AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Sunak: ಚೀನಾದೊಂದಿಗಿನ ಸಂಬಂಧದ ಸುವರ್ಣ ಯುಗ ಮುಗಿಯಿತು; ಬ್ರಿಟನ್ ಪ್ರಧಾನಿ ರಿಷಿ ಸುನಕ್

ಇಂಗ್ಲೆಂಡ್​​ನ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡಿದೆ. ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯವಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಎಚ್ಚರಿಸಿದ್ದಾರೆ.

Rishi Sunak: ಚೀನಾದೊಂದಿಗಿನ ಸಂಬಂಧದ ಸುವರ್ಣ ಯುಗ ಮುಗಿಯಿತು; ಬ್ರಿಟನ್ ಪ್ರಧಾನಿ ರಿಷಿ ಸುನಕ್
ರಿಷಿ ಸುನಕ್
TV9 Web
| Updated By: ಸುಷ್ಮಾ ಚಕ್ರೆ|

Updated on:Nov 29, 2022 | 8:09 AM

Share

ಲಂಡನ್: ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರಿಗೆ ಥಳಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ (Britain Government) ಚೀನಾವನ್ನು ಖಂಡಿಸಿತ್ತು. ಇದರ ಬೆನ್ನಲ್ಲೇ ಮಾತನಾಡಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ (Rishi Sunak), ಇಂಗ್ಲೆಂಡ್​​ನ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ (China) ವ್ಯವಸ್ಥಿತ ಸವಾಲನ್ನು ಒಡ್ಡಿದೆ. ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯವಾಗಿದೆ ಎಂದು ಎಚ್ಚರಿಸಿದ್ದಾರೆ.

ವಿದೇಶಾಂಗ ನೀತಿಯ ಕುರಿತಾದ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ ಮಾತನಾಡಿದ ರಿಷಿ ಸುನಕ್, ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ. ವಿಶ್ವ ವ್ಯವಹಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಚೀನಾದ ಪ್ರಾಮುಖ್ಯತೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಲು ಸಾಧ್ಯವಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಅನೇಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬದ್ಧ, ಆದರೆ ಸೂಕ್ತ ನಿರ್ಧಾರಕ್ಕೆ ಸಮಯ ಬೇಕು: ರಿಷಿ ಸುನಕ್

ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ಕೆಲವರು ಸುನಕ್ ಅವರನ್ನು ಟೀಕಿಸಿದ್ದಾರೆ. ಬಾಲಿಯಲ್ಲಿ ಈ ತಿಂಗಳಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ರಿಷಿ ಸುನಕ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಯೋಜಿತ ಸಭೆಯು ವಿಫಲವಾಗಿತ್ತು. ಕಳೆದ ವಾರ ಲಂಡನ್ ಸೂಕ್ಷ್ಮ ಸರ್ಕಾರಿ ಕಟ್ಟಡಗಳಿಂದ ಚೀನಾ ನಿರ್ಮಿತ ಭದ್ರತಾ ಕ್ಯಾಮೆರಾಗಳನ್ನು ನಿಷೇಧಿಸಿತ್ತು.

ಉಕ್ರೇನ್‌ ವಿಚಾರದಲ್ಲಿ ಇಂಗ್ಲೆಂಡ್​​ನ ಮಾಜಿ ಪ್ರಧಾನ ಮಂತ್ರಿಗಳಾದ ಬೋರಿಸ್ ಜಾನ್ಸನ್ ಮತ್ತು ಟ್ರಸ್ ಅವರು ನೀಡಿದ ಬೆಂಬಲವನ್ನು ಉಳಿಸಿಕೊಂಡು ಮುಂದಿನ ವರ್ಷ ಕೈವ್‌ಗೆ ಇಂಗ್ಲೆಂಡ್ ಸರ್ಕಾರ ಮಿಲಿಟರಿ ಸಹಾಯವನ್ನು ನೀಡಲಿದೆ. ನಾವು ಸದಾ ಉಕ್ರೇನ್​ನೊಂದಿಗೆ ನಿಲ್ಲುತ್ತೇವೆ. ಮುಂದಿನ ವರ್ಷ ನಾವು ನಮ್ಮ ಮಿಲಿಟರಿ ಸಹಾಯವನ್ನು ಹೆಚ್ಚಿಸುತ್ತೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತವು ಕುಟುಂಬ ಮತ್ತು ಸಂಸ್ಕೃತಿಯನ್ನು ಪರಸ್ಪರ ಬೆಸೆದುಕೊಂಡಿದೆ; ರಿಷಿ ಸುನಕ್ ಪುತ್ರಿ ಅನೌಷ್ಕಾ

ಇಂಗ್ಲೆಂಡ್ ಸದ್ಯಕ್ಕೆ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಆರ್ಥಿಕ ನೀತಿಗಳ ವಿರುದ್ಧ ಜನರು ಸಿಟ್ಟಿಗೆದ್ದಿದ್ದರು. ಅದಾದ ನಂತರ ಬಂದ ಲಿಜ್ ಟ್ರಸ್ ಸಹ ನಿಭಾಯಿಸಲಾಗದೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದ ರಿಷಿ ಸುನಕ್ ಪ್ರಧಾನಿ ಹುದ್ದೆಗೇರುವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ರಿಷಿ ಸುನಕ್ ಬಗ್ಗೆ ನಿರೀಕ್ಷೆಗಳು ಕೂಡ ಸಾಕಷ್ಟಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:09 am, Tue, 29 November 22