆ ನಡೆಸಿದ ದಾಳಿಗಳನ್ನು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ಅಮೆರಿಕ ರಕ್ಷಣಾ ಇಲಾಖೆ ಹೇಳಿದೆ. ಎಂಥ ಕ್ಷಿಪಣಿಗಳು ಉಕ್ರೇನ್ ರಾಜಧಾನಿಯ ಮೇಲೆ ಅಪ್ಪಳಿಸಿದವು ಎನ್ನುವುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೆಂಟಗನ್ನ ಮಾಧ್ಯಮ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
- ರಷ್ಯಾ ಹಾರಿಬಿಟ್ಟ ಕ್ಷಿಪಣಿಯೊಂದು ಉಕ್ರೇನ್ನ ಯುಝ್ನೌಕ್ರಾಯಿನ್ಸ್ಕ್ ನಗರದ ಅಣು ಸ್ಥಾವರದ ಮೇಲೆ ನೇರವಾಗಿ ಹಾರಿ ಹೋಗಿದೆ. ತುಸು ಹೆಚ್ಚು ಕಡಿಮೆಯಾಗಿದ್ದರೂ ಅಣು ಸ್ಥಾವರ ಸ್ಫೋಟಗೊಂಡು, ಊಹಿಸಲು ಆಗದಂಥ ಅನಾಹುತ ಸಂಭವಿಸುತ್ತಿತ್ತು ಎಂದು ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (The International Atomic Energy Agency – IAEA) ಎಚ್ಚರಿಸಿದೆ.
- ಉಕೇನ್ಗೆ ಅಮೆರಿಕ ಘೋಷಿಸಿರುವ 33 ಶತಕೋಟಿ ಡಾಲರ್ ಸಹಾಯ ಮೊತ್ತವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ವಾಗತಿಸಿದ್ದಾರೆ. ವಿಶ್ವದ ಹಲವು ಪ್ರಜಾಪ್ರಭುತ್ವ ದೇಶಗಳಿಗೆ ರಷ್ಯಾ ಒಡ್ಡಿರುವ ಬೆದರಿಕೆ ಪರಿಗಣಿಸಿ, ಅಮೆರಿಕ ಇನ್ನಷ್ಟು ನೆರವು ನೀಡಬೇಕು ಎಂದು ಕೋರಿದ್ದಾರೆ.
- ಉಕ್ರೇನ್ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಹೋರಾಟ ತೀವ್ರಗೊಂಡಿದೆ. ರಷ್ಯಾದ ದಾಳಿಯನ್ನು ಉಕ್ರೇನ್ ಪಡೆಗಳು ದೃಢವಾಗಿ ಎದುರಿಸುತ್ತಿವೆ.
- ಕಳೆದ ಫೆಬ್ರುವರಿ 24ರಂದು ರಷ್ಯಾ ಆರಂಭಿಸಿದ ದಾಳಿಯಲ್ಲಿ ಈವರೆಗೆ 22,800 ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿದೆ.
- ಯುದ್ಧ ಆರಂಭವಾದ ದಿನದಿಂದ ಈವರೆಗೆ ಉಕ್ರೇನ್ನ 50 ಲಕ್ಷಕ್ಕೂ ಹೆಚ್ಚು ಜನರು ದೇಶ ತೊರೆದಿದ್ದಾರೆ. ಉಕ್ರೇನ್ ಪ್ರಜೆಗಳ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ಮತ್ತು ಹಿಂಸಾಚಾರಗಳ ಮೂಲಕ ದೌರ್ಜನ್ಯ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಸಂಪೂರ್ಣ ಮಾಹಿತಿಗೆಇಲ್ಲಿ ಕ್ಲಿಕ್ ಮಾಡಿ ಇನ್ನೂ ಹೆಚ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಇಕ್ ಮಾಡಿ
ಇದನ್ನೂ ಓದಿ: ಗೆಲುವಿನ ಭರವಸೆ ಕಳೆದುಕೊಂಡ ರಷ್ಯಾ, 3ನೇ ಮಹಾಯುದ್ಧದ ಬೆದರಿಕೆಗೆ ಉಕ್ರೇನ್ ತಿರುಗೇಟು; ಸಂಘರ್ಷದ 10 ಮುಖ್ಯ ಬೆಳವಣಿಗೆಗಳು
ಇದನ್ನೂ ಓದಿ: ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ
Published On - 9:32 am, Fri, 29 April 22