ಮಾಸ್ಕೋ: ರಷ್ಯಾದ ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಿನ್ನೆ (ಸೆಪ್ಟೆಂಬರ್ 19) ಮುಕ್ತಾಯಗೊಂಡಿದೆ. ಚುನಾವಣೆ ಮುಗಿದ ಬೆನ್ನಲ್ಲೇ ರಷ್ಯಾದಲ್ಲಿ ಮತ ಎಣಿಕೆ ಕಾರ್ಯವು ಆರಂಭಗೊಂಡಿದೆ. ಈಗಾಗಲೇ ಶೇಕಡಾ 33ರಷ್ಟು ಮತ ಎಣಿಕೆ ಮುಕ್ತಾಯಗೊಂಡಿದೆ. ವ್ಲಾದಿಮೀರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಸದ್ಯ ಎಣಿಕೆಯಾಗಿರುವ ಮತಗಳಲ್ಲಿ ಶೇಕಡಾ 45ರಷ್ಟು ಮತಗಳನ್ನು ಗಳಿಸಿಕೊಂಡಿದೆ ಎಂದು ವರದಿಯಾಗಿದೆ. ಯುನೈಟೆಡ್ ರಷ್ಯಾದ ಅತ್ಯಂತ ನಿಕಟ ಪ್ರತಿಸ್ಪರ್ಧಿ ಶೇಕಡಾ 22ರಷ್ಟು ಮತಗಳಿಸಿ ಹಿನ್ನೆಡೆ ಅನುಭವಿಸಿದೆ.
1999ರಿಂದ ಅಧಿಕಾರದಲ್ಲಿರುವ ವ್ಲಾದಿಮೀರ್ ಪುಟನ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಪುಟಿನ್ ವಿರೋಧಿಗಳನ್ನು ಮಟ್ಟ ಹಾಕುವ ಬಗ್ಗೆ ನಾನಾ ಆಕ್ಷೇಪಗಳಿದ್ದರೂ ಸಹ ರಷ್ಯಾದಲ್ಲಿ ಈಗಲೂ 68 ವರ್ಷದ ಪುಟಿನ್ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದಾರೆ. ಮತ ಎಣಿಕೆಯಲ್ಲಿ ಮುನ್ನಡೆ ಗಳಿಸುತ್ತಿರುವ ಯುನೈಟೆಡ್ ರಷ್ಯಾದ ಪಕ್ಷ ಈಗಾಗಲೇ ಸಂಭ್ರಮಾಚರಣೆಯನ್ನು ಆರಂಭಿಸಿದೆ. ಅಂದಹಾಗೆ ವ್ಲಾದಿಮೀರ್ ಪುಟಿನ್ 2036ರವರೆಗೂ ಆಡಳಿತ ನಡೆಸುವ ಚಿಂತನೆ ಮಾಡಿದ್ದಾರಂತೆ. ಆದರೆ ಎಲ್ಲವನ್ನೂ ಕಾಲವೇ ನಿರ್ಣಯಿಸಬೇಕಲ್ಲವೇ?
ರಷ್ಯಾ ಚುನಾವಣೆ: ವ್ಲಾದಿಮೀರ್ ಪುಟಿನ್ ಸೋಲು ಗೆಲುವು, ಅಮೆರಿಕ ಮತ್ತು ಅಲೆಕ್ಸಿ ನವಾಲ್ನಿ ಸುತ್ತಮುತ್ತ ಒಂದಿಷ್ಟು
ವಿರೋಧ ಪಕ್ಷದ ನಾಯಕ ಫ್ಯೋಡೋರ್ ಕ್ರಾಶೆನ್ನಿಕೋವ್ ಇತ್ತೀಚಿಗಷ್ಟೇ ಸರ್ಕಾರದ ಕೆಲವು ನೀತಿಗಳಿಂದ ರಷ್ಯಾವನ್ನು ತೊರೆದು ಯೂರೋಪ್ ಸೇರುವಂತಾಗಿದೆ. ಕೆಲವು ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಮೇಲೆ ವಿದೇಶಿ ಏಜೆಂಟರು ಎಂಬ ಆರೋಪವನ್ನೂ ರಷ್ಯಾದಲ್ಲಿ ಹೋರಿಸಲಾಗಿದೆ. ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ ಎಂದು ಸಹ ಫ್ಯೋಡೋರ್ ಕ್ರಾಶೆನ್ನಿಕೋವ್ ಆರೋಪಿಸಿದ್ದಾರೆ.
ಈ ಬಾರಿ ರಷ್ಯಾದಲ್ಲಿ ಮತ ಚಲಾವಣೆಗೆಂದು ಸ್ಮಾರ್ಟ್ ವೋಟಿಂಗ್ ತಂತ್ರಾಂಶವನ್ನು ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಾಲ್ನಿ ಬಿಡುಗಡೆಗೊಳಿಸಿದ್ದರು. ತಂತ್ರಾಂಶವನ್ನು ತಮ್ಮ ವೇದಿಕೆಗಳಿಂದ ಡಿಲಿಟ್ ಮಾಡಬೇಕೆಂದು ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ರಷ್ಯಾದ ವಿದೇಶಾಂಗ ಇಲಾಖೆ ಸೂಚಿಸಿದೆ. ಅಲ್ಲದೇ ಅಮೆರಿಕ ಮೂಲದ ಈ ತಂತ್ರಾಂಶದ ಮೂಲಕವೇ ಅಮೆರಿಕ ತನ್ನ ಸಂಸತ್ ಚುನಾವಣೆಯಲ್ಲಿ ಮೂಗುತೂರಿಸುತ್ತಿದೆ ಎಂದು ರಷ್ಯಾ ದೂರಿದೆ. ಈ ಚುನಾವಣೆಯಲ್ಲಿ ವ್ಲಾದಿಮೀರ್ ಪುಟಿನ್ ಅವರಿಗೆ ಅಲೆಕ್ಸಿ ನವಾಲ್ನಿ ಅವರೇ ಅತ್ಯಂತ ಪ್ರಮುಖ ಸವಾಲಾಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಅಲೆಕ್ಸಿ ನವಾಲ್ನಿ ಅವರಿಗೆ ವ್ಲಾದಿಮೀರ್ ಪುಟಿನ್ ವಿಷ ಪ್ರಾಶನ ಮಾಡಿಸಿದ್ದರು ಎಂಬ ಆರೋಪ ಜಾಗತಿಕ ಮಟ್ಟದಲ್ಲಿ ತಲ್ಲಣ ಹುಟ್ಟಿಸಿದ ಸುದ್ದಿಯಾಗಿತ್ತು.
ಸದ್ಯ ಸಂಸತ್ತಿನಲ್ಲಿ ಪ್ರಾಬಲ್ಯ ಹೊಂದಿರುವ ಪಕ್ಷವಾದ ವ್ಲಾದಿಮೀರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಇತರ ಯಾವ ಅಭ್ಯರ್ಥಿಗಳು ಉತ್ತಮ ಪ್ರಾಬಲ್ಯ ಹೊಂದಿದ್ದಾರೆ ಎಂದು ಅಲೆಕ್ಸಿ ನವಾಲ್ನಿ ರೂಪಿಸಿದ ತಂತ್ರಾಂಶ ತಿಳಿಸುತ್ತದೆ. ಇದೇ ಕಾರಣಕ್ಕೇ ವ್ಲಾದಿಮೀರ್ ಪುಟಿನ್ ಸರ್ಕಾರ ಈ ತಂತ್ರಾಂಶವನ್ನು ಡಿಲಿಟ್ ಮಾಡಲು ಅಮೆರಿಕ ಸರ್ಕಾರದ ಮೂಲಕ ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:
Sputnik Light ಭಾರತದಲ್ಲಿ ರಷ್ಯಾದ ಸಿಂಗಲ್ ಶಾಟ್ ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ ಶೀಘ್ರ ಆರಂಭ
ಕೃಷಿಕರಿಗೆ ತರಬೇತಿ ಕಾರ್ಯಾಗಾರ: ಅಡಿಕೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಮಾಹಿತಿ ಪಡೆಯಲು ಹೀಗೆ ಮಾಡಿ
(Russia Parliament Election 2021 Pro Vladimir Putin party wins majority)