AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Concert Hall Attack: ಮಾಸ್ಕೋ ಮುಂಬೈ ಮಾದರಿ ದಾಳಿಯಲ್ಲಿ ಮೃತರ ಸಂಖ್ಯೆ 150ಕ್ಕೆ ಏರಿಕೆ

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ. ಘಟನೆ ಸಂಬಂಧ ತನಿಖೆಯೂ ಚುರುಕುಗೊಂಡಿದೆ. ಐಎಸ್​ಐಎಸ್​ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದ್ದರೆ, ಅತ್ತ ಉಕ್ರೇನ್ ವಿರುದ್ಧ ರಷ್ಯಾ ಅನುಮಾನ ಬಲವಾಗಿದೆ. ಈವರೆಗೆ ಮೃತಪಟ್ಟವರು ಎಷ್ಟು ಮಂದಿ? ಎಷ್ಟು ಉಗ್ರರ ಬಂಧನವಾಗಿದೆ? ದಾಳಿ ಬಗ್ಗೆ ರಷ್ಯಾ ಹೇಳುವುದೇನು? ಇತ್ಯಾದಿ ಮಾಹಿತಿ ಇಲ್ಲಿದೆ.

Russia Concert Hall Attack: ಮಾಸ್ಕೋ ಮುಂಬೈ ಮಾದರಿ ದಾಳಿಯಲ್ಲಿ ಮೃತರ ಸಂಖ್ಯೆ 150ಕ್ಕೆ ಏರಿಕೆ
ರಷ್ಯಾದಲ್ಲಿ ನಡೆದ ಭೀಕರ ಉಗ್ರ ದಾಳಿಯ ಸಂದರ್ಭದ ಚಿತ್ರ
Ganapathi Sharma
|

Updated on: Mar 23, 2024 | 6:32 PM

Share

ಮಾಸ್ಕೋ, ಮಾರ್ಚ್​ 23: ರಷ್ಯಾದ (Russia) ಮಾಸ್ಕೋದ (Moscow) ಕ್ರಾಕಸ್ ಸಿಟಿ ಹಾಲ್​ನಲ್ಲಿ ನಡೆದ ಮುಂಬೈ ಮಾದರಿ ಉಗ್ರ ದಾಳಿಯಲ್ಲಿ (Terror Attack) ಮೃತಪಟ್ಟವರ ಸಂಖ್ಯೆ ಸುಮಾರು 150 ಕ್ಕೆ ಏರಿದೆ. ದಾಳಿಯಲ್ಲಿ 120 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ಈವರೆಗೆ ತಿಳಿದುಬಂದಿದೆ. ಘಟನೆ ಸಂಬಂಧ ಈವರೆಗೆ 11 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ರಷ್ಯಾದ ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ. ಬಂಧಿತರಲ್ಲಿ ನಾಲ್ವರು ದಾಳಿಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು ತನಿಖಾ ಸಮಿತಿ ತಿಳಿಸಿದೆ.

ದಾಳಿಯ ಹೊಣೆಗಾರಿಕೆಯನ್ನು ಹೊತ್ತು ಇಸ್ಲಾಮಿಕ್ ಸ್ಟೇಟ್ ಗುಂಪು ಹೇಳಿಕೆ ನೀಡಿದ್ದರೂ, ದಾಳಿಯು ಉಕ್ರೇನ್‌ಗೆ ಸಂಬಂಧಿಸಿದೆ ಎಂದು ರಷ್ಯಾದ ಏಜೆನ್ಸಿಗಳು ಮತ್ತು ಅನೇಕ ನಾಯಕರು ಆರೋಪಿಸಿದ್ದಾರೆ.

ಈ ಮಧ್ಯೆ, ದಾಳಿಗೆ ಐಎಸ್​ಐಎಸ್​ ಉಗ್ರ ಸಂಘಟನೆಯೇ ಕಾರಣ ಎಂದು ಏಜೆನ್ಸಿಗಳು ದೃಢಪಡಿಸಿರುವುದಾಗಿ ಅಮರಿಕದ ಗುಪ್ತಚರ ಅಧಿಕಾರಿಯೊಬ್ಬರು ‘ಅಸೋಸಿಯೇಟೆಡ್ ಪ್ರೆಸ್‌’ಗೆ ತಿಳಿಸಿದ್ದಾರೆ.

ದಾಳಿ ಸಂಬಂಧ ಪಶ್ಚಿಮ ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ. ಈ ಪ್ರದೇಶವು ಉಕ್ರೇನ್ ಗಡಿಗೆ ಬಹಳ ಹತ್ತಿರದಲ್ಲಿದೆ.

ನಾಲ್ವರು ಶಂಕಿತರನ್ನು ಬಂಧಿಸಿರುವ ಬಗ್ಗೆ ರಷ್ಯಾದ ತನಿಖಾ ಸಂಸ್ಥೆಗಳು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ಗೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲೇ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ದಾಳಿಯ ನಂತರ, ರಷ್ಯಾದ ಕೆಲವು ಜನಪ್ರತಿನಿಧಿಗಳು ಉಕ್ರೇನ್ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಮಾಸ್ಕೋ ದಾಳಿ ಕುರಿತಾದ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಷ್ಯಾ: ಕಂಡು ಕೇಳರಿಯದ ಭಾರೀ ಭಯೋತ್ಪಾದನೆ, ಹತ್ತಾರು ಬಾಂಬು ಸ್ಪೋಟ, ನೂರಾರು ಮಂದಿ ಸಾವು

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ಸಂದೇಶ ಪ್ರಕಟಿಸಿರುವ ಮೈಖೈಲೊ, ‘ಉಕ್ರೇನ್ ಎಂದಿಗೂ ಭಯೋತ್ಪಾದಕ ಕೃತ್ಯಗಳನ್ನು ಎಸಗುವುದಿಲ್ಲ. ಈ ಯುದ್ಧದಲ್ಲಿ ಎಲ್ಲವೂ ಸಮರಾಂಗಣದಲ್ಲಿ ಮಾತ್ರ ನಿರ್ಧಾರವಾಗುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ಸೇರಿ ಜಾಗತಿಕ ನಾಯಕರಿಂದ ಖಂಡನೆ

ಮಾಸ್ಕೋದಲ್ಲಿ ನಡೆದ ಉಗ್ರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಖಂಡಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಬ್ರಿಟನ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್, ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ದಾಳಿಯನ್ನು ಖಂಡಿಸಿದ್ದಾರೆ.

ಮೋದಿ ಎಕ್ಸ್​ ಸಂದೇಶ

ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬಗಳ ಪರ ನಾವು ಪ್ರಾರ್ಥಿಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಮೋದಿ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ