ಎಂಟು ದಶಕಗಳಷ್ಟು ಸಹಬಾಳ್ವೆ ನಡೆಸಿದ ಅಮೆರಿಕದ ದಂಪತಿಯನ್ನು ಸಾವು ಕೂಡ ಬೇರ್ಪಡಿಸಲಿಲ್ಲ!
ಜೂನ್ ತಿಂಗಳಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಹ್ಯೂಬರ್ಟ್, ‘ನನ್ನ ಪಕ್ಕದಲ್ಲಿ ಪತ್ನಿಯಿಲ್ಲದ ಬದುಕನ್ನು ನಾನು ಕಲ್ಪಿಸಿಕೊಳ್ಳಲಾರೆ,’ ಎಂತ ಹೇಳಿದ್ದರು. ಎಲ್ಲ ಗುಟ್ಟುಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೆವು ಮತ್ತು 79 ವರ್ಷಗಳ ದಾಂಪತ್ಯದಲ್ಲಿ ನಮ್ಮ ನಡುವೆ ಯಾವತ್ತೂ ಗಂಭೀರ ಸ್ವರೂಪದ ಜಗಳ ನಡೆದಿರಲಿಲ್ಲ ಅಂತ ಹೇಳಿದ್ದರು.
ದಂಪತಿ ನಡುವಿನ ಪ್ರೀತಿ, ಹೊಂದಾಣಿಕೆ, ಅನುರಾಗ, ಅನುಬಂಧಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಸಿಗಲಾರದು ಮಾರಾಯ್ರೇ. ಅಮೆರಿಕದ ಒಹಿಯೊದಲ್ಲಿ (Ohio) ವಾಸವಾಗಿದ್ದ ಈ ದಂಪತಿಯ ಪ್ರೇಮ ಕತೆ ಮುಂದಿನ ಪೀಳಿಗೆಯೂ ನೆನಪಿಟ್ಟುಕೊಳ್ಳಲಿದೆ. ಶತಾಯುಷಿಗಳಾಗಿದ್ದ ಅವರಿಬ್ಬರು ಸುಮಾರು 8 ದಶಕಗಳ ಕಾಲ ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸಿ ಸತ್ತಿದ್ದು ಕೂಡ ಕೇವಲ 24 ಗಂಟೆಗಳ ಅಂತರದಲ್ಲಿ! ಹ್ಯಾಮಿಲ್ಟನ್ ನ ಹಾಸ್ಪೈಸ್ ನಲ್ಲಿನ ತಮ್ಮ ಮನೆಯಲ್ಲಿ ಪತಿ ನವೆಂಬರ್ 30 ರಂದು ಇಹಲೋಕದ ಯಾತ್ರೆ ಮುಗಿಸಿದರೆ, ಪತ್ನಿ ಮರುದಿನ ಅಂದರೆ ಡಿಸೆಂಬರ್ 1 ರಂದು ಕೊನೆಯುಸಿರೆಳೆದರು ಎಂದು ಪೀಪಲ್ ಪತ್ರಿಕೆ ವರದಿ ಮಾಡಿದೆ. ಹ್ಯೂಬರ್ಟ್ ಮಲಿಕೋಟ್ (Hubert Malicot) ನವೆಂಬರ್ 30 ರ ರಾತ್ರಿ 9:15 ನಿಧನರಾಗಿದ್ದಾರೆ ಮತ್ತು ಜೂನ್ ಮಲಿಕೋಟ್ (June Malicot) ಮರುದಿನ ಸಾಯಂಕಾಲ 5:40 ಕ್ಕೆ ತಮ್ಮ ಪತಿಯನ್ನು ಜೊತೆಗೂಡಿದ್ದಾರೆ.
ಮಲಿಕೋಟ್ ದಂಪತಿಯ ಲವ್ ಸ್ಟೋರಿ ಅಸಲಿಗೆ ಆರಂಭವಾಗಿದ್ದು 1941ರಲ್ಲಿ, ಓಹಿಯೋದ ಹ್ಯಾಮಿಲ್ಟ್ನಲ್ಲಿರುವ ಚರ್ಚ್ ಆಫ್ ಗಾಡ್ ನಲ್ಲಿ ಮೊದಲಬಾರಿಗೆ ಭೇಟಿಯಾದಾಗ. ಎರಡು ವರ್ಷಗಳ ಪ್ರೀತಿಯಲ್ಲಿ ಬೆಸೆದ ಬಳಿಕ ಅವರು ಮದುವೆಯಾದರು. ಅದಾದ ಬಳಿಕ ಜೀವದ ಜೋಡಿಯಾಗಿಬಿಟ್ಟರು. ಅವರ ಅಗಲದ ಬಾಂಧವ್ಯ 80 ವರ್ಷಗಳವರೆಗೆ ಮುಂದುವರಿಯಿತು. ಹ್ಯೂಬರ್ಟ್ ಅವರು ಎರಡನೇ ವಿಶ್ವಯದ್ಧ ಸಮಯದಲ್ಲಿ ಯುಎಸ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರೆ, ಜೂನ್ ಮರಿಕೋಟ್, ಟೊರ್ಪೆಡೊ ಬಿಡಿಭಾಗಗಳನ್ನು ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ವರ್ಷ ಜುಲೈ 13 ರಂದು ಜೂನ್ ಮಲಿಕೋಟ್ ಮತ್ತು 23 ರಂದು ಹ್ಯೂಬರ್ಟ್ ಮಲಿಕೋಟ್ ಅವರ 100 ನೇ ಜನ್ಮದಿನವನ್ನು ಅವರ ಮಕ್ಕಳು ಮೊಮ್ಮಕ್ಕಳು ಬಹು ವಿಜೃಂಭಣೆಯಿಂದ ಆಚರಿಸಿದ್ದರು. ಜೂನ್ 8ರಂದು ದಂಪತಿ ತಮ್ಮ 79 ಮದುವೆ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಂಡಿದ್ದರು.
ಆದರೆ, ಆಗಸ್ಟ್ ನಲ್ಲಿ ಜೂನ್ ಅವರು ಹೃದ್ರೋಗವೊಂದರಿಂದ ಬಳಲುತ್ತಿರುವುದು ಪತ್ತೆಯಾಗಿತ್ತು ಮತ್ತು ಅವರ ತಪಾಸಣೆ ನಡೆಸಿದ್ದ ವೈದ್ಯರು ಪ್ರಾಯಶಃ ಈ ವರ್ಷ ದಾಟಲಾರರು ಅಂತ ಹೇಳಿದ್ದರು. ಅಕ್ಟೋಬರ್ ನಲ್ಲಿ ಅನಾರೋಗ್ಯಕ್ಕೀಡಾದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲೇ ಇಲ್ಲ. ದಂಪತಿಯ ಮಗಳು ಜೊ ಮಲಿಕೋಟ್ ಅವರು ಮಾಧ್ಯಮವೊಂದಕ್ಕೆ ಹೇಳಿರುವ ಪ್ರಕಾರ ಅವರ ತಂದೆ ಇಳಿವಯಸ್ಸಿನಲ್ಲೂ ಗುಂಡುಕಲ್ಲಿನ ಹಾಗಿದ್ದರು. ಅದರೆ, ಪತ್ನಿಯ ಅನಾರೋಗ್ಯ ಅವರ ಹೃದಯವನ್ನು ಛಿದ್ರಗೊಳಿಸಿತ್ತು ಮತ್ತು ಪತ್ನಿಯ ಸಾವಿಗಿಂತ ಒಂದು ದಿನ ಮೊದಲೇ ಸಾವನ್ನಪ್ಪಿದರು.
‘ಕೇವಲ ಮೂರುದಿನಗಳ ಅಂತರದಲ್ಲಿ ಅವರು 100 ರಿಂದ ಶೂನ್ಯಕ್ಕಿಳಿದರು. ಅಮ್ಮನ ಆರೋಗ್ಯ ಕ್ಷೀಣಿಸುತ್ತದೆ ಅಂತ ಡ್ಯಾಡ್ ಗೆ ಗೊತ್ತಿತ್ತು. ಆಕೆ ಹೆಚ್ಚು ದಿನ ಬದುಕಲಾರಳು ಅನ್ನೋದನ್ನು ಮನಗಂಡ ಅವರು ಅಮ್ಮನನ್ನು ಒಬ್ಬಳೇ ಹೋಗಗೊಡಲಿಲ್ಲ, ಅಸಲಿಗೆ ಅಮ್ಮನಿಗಿಂತ ಮೊದಲೇ ಅವರು ಹೊರಟುಬಿಟ್ಟರು,’ ಅಂತ ಜೊ ಹೇಳಿದ್ದಾರೆ.
ಜೂನ್ ತಿಂಗಳಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಹ್ಯೂಬರ್ಟ್ ಅವರು, ‘ನನ್ನ ಪಕ್ಕದಲ್ಲಿ ಪತ್ನಿಯಿಲ್ಲದ ಬದುಕನ್ನು ನಾನು ಕಲ್ಪಿಸಿಕೊಳ್ಳಲಾರೆ,’ ಎಂತ ಹೇಳಿದ್ದರು. ಎಲ್ಲ ಗುಟ್ಟುಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೆವು ಮತ್ತು 79 ವರ್ಷಗಳ ದಾಂಪತ್ಯದಲ್ಲಿ ನಮ್ಮ ನಡುವೆ ಯಾವತ್ತೂ ಗಂಭೀರ ಸ್ವರೂಪದ ಜಗಳ ನಡೆದಿರಲಿಲ್ಲ ಅಂತ ಅವರು ಹೇಳಿದ್ದರು.
‘ಅವರಿಬ್ಬರಿಗೆ ಪರಸ್ಪರ ಅಗಲಿರುವುದು ಸಾಧ್ಯವೇ ಇರಲಿಲ್ಲ. ಒಬ್ಬರಿಲ್ಲದೆ ಮತ್ತೊಬ್ಬರ ಬದುಕು ನಡೆಯುತ್ತಿರಲಿಲ್ಲ. ಅವರು ಜೊತೆಯಾದರು, ಜೊತೆಯಾಗಿ ಬಾಳಿದರು ಮತ್ತು ಜೊತೆಯಾಗೇ ಜೀವನ ಕೊನೆಗೊಳಿದರು,’ ಎಂದು ಜೊ ಹೇಳಿದ್ದಾರೆ.
‘ಹ್ಯೂಬರ್ಟ್ ಅವರನ್ನು ತಮ್ಮ ಪತ್ನಿಯಿಂದ ಸಾವು ಕೆಲವು ಗಂಟೆಗಳಷ್ಟು ಮಾತ್ರ ಬೇರ್ಪಡಿಸಿತ್ತು. ಅವರ 81-ವರ್ಷದ ಲವ್ ಸ್ಟೋರಿ ಜೊತೆಯಾಗೇ ಕೊನೆಗೊಂಡಿತು’ ಎಂದು ಹ್ಯೂಬರ್ಟ್ ಸಮಾಧಿ ಮೇಲೆ ಬರೆಯಲಾಗಿದೆ. ದಂಪತಿ ಮೂವರು ಮಕ್ಕಳು, 7 ಮೊಮ್ಮಕ್ಕಳು ಮತ್ತು 11 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ