ರಷ್ಯಾ ಚುನಾವಣೆ: ವ್ಲಾದಿಮೀರ್ ಪುಟಿನ್ ಸೋಲು ಗೆಲುವು, ಅಮೆರಿಕ ಮತ್ತು ಅಲೆಕ್ಸಿ ನವಾಲ್ನಿ ಸುತ್ತಮುತ್ತ ಒಂದಿಷ್ಟು
Russia Election 2021: ಯುನೈಟೆಡ್ ರಷ್ಯಾ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಇತರ ಯಾವ ಅಭ್ಯರ್ಥಿಗಳು ಉತ್ತಮ ಪ್ರಾಬಲ್ಯ ಹೊಂದಿದ್ದಾರೆ ಎಂದು ಅಲೆಕ್ಸಿ ನವಾಲ್ನಿ ರೂಪಿಸಿದ ತಂತ್ರಾಂಶ ತಿಳಿಸುತ್ತದೆ.

ರಷ್ಯಾ ಸಂಸತ್ಗೆ ಇನ್ನೇನು ಎರಡು ವಾರಗಳಲ್ಲಿ ಚುನಾವಣೆ ನಡೆಯಲಿದೆ. ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ನೇತೃತ್ವದ ಯನೈಟೆಡ್ ರಷ್ಯಾ ಈಬಾರಿಯೂ ಬಹುಮತ ಗಳಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ತಮ್ಮ ದೀರ್ಘಕಾಲದ ಆಡಳಿತವನ್ನು ಪುಟಿನ್ ಇನ್ನೂ ಮುಂದುವರೆಸುವ ಅಭಿಲಾಶೆ ಹೊಂದಿದ್ದಾರೆ. ಆದರೆ ರಷ್ಯಾದ ಶೇಕಡಾ 26ರಷ್ಟು ಮತದಾರರು ಮಾತ್ರ ವ್ಲಾದಿಮೀರ್ ಪುಟಿನ್ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಆನ್ಲೈನ್ ಸಮೀಕ್ಷೆಯೊಂದು ಹೇಳಿದೆ. ಈ ಬೆನ್ನಲ್ಲೇ ಚುನಾವಣೆಯಲ್ಲಿ ಅಮೆರಿಕ ಮೂಲದ ಟೆಕ್ ಕಂಪನಿಗಳು ಮೂಗು ತೂರಿಸುತ್ತಿರುವುದಾಗಿ ದೂರಿರುವ ರಷ್ಯಾದ ವಿದೇಶಾಂಗ ಇಲಾಖೆ ಅಮೆರಿಕದ ರಾಯಭಾರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮ, ಮತದಾರರಿಗೆ ವಿವಿಧ ಆಮಿಶ, ಆಡಳಿತದ ದುರುಪಯೋಗವೇ ಮೊದಲಾದ ತಂತ್ರಗಳನ್ನು ಬಳಸಿಕೊಂಡು ವ್ಲಾದಿಮೀರ್ ಪುಟಿನ್ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ಅವರ ವಿರೋಧ ಪಕ್ಷದ ನಾಯಕ ಫ್ಯೋಡೋರ್ ಕ್ರಾಶೆನ್ನಿಕೋವ್ ಆರೋಪಿಸಿದ್ದಾರೆ. ಅಲ್ಲದೇ ಸ್ವತಂತ್ರ ಚುನಾವಣಾ ವೀಕ್ಷಕರಿಗೆ ಈಕುರಿತು ಎಚ್ಚರಿಕೆಯಿಂದ ಇರುವಂತೆಯೂ ಅವರು ಸೂಚಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಫ್ಯೋಡೋರ್ ಕ್ರಾಶೆನ್ನಿಕೋವ್ ಇತ್ತೀಚಿಗಷ್ಟೇ ಸರ್ಕಾರದ ಕೆಲವು ನೀತಿಗಳಿಂದ ರಷ್ಯಾವನ್ನು ತೊರೆದು ಯೂರೋಪ್ ಸೇರುವಂತಾಗಿದೆ. ಕೆಲವು ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಮೇಲೆ ವಿದೇಶಿ ಏಜೆಂಟರು ಎಂಬ ಆರೋಪವನ್ನೂ ರಷ್ಯಾದಲ್ಲಿ ಹೋರಿಸಲಾಗಿದೆ. ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ ಎಂದು ಸಹ ಫ್ಯೋಡೋರ್ ಕ್ರಾಶೆನ್ನಿಕೋವ್ ಆರೋಪಿಸಿದ್ದಾರೆ.
ಈ ಬಾರಿ ರಷ್ಯಾದಲ್ಲಿ ಮತ ಚಲಾವಣೆಗೆಂದು ಸ್ಮಾರ್ಟ್ ವೋಟಿಂಗ್ ತಂತ್ರಾಂಶವನ್ನು ವಿರೋಧ ಪಕ್ಷದ ನಾಯಕರಾಗಿದ್ದ ಅಲೆಕ್ಸಿ ನವಾಲ್ನಿ ಬಿಡುಗಡೆಗೊಳಿಸಿದ್ದರು. ತಂತ್ರಾಂಶವನ್ನು ತಮ್ಮ ವೇದಿಕೆಗಳಿಂದ ಡಿಲಿಟ್ ಮಾಡಬೇಕೆಂದು ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ರಷ್ಯಾದ ವಿದೇಶಾಂಗ ಇಲಾಖೆ ಸೂಚಿಸಿದೆ. ಅಲ್ಲದೇ ಅಮೆರಿಕ ಮೂಲದ ಈ ತಂತ್ರಾಂಶದ ಮೂಲಕವೇ ಅಮೆರಿಕ ತನ್ನ ಸಂಸತ್ ಚುನಾವಣೆಯಲ್ಲಿ ಮೂಗುತೂರಿಸುತ್ತಿದೆ ಎಂದು ರಷ್ಯಾ ದೂರಿದೆ. ಈ ಚುನಾವಣೆಯಲ್ಲಿ ವ್ಲಾದಿಮೀರ್ ಪುಟಿನ್ ಅವರಿಗೆ ಅಲೆಕ್ಸಿ ನವಾಲ್ನಿ ಅವರೇ ಅತ್ಯಂತ ಪ್ರಮುಖ ಸವಾಲಾಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಅಲೆಕ್ಸಿ ನವಾಲ್ನಿ ಅವರಿಗೆ ವ್ಲಾದಿಮೀರ್ ಪುಟಿನ್ ವಿಷ ಪ್ರಾಶನ ಮಾಡಿಸಿದ್ದರು ಎಂಬ ಆರೋಪ ಜಾಗತಿಕ ಮಟ್ಟದಲ್ಲಿ ತಲ್ಲಣ ಹುಟ್ಟಿಸಿದ ಸುದ್ದಿಯಾಗಿತ್ತು.
ಸದ್ಯ ಸಂಸತ್ತಿನಲ್ಲಿ ಪ್ರಾಬಲ್ಯ ಹೊಂದಿರುವ ಪಕ್ಷವಾದ ವ್ಲಾದಿಮೀರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಇತರ ಯಾವ ಅಭ್ಯರ್ಥಿಗಳು ಉತ್ತಮ ಪ್ರಾಬಲ್ಯ ಹೊಂದಿದ್ದಾರೆ ಎಂದು ಅಲೆಕ್ಸಿ ನವಾಲ್ನಿ ರೂಪಿಸಿದ ತಂತ್ರಾಂಶ ತಿಳಿಸುತ್ತದೆ. ಇದೇ ಕಾರಣಕ್ಕೇ ವ್ಲಾದಿಮೀರ್ ಪುಟಿನ್ ಸರ್ಕಾರ ಈ ತಂತ್ರಾಂಶವನ್ನು ಡಿಲಿಟ್ ಮಾಡಲು ಅಮೆರಿಕ ಸರ್ಕಾರದ ಮೂಲಕ ಗೂಗಲ್ ಮತ್ತು ಆ್ಯಪಲ್ ಕಂಪನಿಗಳಿಗೆ ಸೂಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:
ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ
Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು
(Russia Parliament election 2021 President Vladimir Putin Verses Alexei Navalny and election interference of America)




