ಕೀವ್‌ನಲ್ಲಿ ರಷ್ಯಾ ದಾಳಿಯಿಂದ ಹೊತ್ತಿಕೊಂಡ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿಶಾಮಕ ದಳ (ಎಪಿ ಫೋಟೋ)
ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ (Russia Ukraine War) 23ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಆಕ್ರಮಣದ ಸಾಮರ್ಥ್ಯ ಕುಸಿತವಾಗಿದೆ ಎಂದು ಬ್ರಿಟನ್ ಹೇಳಿದೆ. ಗುಪ್ತಚರ ಮೂಲಗಳನ್ನು ಆಧರಿಸಿ ಮಾಹಿತಿ ನೀಡಿರುವ ಅದು, ರಷ್ಯಾ ಸೇನೆಗೆ ಗಾಳಿಯನ್ನು ಎದುರಿಸುವಲ್ಲಿ ಸಮಸ್ಯೆ ಎದುರಿಸುತ್ತಿದೆ ಹಾಗೂ ಸೀಮಿತ ಸೇತುವೆ ಅನುಕೂಲಗಳು ಸೇನೆಯ ಮುಂದುವರಿಕೆಗೆ ಅಡ್ಡಗಾಲಾಗಿದೆ ಎಂದು ತಿಳಿಸಿದೆ. ಇದಲ್ಲದೇ ಆಹಾರ ಹಾಗೂ ಇಂಧನದಂತಹ ಮೂಲಭೂತ ಅಗತ್ಯಗಳೂ ರಷ್ಯಾ ಸೇನೆಗೆ ಸವಾಲಾಗಿದೆ ಎನ್ನಲಾಗಿದೆ. ಇದರ ಹೊರತಾಗಿಯೂ ರಷ್ಯಾ ತನ್ನ ಆಕ್ರಮಣ ಮುಂದುವರೆಸಿದೆ. ಉಕ್ರೇನ್ನಲ್ಲಿ ಅದರಲ್ಲೂ ಬಂದರು ನಗರಿ ಮರಿಯುಪೋಲ್ನಲ್ಲಿ (Mariupol) ಜನರು ಬಹಳ ಭಯದಿಂದ, ಬಾಂಬ್ಗಳ ಹೊಡೆತದ ನಡುವೆ ಬದುಕುತ್ತಿದ್ದಾರೆ. ಕಳೆದ 20 ದಿನದಲ್ಲಿ ರಷ್ಯಾದ 7 ಸಾವಿರ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೇರಿಕಾ ಹೇಳಿದೆ. ಉಕ್ರೇನ್ ಬಿಕ್ಕಟ್ಟಿನ ಮುಖ್ಯಾಂಶಗಳು ಇಲ್ಲಿವೆ.
ರಷ್ಯಾ ಹಾಗೂ ಉಕ್ರೆನ್ ಬೆಳವಣಿಗೆಗಳ ಇತ್ತೀಚಿನ ಮುಖ್ಯಾಂಶಗಳು:
- ಉಕ್ರೇನ್ ದೇಶದಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರೆಸಿದ್ದು, 24 ಗಂಟೆಯಲ್ಲಿ ಚೆರ್ನಿಹಿವ್ ನಗರದಲ್ಲಿ 53 ಜನರು ಮರಣವನ್ನಪ್ಪಿದ್ದಾರೆ. ಯುದ್ಧದಲ್ಲಿ ಈವರೆಗೆ ಉಕ್ರೇನ್‌ನ 108 ಮಕ್ಕಳು ಮೃತಪಟ್ಟಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ ದಾಳಿ ಹಾಗೂ ಉಕ್ರೇನ್ ಪ್ರತಿದಾಳಿ ಮುಂದಯವರೆದಿದೆ. ಖಾರ್ಕಿವ್ ಒಬ್ಲಾಸ್ಟ್ ರಷ್ಯಾ ದಾಳಿಯಲ್ಲಿ 21 ಜನರು ಸಾವಿಗೀಡಾಗಿದ್ದು, 25 ಜನರು ಗಾಯಗೊಂಡಿದ್ದಾರೆ.
- ಮರಿಯುಪೋಲ್ನಲ್ಲಿ ರಷ್ಯಾದ ದಾಳಿಗೆ ರಂಗಮಂದಿರ ನಾಶವಾಗಿದೆ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಂಗಮಂದಿರಗಳು ಮಾನವ ಪರಂಪರೆಗೆ ಸೇರಿದವುಗಳು ಎಂದಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅದನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದ ಇಟಲಿಗೆ ಧನ್ಯವಾದ ಹೇಳಿದ್ದಾರೆ.
- ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ರಷ್ಯಾಗೆ ಜಪಾನ್ ದೇಶವು ಮತ್ತಷ್ಟು ನಿರ್ಬಂಧ ವಿಧಿಸಿದೆ. ರಷ್ಯಾದ 15 ಅಧಿಕಾರಿಗಳು ಹಾಗೂ 9 ಸಂಸ್ಥೆಗಳಿಗೆ ನಿರ್ಬಂಧ ಹೇರಿ ಜಪಾನ್ ಆದೇಶಿಸಿದೆ.
- ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನ ಭಾರತ ಖಂಡಿಸಬೇಕು ಎಂದು ಅಮೆರಿಕ ಸಂಸದರಿಂದ ಭಾರತದ ರಾಯಭಾರಿಗೆ ಒತ್ತಾಯಿಸಲಾಗಿದೆ. ಅಮೇರಿಕಾದಲ್ಲಿ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧುಗೆ ಅಮೇರಿಕಾ ಸಂಸದರು ರಷ್ಯಾ ದಾಳಿ ನಡೆಸುತ್ತಿರುವುದನ್ನು ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.
- ಕಳೆದ 20 ದಿನದಲ್ಲಿ ರಷ್ಯಾದ 7 ಸಾವಿರ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೇರಿಕಾ ಹೇಳಿದೆ. 20 ವರ್ಷದಲ್ಲಿ ಅಫ್ಘನ್, ಇರಾಕ್‌ನಲ್ಲಿ ಅಮೆರಿಕ ಕಳೆದುಕೊಂಡಿದ್ದಕ್ಕಿಂತ ಇದು ಹೆಚ್ಚು ಎಂದು ಅಮೇರಿಕಾ ಹೇಳಿಕೊಂಡಿದೆ.
- ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧವನ್ನು ನಿಲ್ಲಿಸಬೇಕು. ಅಲ್ಲಿಯವರೆಗೆ ರಷ್ಯಾಗೆ ನಿರ್ಬಂಧ ಮುಂದುವರಿಯಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿಕೆ ನೀಡಿದ್ದಾರೆ. ಅಲ್ಲದೇ ಉಕ್ರೇನ್ ನಾಗರಿಕರಿಗೆ ಅಮೆರಿಕ ಅಗತ್ಯ ನೆರವು ನೀಡಲಿದೆ ಎಂದೂ ಅವರು ತಿಳಿಸಿದ್ದಾರೆ.
- ಉಕ್ರೇನ್ ಮೇಲಿನ ದಾಳಿಯಲ್ಲಿ ನಿನ್ನೆ 12 ಜನ ಸಾಮಾನ್ಯರು ಸಾವಿಗೀಡಾಗಿದ್ದಾರೆ. 34 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ವಸತಿ ಪ್ರದೇಶ, ಆಸ್ಪತ್ರೆಗಳ ಮೇಲೆ ರಷ್ಯಾ ಸೇನೆಯಿಂದ ದಾಳಿ ಮಾಡಲಾಗುತ್ತಿದೆ. ಸುಮಾರು 43 ದಾಳಿಗಳಲ್ಲಿ 12 ಜನ ಸಾವು, 34 ಜನರಿಗೆ ಗಾಯಗಳಾಗಿವೆ ಎಂದು ಯುಎನ್ ತಿಳಿಸಿದೆ.
- ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಿಡಿಕಾರಿದ್ದಾರೆ. ವ್ಲಾಡಿಮಿರ್ ಪುಟಿನ್ ರಷ್ಯಾದ ನಿರಂಕುಶಾಧಿಕಾರಿ ಎಂದು ಟೀಕೆ ಮಾಡಿರುವ ಅವರು, ಪುಟಿನ್ ಒಬ್ಬ ಕೊಲೆಗಡುಕ ಸರ್ವಾಧಿಕಾರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
- ಉಕ್ರೇನ್ ಮೇಲೆ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಖ್ಯಾತ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಮನವಿ ಮಾಡಿದ್ದಾರೆ. ಅವರು ಕದನ ವಿರಾಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ ರಷ್ಯಾ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಬಲಿಯಾಗಿದ್ದಾರೆ.
- ಉಕ್ರೇನ್ ಜೊತೆಗೆ ಮಾತುಕತೆಗೆ ಸಿದ್ಧ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ,ಮತ್ತೊಂದು ಹೇಳಿಕೆಯನ್ನೂ ನೀಡಿದ್ದಾರೆ. ‘‘ರಷ್ಯಾ ಮಿಲಿಟರಿ ತನ್ನ ಗುರಿ ಮುಟ್ಟಲಿದೆ. ನಾವು ಅಂದುಕೊಂಡಿರುವುದನ್ನು ಸಾಧಿಸುತ್ತೇವೆ’’ ಎಂದೂ ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ:
Bengaluru: ಬೀದಿನಾಯಿಗಳ ಸಂತತಿ ತಡೆಯಲು 3 ವರ್ಷಗಳಲ್ಲಿ 15 ಕೋಟಿ ಖರ್ಚು; ಆದರೂ ಅವುಗಳ ಸಂಖ್ಯೆ ದುಪ್ಪಟ್ಟು!
ಚುನಾವಣೆ ಭರವಸೆ ಈಡೇರಿಸದ ಪಕ್ಷಗಳಿಗೆ ದಂಡ ವಿಧಿಸಲು ಸಾಧ್ಯವಿಲ್ಲ; ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ