ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸುಮಾರು 1000 ಮಂದಿ ವೈಯಕ್ತಿಕ ಸಿಬ್ಬಂದಿ (Personal Staff)ಯನ್ನು ಕೆಲಸದಿಂದ ತೆಗೆದು ಹಾಕಿ, ಖಾಲಿ ಇರುವ ಹುದ್ದೆಗೆ ಬೇರೆಯವರನ್ನು ತೆಗೆದುಕೊಂಡಿದ್ದಾರೆ. ಫೆಬ್ರವರಿಯಲ್ಲೇ ಪುಟಿನ್ ಈ ಕೆಲಸ ಮಾಡಿದ್ದಾಗಿ ವರದಿಯಾಗಿದೆ. ಹೀಗೆ ಕೆಲಸ ಕಳೆದುಕೊಂಡವರಲ್ಲಿ ಅಡುಗೆಯವರು, ಲಾಂಡ್ರಿಯವರು, ಬಾಡಿಗಾರ್ಡ್ಗಳೂ ಸೇರಿದ್ದಾರೆ. ಇದಕ್ಕೆ ಕಾರಣ ವಿಷಪ್ರಾಶನದ ಭಯವಂತೆ. ರಷ್ಯಾದಲ್ಲಿ ಆಡಳಿತದಲ್ಲಿರುವ ಆಯ್ದ ಕೆಲವು ಪ್ರಮುಖರೆಲ್ಲ ಸೇರಿಕೊಂಡು ಪುಟಿನ್ರಿಗೆ ವಿಷವುಣಿಸಿ ಕೊಂದು ನಂತರ ಅದೊಂದು ಅಪಘಾತ ಎಂದು ಬಿಂಬಿಸುವ ಸಂಚು ರೂಪಿಸಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಹತ್ತಿರದ 1000 ಉದ್ಯೋಗಿಗಳನ್ನು ಬದಲಿಸಿದ್ದಾರೆ ಎಂದು ಉಕ್ರೇನ್ ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿದ್ದಾಗಿ ಡೇಲಿ ಮೇಲ್ ವರದಿ ಮಾಡಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರುವುದು ಆ ರಾಷ್ಟ್ರದವರಿಗೇ ಅನೇಕರಿಗೆ ಇಷ್ಟವಿಲ್ಲ. ಈಗಂತೂ ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ ಎಂಬ ಕಾರಣಕ್ಕೆ ರಷ್ಯಾದ ಮೇಲೆ ವಿವಿಧ ಪ್ರಮುಖ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿವೆ. ಹೀಗಾಗಿ ರಷ್ಯಾ ಆರ್ಥಿಕತೆಯೂ ವೇಗವಾಗಿ ಕುಸಿಯುತ್ತಿದೆ. ಅಷ್ಟಾದರೂ ಹಠ ಬಿಡದೆ ಯುದ್ಧ ಮುಂದುವರಿಸುತ್ತಿರುವ ಪುಟಿನ್ರನ್ನು ಹತ್ಯೆ ಮಾಡಿಯಾದರೂ ಯುದ್ಧ ನಿಲ್ಲಿಸಬೇಕು. ಅವರ ಜಾಗದಲ್ಲಿ ಬೇರೆ ಅಧ್ಯಕ್ಷನನ್ನು ನೇಮಕ ಮಾಡಬೇಕು. ಈ ಮೂಲಕ ನಿರ್ಬಂಧಗಳನ್ನು ತೆಗೆದು, ರಷ್ಯಾ ಆರ್ಥಿಕತೆ ಅಭಿವೃದ್ಧಿ ಮಾಡಬೇಕು ಎಂಬ ಸಂಚು ನಡೆಯುತ್ತಿದೆ ಎಂದು ಹೇಳಲಾಗಿದೆ.
ಹೀಗೆ ಪುಟಿನ್ರನ್ನು ಕೊಂದಾದರೂ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರಲ್ಲಿ ಫೆಡರಲ್ ಸೆಕ್ಯೂರಿಟಿ ಸರ್ವೀಸ್ ನಿರ್ದೇಶಕ ಅಲೆಕ್ಸಾಂಡರ್ ಬೊರ್ಟ್ನಿಕೋವ್ (70) ಪ್ರಮುಖರು ಎಂದು ಉಕ್ರೇನ್ ಗುಪ್ತಚರ ದಳ ಹೇಳಿದೆ. ಹೀಗೆ ಒಂದೆಡೆ ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿದ್ದರೆ, ಇನ್ನೊಂದೆಡೆ ಪುಟಿನ್ ವೈಯಕ್ತಿಕ ಬದುಕಿನ ಕುರಿತೂ ಸಿಕ್ಕಾಪಟೆ ಚರ್ಚೆ ನಡೆಯುತ್ತಿದೆ. ಅವರಿಗೋ ಗಂಭೀರ ಮಾನಸಿಕ ಅನಾರೋಗ್ಯವಿದೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ವಿವಾಹ ಲೈಸೆನ್ಸ್ ಅಲ್ಲ; ಹೆಂಡತಿ ಮೇಲೆ ರೇಪ್ ಮಾಡುವ ಗಂಡನಿಗೆ ವಿನಾಯ್ತಿ ಇರಬಾರದು, ಶಾಸಕಾಂಗ ಚಿಂತನೆ ನಡೆಸಲಿ: ಹೈಕೋರ್ಟ್