ಉಕ್ರೇನ್ (Ukraine) ವಿರುದ್ಧ ಯುದ್ಧ ಮಾಡಲು ನಿರಾಕರಿಸಿದ ತನ್ನ ಸೇನೆಯ ಸೈನಿಕರಿಗೆ ರಷ್ಯಾ (Russia) ದೈಹಿಕ ಹಿಂಸೆ ನೀಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೈನಿಕರನ್ನು ಜೈಲಿಗೆ ನೂಕಿ, ಥಳಿಸಲಾಗುತ್ತಿದೆ ಎಂದು ಬಿಬಿಸಿ ತಮ್ಮ ವರದಿಯಲ್ಲಿ ಹೇಳಿದೆ. ಯುದ್ಧಕ್ಕೆ ಬೇಕಾದ ಸರಿಯಾದ ಸಿದ್ಧತೆ ಅಥವಾ ಯೋಜನೆಗಳನ್ನು ರಷ್ಯಾ ಮಾಡಿಕೊಂಡಿಲ್ಲ ಎಂದು ರಷ್ಯಾದ ಯೋಧರು ಮತ್ತು ಅವರ ಕುಟುಂಬಗಳು ವಿವರಿಸಿವೆ. ಯೋಧರಿಗೆ ಸ್ವಲ್ಪವೇ ಮಾಹಿತಿ ನೀಡಿ ಯುದ್ಧಕ್ಕೆ ಅಣಿಯಾಗುವಂತೆ ಆದೇಶ ನೀಡಲಾಗುತ್ತಿದೆ ಎಂದು ಅವರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಇಬ್ಬರು ರಷ್ಯಾ ಯೋಧರ ಹೇಳಿಕೆಯನ್ನು ವರದಿ ಉಲ್ಲೇಖಿಸಿದ್ದು, ಇದರಲ್ಲಿ ಒಬ್ಬರು ಯೋಧರು, ಯೋಧರನ್ನು ಸಾವಿನೆಡೆಗೆ ಮುನ್ನಡೆಸಲು ನಿರಾಕರಿಸಿರುವುದಾಗಿ ಹೇಳಿದ್ದಾರೆ. ಉಕ್ರೇನ್ ಮೇಲೆ ಅತಿಕ್ರಮಣ ಆರಂಭವಾದಾಗ ಸೇನಾ ಪಡೆಗೆ ಸಿಕ್ಕಿದ ಕಡಿಮೆ ಬೆಂಬಲದಿಂದಾಗಿ ನಾನು ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿದೆ. ನನ್ನ ಈ ನಿಲುವಿನಿಂದಾಗಿ ನನಗೂ ಇತರ ಸೈನಿಕರನ್ನೂ ಬಂಧನದಲ್ಲಿಡಲಾಯಿತು. ನನಗೆ ಹೊಡೆದು, ನನ್ನ ಮೇಲೆ ಇನ್ನೇನು ಗುಂಡು ಹಾರಿಸುತ್ತಾರೆ ಎಂಬಂತೆ ಹೊರಗೆ ಎಳೆದುಕೊಂಡು ಹೋಗಲಾಯಿತು. ನೆಲದಲ್ಲಿ ಮಲಗಿ 10ರ ವರೆಗೆ ಎಣಿಸುವಂತೆ ಹೇಳಿದರು. ನಾನು ನಿರಾಕರಿಸಿದೆ. ಅವರು ಪಿಸ್ತೂಲ್ನಿಂದ ಹಲವು ಬಾರಿ ನನಗೆ ಹೊಡೆದರು. ನನ್ನ ಮುಖ ರಕ್ತಸಿಕ್ತವಾಗಿತ್ತು ಎಂದು ಯೋಧ ಹೇಳಿರುವುದಾಗಿ ಬಿಬಿಸಿ ವರದಿ ಹೇಳಿದೆ.
ನಾನು ನನ್ನ ಜತೆಗಿರುವ ಯೋಧರನ್ನು ಸಾವಿನೆಡೆಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕಾಗಿ ನನ್ನ ಜತೆ ನಾಲ್ವರು ಸೇನಾ ಅಧಿಕಾರಿಗಳನ್ನು ಕಟ್ಟಡದ ಕೆಳಮಹಡಿಯಲ್ಲಿರಿಸಲಾಗಿತ್ತು. ಆ ಕಟ್ಟಡ ಶೆಲ್ ದಾಳಿಗೊಳಗಾಗಿದ್ದು, ಅವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ರಷ್ಯಾದ ಪಡೆ ಯೋಧನ ಅಮ್ಮನಲ್ಲಿ ಹೇಳಿತ್ತು.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತನ್ನ ದೇಶಕ್ಕೆ ಶಾಂತಿಯನ್ನು ತರಲು ಮೀಸಲಾಗಿರುವ ಚಳಿಗಾಲದಲ್ಲಿ ವಿಶೇಷ ಜಾಗತಿಕ ಶಾಂತಿ ಶೃಂಗಸಭೆಯನ್ನು ಕರೆಯುವ ತನ್ನ ಕಲ್ಪನೆಯನ್ನು ಬೆಂಬಲಿಸುವಂತೆ ಏಳು ರಾಷ್ಟ್ರಗಳ ಗುಂಪಿನ ನಾಯಕರನ್ನು ಒತ್ತಾಯಿಸಿರುವ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಉಕ್ರೇನಿಯನ್ ಶಾಂತಿ ಸೂತ್ರದ ಅಂಶಗಳನ್ನು ನಾವು ಹೇಗೆ ಮತ್ತು ಯಾವಾಗ ಕಾರ್ಯಗತಗೊಳಿಸಬಹುದು ಎಂಬುದನ್ನು ನಿರ್ಧರಿಸಲು ವಿಶೇಷ ಶೃಂಗಸಭೆ ಗ್ಲೋಬಲ್ ಪೀಸ್ ಫಾರ್ಮುಲಾ ಶೃಂಗಸಭೆಯನ್ನು ಕರೆಯಲು ನಾನು ಪ್ರಸ್ತಾಪಿಸುತ್ತೇನೆ ಎಂದು ವೊಲೊಡಿಮಿರ್ ಝೆಲೆನ್ಸ್ಕಿ G7 ಮುಖ್ಯಸ್ಥರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆಗೆ ಕರೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ