Russia Ukraine War: ಯೂರೋಪ್​ಗೆ ತೈಲ ಪೂರೈಸುವ ಪೈಪ್​ಲೈನ್​ ಸೋರಿಕೆ, ಇದು ರಷ್ಯಾ ಮಾಡಿದ ಮೋಸ ಎಂದ ಜರ್ಮನಿ

ಜರ್ಮನಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಆರ್ಥಿಕವಾಗಿ ಕುಸಿದರೆ ಅದರ ಪರಿಣಾಮವನ್ನು ಯೂರೋಪ್ ಮಾತ್ರವಲ್ಲ; ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಎದುರಿಸಬೇಕಾಗುತ್ತದೆ.

Russia Ukraine War: ಯೂರೋಪ್​ಗೆ ತೈಲ ಪೂರೈಸುವ ಪೈಪ್​ಲೈನ್​ ಸೋರಿಕೆ, ಇದು ರಷ್ಯಾ ಮಾಡಿದ ಮೋಸ ಎಂದ ಜರ್ಮನಿ
ರಷ್ಯಾದಿಂದ ಯುರೋಪ್​ಗೆ ಇಂದನ ಸರಬರಾಜು ಮಾಡುವ ಪೈಪ್​ಲೈನ್​ನಲ್ಲಿ ಸೋರಿಕೆಯಾಗುತ್ತಿದೆ.
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 29, 2022 | 8:23 AM

ಯುದ್ಧಭೂಮಿಯಲ್ಲಿ ರಷ್ಯಾ ಪಡೆಗಳನ್ನು ಉಕ್ರೇನ್ ಸೇನೆ ಹಿಮ್ಮೆಟ್ಟಿಸಿದ ನಂತರ ರಷ್ಯಾ ದೊಡ್ಡಮಟ್ಟದಲ್ಲಿ ಸೇನೆಗೆ ಯುವಕರನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಸೇನೆಯನ್ನು ಪುನರ್​ಸಂಘಟಿಸಿ ಮತ್ತೊಮ್ಮೆ ಉಕ್ರೇನ್ ವಿರುದ್ಧ ದಾಳಿ ನಡೆಸುವ ಯೋಜನೆ ರೂಪಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಕ್ರೇನ್​ಗೆ ಬೆಂಬಲ ನೀಡಿರುವ ದೇಶಗಳನ್ನು ಶಿಕ್ಷಿಸಲೆಂದು ರಷ್ಯಾ ಪರೋಕ್ಷ ಯುದ್ಧವನ್ನೂ ಆರಂಭಿಸಿದೆ. ಜರ್ಮನಿ, ಬ್ರಿಟನ್ ಸೇರಿದಂತೆ ಹಲವು ಪ್ರಮುಖ ದೇಶಗಳಿಗೆ ಇಂಧನ ಪೂರೈಸುವ ಬಾಲ್ಟಿಕ್ ಸಮುದ್ರದಲ್ಲಿ ಹರಡಿಕೊಂಡಿರುವ ವಿಶಾಲ ಪೈಪ್​ಲೈನ್ ಜಾಲದಲ್ಲಿ ರಂಧ್ರ ಬಿದ್ದಿದೆ. ತಮ್ಮನ್ನು ಮಣಿಸಲೆಂದು ರಷ್ಯಾ ಮಾಡಿರುವ ಮೋಸದ ಕೆಲಸ ಇದು ಎಂದು ಐರೋಪ್ಯ ದೇಶಗಳು ಆರೋಪಿಸಿದ್ದು, ಹಲವು ದೇಶಗಳಲ್ಲಿ ಇಂಧನ ಬಳಕೆ ಮೇಲೆ ಮಿತಿ ಹೇರಲಾಗಿದೆ. ಮನೆಗಳನ್ನು ಬಿಸಿಯಾಗಿಡಲು ಬಳಸುವ ಉಪಕರಣಗಳಿಗೆ ನೈಸರ್ಗಿಕ ಅನಿಲವೇ ಬೇಕು. ಆದರೆ ಅಷ್ಟರೊಳಗೆ ಗ್ಯಾಸ್ ಪೈಪ್​ಲೈನ್ ಸರಿಯಾಗುವುದು ಅಸಾಧ್ಯ ಎನಿಸಿದೆ. ಹೀಗಾಗಿ ಮುಂದಿನ ಚಳಿಗಾಲ ಕಳೆಯುವುದು ಹೇಗೆ ಎಂಬ ಚಿಂತೆ ಅಲ್ಲಿನ ಜನರನ್ನು ಕಾಡುತ್ತಿವೆ.

ವಿದ್ಯುತ್​ ಉತ್ಪಾದನೆಗೂ ರಷ್ಯಾದಿಂದ ಬರುವ ಕಚ್ಚಾತೈಲ ಹಾಗೂ ನೈಸರ್ಗಿಕ ಅನಿಲವನ್ನೇ ಜರ್ಮನಿ ಸೇರಿದಂತೆ ಹಲವು ಐರೋಪ್ಯ ದೇಶಗಳು ನೆಚ್ಚಿಕೊಂಡಿದ್ದವು. ಆದರೆ ಇದೀಗ ಪೂರೈಕೆ ಅಸ್ತವ್ಯಸ್ತಗೊಂಡಿರುವುದರಿಂದ ಕೈಗಾರಿಕೆ ಉತ್ಪಾದನೆಗೂ ಧಕ್ಕೆಯಾಗಿದ್ದು, ಜರ್ಮನಿ ಸೇರಿದಂತೆ ವಿಶ್ವದ ಹಲವು ಬಲಾಢ್ಯ ಆರ್ಥಿಕತೆಗಳಲ್ಲಿ ಹಿಂಜರಿತದ ಭೀತಿ ಆವರಿಸಿದೆ. ಜರ್ಮನಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಆರ್ಥಿಕವಾಗಿ ಕುಸಿದರೆ ಅದರ ಪರಿಣಾಮವನ್ನು ಯೂರೋಪ್ ಮಾತ್ರವಲ್ಲ; ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಎದುರಿಸಬೇಕಾಗುತ್ತದೆ.

ಉತ್ತರ ಪೊಲೆಂಡ್​ನ ಸ್ವೀಡನ್ ಮತ್ತು ಡೆನ್ಮಾರ್ಕ್​ ಆರ್ಥಿಕ ವಲಯದ ಸಾಗರದಲ್ಲಿ ದೊಡ್ಡಮಟ್ಟದ ನೀರ್ಗುಳ್ಳೆಗಳು ಸಾಗರದಲ್ಲಿ ಕಾಣಿಸಿಕೊಂಡಿವೆ. ಯೂರೋಪ್​ಗೆ ಇಂಧನ ಪೂರೈಕೆಯಾಗುವ ನಾರ್ಡ್​ ಸ್ಟ್ರೀಮ್ 1 ಮತ್ತು 2ರ ಕೊಳವೆ ಮಾರ್ಗಗಳಲ್ಲಿ ಸೋರಿಕೆಯಾಗುತ್ತಿರುವುದನ್ನು ಇದು ದೃಢಪಡಿಸಿದೆ. ಈ ಎರಡೂ ಪೈಪ್​ಲೈನ್​ಗಳನ್ನು ರಷ್ಯಾದ ‘ಗಾಜ್​ಪ್ರೊಮ್’ ಕಂಪನಿ ನಿರ್ವಹಿಸುತ್ತಿದೆ. ‘ಇದು ಆಕಸ್ಮಿಕವಾಗಿ ಆಗಿರುವುದಲ್ಲ. ನಮ್ಮ ದೇಶಗಳನ್ನು ಚಳಿಗಾಲದಲ್ಲಿ ನರಳಿಸಿ, ಮಣಿಸಬೇಕೆಂದು ಮಾಡಿರುವ ಉದ್ದೇಶಪೂರ್ವಕ ಕೃತ್ಯ’ ಎಂದು ಡೆನ್ಮಾರ್ಕ್​ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್​ಸೆನ್ ಹೇಳಿದ್ದಾರೆ.

ಯುದ್ಧದ ಯುಗವಲ್ಲ: ಸಲಹೆ ಕೊಟ್ಟ ಮೋದಿಗೆ ಮುಂದಿನ ಹೆಜ್ಜೆ ಇಡಲು ಅಮೆರಿಕ ತಾಕೀತು

ಉಜ್ಬೆಕಿಸ್ತಾನದ ಸಮರ್​ಖಂಡ್​ನಲ್ಲಿ ಇತ್ತೀಚೆಗೆ ನಡೆದಿದ್ದ ಶಾಂಘೈ ಸಹಕಾರ ಒಕ್ಕೂಟ (Shanghai Cooperation Summit) ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಅವರಿಗೆ ‘ಇದು ಯುದ್ಧದ ಯುಗವಲ್ಲ. ನೀವು ನೆರೆಯ ದೇಶವನ್ನು ಬಲಪ್ರಯೋಗದಿಂದ ಗೆಲ್ಲಲು ಆಗುವುದಿಲ್ಲ’ ಎಂದು ಸಲಹೆ ಮಾಡಿದ್ದರು. ಮೋದಿ ಅವರ ನೇರ ಮಾತು ಮತ್ತು ದಿಟ್ಟ ನುಡಿಯನ್ನು ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಸ್ವಾಗತಿಸಿದ್ದವು.

ಆದರೆ ಸಮಾವೇಶದ ನಂತರ ರಷ್ಯಾ ಯುದ್ಧ ಸಿದ್ಧತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಸುಮಾರು 3 ಲಕ್ಷದಷ್ಟು ಮೀಸಲು ಯೋಧರಿಗೆ ಮತ್ತೆ ಸೇನಾ ಸೇವೆಗೆ ಹಾಜರಾಗುವಂತೆ ಆದೇಶ ಹೊರಡಿಸಿದ್ದಲ್ಲದೇ, ಅಣ್ವಸ್ತ್ರ ಪ್ರಯೋಗದ ಬೆದರಿಕೆಯನ್ನೂ ಹಾಕಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ, ಪುಟಿನ್​ಗೆ ಸಲಹೆ ನೀಡಿದ ನರೇಂದ್ರ ಮೋದಿ ಅವರಿಗೆ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗುವಂತೆ ತಾಕೀತು ಮಾಡಿದೆ. ‘ಬಹಿರಂಗವಾಗಿಯಾದರೂ ಸರಿ, ಖಾಸಗಿಯಾಗಿಯಾದರೂ ಸರಿ. ಯುದ್ಧ ನಿಲ್ಲಬೇಕು ಎನ್ನುವ ಸಂದೇಶವನ್ನು ಎಲ್ಲರೂ ರಷ್ಯಾಗೆ ರವಾನಿಸಬೇಕಿದೆ’ ಎಂದು ಅಮೆರಿಕದ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಭಾರತಕ್ಕೆ ಸಂದೇಶ ರವಾನಿಸಿದ್ದಾರೆ.

ಉಕ್ರೇನ್​ನ ವಿವಿಧೆಡೆ ಜನಮತಗಣನೆ

ಉಕ್ರೇನ್-ರಷ್ಯಾ ಗಡಿಯಲ್ಲಿರುವ ಡೊನೆಟ್​ಸ್ಕ್, ಲುಹಾಂಕ್, ಝಪೊರಿಖ್​ಖಿಯಾ ಮತ್ತು ಖೆರೊಸನ್​ ಪ್ರಾಂತ್ಯಗಳಲ್ಲಿ ರಷ್ಯಾ ಆಡಳಿತವು ಸೇನೆಯ ಬಂದೂಕಿನ ನೆರಳಿನಲ್ಲಿ ಇತ್ತೀಚೆಗೆ ಮತದಾನದ ಮೂಲಕ ಜನಮತಗಣನೆ ನಡೆಸಿತು. ಮತದಾನದ ಫಲಿತಾಂಶ ಪ್ರಕಟಿಸಿರುವ ರಷ್ಯಾ, ಈ ಎಲ್ಲ ಪ್ರಾಂತ್ಯಗಳು ರಷ್ಯಾದೊಂದಿಗೆ ಸೇರಲು ಇಚ್ಛಿಸಿವೆ ಎಂದು ರಷ್ಯಾದ ಆಡಳಿತ ಘೋಷಿಸಿತು. ರಷ್ಯಾ ನಡೆಸಿರುವ ಜನಮತಗಣನೆಯನ್ನು ಪಕ್ಷಪಾತ ಮತ್ತು ದುರುದ್ದೇಶದ ಕ್ರಮ ಎಂದು ಉಕ್ರೇನ್ ತಳ್ಳಿಹಾಕಿದೆ. ಆದರೆ ಈ ನಾಲ್ಕೂ ಪ್ರಾಂತ್ಯಗಳನ್ನು ಶೀಘ್ರ ರಷ್ಯಾದ ಅಧಿಕೃತ ಭಾಗವಾಗಿಸಿಕೊಳ್ಳಲು ರಷ್ಯಾದಲ್ಲಿ ಪ್ರಯತ್ನಗಳು ಅಂತಿಮ ಹಂತಕ್ಕೆ ತಲುಪಿವೆ.

ಕಳೆದ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಗೆಲುವು ಹೊಯ್ದಾಡುತ್ತಿದೆ. ಆದರೆ ರಷ್ಯಾದ ನಿರೀಕ್ಷೆಗೆ ವ್ಯತಿರಿಕ್ತವಾಗಿ ಉಕ್ರೇನ್ ವೀರಾವೇಶದಿಂದ ಹೋರಾಡುತ್ತಿದ್ದು, ರಷ್ಯಾ ಸೇನೆಯನ್ನು ಸಾವಿರಾರು ಕಿಲೋಮೀಟರ್ ಪ್ರದೇಶಗಳಷ್ಟು ಹಿಮ್ಮೆಟ್ಟಿಸಿದೆ. ರಷ್ಯಾದಂಥ ಬಲಾಢ್ಯ ದೇಶದ ಎದುರು ಉಕ್ರೇನ್ ಗೆಲ್ಲಬಹುದು ಎಂಬ ನಿರೀಕ್ಷೆ ಬಲಗೊಂಡ ನಂತರ ವಿಶ್ವದ ಹಲವು ದೇಶಗಳಿಂದ ಉಕ್ರೇನ್​ಗೆ ನೆರವು ಹರಿದುಬರುತ್ತಿದೆ. ರಷ್ಯಾ ಮತ್ತು ಅಮೆರಿಕ ಎನ್ನುವ ಸ್ಥಿತಿಗೆ ಪ್ರಸ್ತುತ ಈ ಯುದ್ಧವು ತಲುಪಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಇಂಧನ ಮತ್ತು ಆಹಾರ ಬಿಕ್ಕಟ್ಟಿಗೆ ಕಾರಣವಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada