Russia Ukraine War: ಶತ್ರುಗಳ ದಾಳಿ ತೀವ್ರಗೊಂಡರೆ ಪರಮಾಣು ಅಸ್ತ್ರ ಬಳಕೆಗೆ ರಷ್ಯಾ ಹಿಂಜರಿಯದು; ವ್ಲಾದಿಮಿರ್ ಪುಟಿನ್
ಉಕ್ರೇನ್‌ನಲ್ಲಿ ಯುದ್ಧವು ದೀರ್ಘಕಾಲದವರೆಗೆ ಮುಂದುವರಿಯಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದಾರೆ. ಅಲ್ಲದೆ, ಇದರಿಂದಾಗಿ ಪರಮಾಣು ಉದ್ವಿಗ್ನತೆ ಕೂಡ ಹೆಚ್ಚಾಗುತ್ತಿದಎ ಎಂದು ಹೇಳಿದ್ದಾರೆ.
ತಮ್ಮ ಸೇನೆಯು ಉಕ್ರೇನ್‌ನಲ್ಲಿ ದೀರ್ಘಕಾಲ ಹೋರಾಡಬಹುದು (Ukraine-Russia War), ಆದರೆ ಈ ಹಂತದಲ್ಲಿ ಹೆಚ್ಚುವರಿ ಸೈನಿಕರನ್ನು ಸಜ್ಜುಗೊಳಿಸುವ ಅಗತ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russia President, Vladimir Putin) ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕೈಗೊಂಡು 9 ತಿಂಗಳು ಕಳೆದ ನಂತರ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ಶತ್ರುಗಳ ದಾಳಿ ತೀವ್ರಗೊಂಡರೆ ಪರಮಾಣು ಅಸ್ತ್ರ (Nuclear weapon) ಬಳಕೆಗೆ ಹಿಂಜರಿಯದು ಎಂದರು. ಪರಮಾಣ ಶಸ್ತ್ರಾಸ್ತ್ರಗಳ ಬಗ್ಗೆ ರಷ್ಯಾದ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ಅಮೆರಿಕ ಖಂಡಿಸಿತು.
ಆದರೆ ಯುದ್ಧವು ಪರಮಾಣು ಅಸ್ತ್ರಗಳ ಬಳಕೆಗೆ ಉಲ್ಬಣಗೊಳ್ಳಬಹುದೇ ಎಂಬ ಸಮಸ್ಯೆಯನ್ನು ಹೊಸದಾಗಿ ಪ್ರಸ್ತಾಪಿಸಿದರು. ಯುದ್ಧದಲ್ಲಿ ಸಣ್ಣ ಯುದ್ಧತಂತ್ರದ ಅಸ್ತ್ರಗಳನ್ನು ಬಳಸುವ ಬಗ್ಗೆ ಹಿಂದೆ ಸುಳಿವು ನೀಡಿದ್ದ ಪುಟಿನ್, ಬಳಿಕ ತಮ್ಮ ಹೇಳಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೀಗ, “ಇಂತಹ ಉದ್ವಿಗ್ನತೆ ಹೆಚ್ಚುತ್ತಿದೆ, ಅದನ್ನು ಇಲ್ಲಿ ಏಕೆ ರಹಸ್ಯವಾಗಿಡಬೇಕು? ರಷ್ಯಾ ಯಾವುದೇ ಸಂದರ್ಭಗಳಲ್ಲಿ ಅವುಗಳನ್ನು ಮೊದಲು ಬಳಸುವುದಿಲ್ಲ” ಎಂದು ಹೇಳಿದರು.
“ನಾವು ಹುಚ್ಚರಾಗಿಲ್ಲ, ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನಮಗೆ ತಿಳಿದಿದೆ” ಎಂದು ಹೇಳಿದ ರಷ್ಯಾದ ಅಧ್ಯಕ್ಷರು, ಶತ್ರುಗಳ ದಾಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಪರಮಾಣು ಶಸ್ತ್ರಾಸ್ತ್ರವನ್ನು ಬಳಸುತ್ತದೆ ಎಂದಿದ್ದಾರೆ. ಮೊದಲನೆಯದಾಗಿ ನಾವು ಶಾಂತಿಯುತ ವಿಧಾನಗಳ ಮೇಲೆ ಕೇಂದ್ರೀಕರಿಸುತ್ತೇವೆ. ಅದಾಗ್ಯೂ, ರಷ್ಯಾ ತನ್ನ ಪ್ರದೇಶವನ್ನು ಮತ್ತು ಅದರ ಮಿತ್ರರಾಷ್ಟ್ರಗಳನ್ನು ಲಭ್ಯವಿರುವ ಎಲ್ಲಾ ವಿಧಾನಗಳೊಂದಿಗೆ ರಕ್ಷಿಸುತ್ತದೆ ಎಂದರಲ್ಲದೆ, ಇತರ ದೇಶಗಳಲ್ಲಿ ಯುದ್ಧತಂತ್ರ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದು ಯುನೈಟೆಡ್ ಸ್ಟೇಟ್ಸ್ ಹೊರತು ರಷ್ಯಾ ಅಲ್ಲ ಎಂದರು.
ಇದನ್ನೂ ಓದಿ: ಮಾಸ್ಕೋದಲ್ಲಿರುವ ಅಧಿಕೃತ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಹೇಳಿಕೆಯನ್ನು ಖಂಡಿಸಿದ ಯುಎಸ್ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್, “ಪರಮಾಣು ಶಸ್ತ್ರಾಸ್ತ್ರಗಳ ಯಾವುದೇ ಸಡಿಲವಾದ ಮಾತು ಸಂಪೂರ್ಣವಾಗಿ ಬೇಜವಾಬ್ದಾರಿಯಾಗಿದೆ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದರು. ‘”ಉಕ್ರೇನ್ ಸಂಘರ್ಷದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಪಾಯವು ರಷ್ಯಾದ ಮೇಲೆ ಹೇರಿದ ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಕಡಿಮೆಯಾಗಿದೆ” ಎಂದು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ. “ಸದ್ಯಕ್ಕೆ ಒಂದು ವಿಷಯ ಬದಲಾಗಿದೆ, ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬೆದರಿಕೆಯನ್ನು ನಿಲ್ಲಿಸಿದೆ” ಎಂದು ಜರ್ಮನಿಯ ಫಂಕೆ ಮಾಧ್ಯಮ ಸಮೂಹಕ್ಕೆ ನೀಡಿದ ಸಂದರ್ಶನದಲ್ಲಿ ಸ್ಕೋಲ್ಜ್ ಹೇಳಿದರು.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Thu, 8 December 22