Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ಹಸ್ತಕ್ಷೇಪ: ಕೀವ್ ಮೇಲೆ ರಷ್ಯಾದಿಂದ ಆತ್ಮಾಹುತಿ ಡ್ರೋಣ್ ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 17, 2022 | 2:18 PM

‘ಯುದ್ಧಭೂಮಿಯಲ್ಲಿ ಸೋಲುತ್ತಿರುವ ರಷ್ಯಾದ ಹತಾಶ ಪ್ರಯತ್ನ ಇದು’ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯು ಈ ದಾಳಿಯನ್ನು ಖಂಡಿಸಿದೆ.

Ukraine War: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್ ಹಸ್ತಕ್ಷೇಪ: ಕೀವ್ ಮೇಲೆ ರಷ್ಯಾದಿಂದ ಆತ್ಮಾಹುತಿ ಡ್ರೋಣ್ ದಾಳಿ
ವಿಮಾನ ನಿರೋಧಕ ರಾಕೆಟ್​ ಅಪ್ಪಳಿಸಿ ಉರುಳಿದ ಡ್ರೋಣ್ ಪರಿಶೀಲಿಸುತ್ತಿರುವ ಯೋಧ
Follow us on

ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಸೇನೆಯು ಕಮಿಕಜೆ  ಡ್ರೋಣ್​ಗಳನ್ನು (Kamikaze Drones) ಬಳಸಿ ದಾಳಿ ಮಾಡಿದೆ. ರಷ್ಯಾ ಅಧೀನದಲ್ಲಿದ್ದ ಕ್ರೀಮಿಯಾಕ್ಕೆ ರಷ್ಯಾ ನಿರ್ಮಿಸಿದ್ದ ಉದ್ದನೇ ಸೇತುವೆಯನ್ನು ಉಕ್ರೇನ್ ಸ್ಫೋಟಿಸಿದ ನಂತರ ರಷ್ಯಾ ಯುದ್ಧಪ್ರಯತ್ನಗಳನ್ನು ತೀವ್ರಗೊಳಿಸಿದೆ. ಅದರ ಭಾಗವಾಗಿಯೇ ಈ ದಾಳಿಯೂ ನಡೆದಿದೆ ಎಂದು ಉಕ್ರೇನ್ ಆಡಳಿತ ಹೇಳಿದೆ. ‘ಯುದ್ಧಭೂಮಿಯಲ್ಲಿ ಸೋಲುತ್ತಿರುವ ರಷ್ಯಾದ ಹತಾಶ ಪ್ರಯತ್ನ ಇದು’ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯು ಈ ದಾಳಿಯನ್ನು ಖಂಡಿಸಿದೆ. ಕೀವ್​ ನಗರದ ಮಧ್ಯ ಭಾಗದಲ್ಲಿ ಹಲವು ಬಾರಿ ಸ್ಫೋಟದ ಸದ್ದುಗಳು ಕೇಳಿ ಬಂದಿದ್ದು, ಸಾಮಾನ್ಯ ಜನರು ವಾಸಿಸುತ್ತಿದ್ದ ಕಟ್ಟಡಗಳಿಗೆ ಧಕ್ಕೆಯಾಗಿದೆ ಎಂದು ಮೇಯರ್ ವಿಟಲಿ ಕ್ಲಿಟ್​​ಸ್​ಚ್ಕೊ ಹೇಳಿದ್ದಾರೆ. ಕಳೆದ ವಾರ ಕೀವ್ ನಗರದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 19 ಮಂದಿ ಸಾವನಪ್ಪಿದ್ದರು.

ಸೋಮವಾರ (ಅ 17) ನಸುಕಿನಲ್ಲಿ ನಡೆದಿರುವ ದಾಳಿಗೆ ಡ್ರೋಣ್​ಗಳನ್ನು ಬಳಸಲಾಗಿದೆ. ಇರಾನ್ ನಿರ್ಮಾಣದ ಕಮಿಕಜೆ ಡ್ರೋಣ್​ಗಳು ನಿಧಾನವಾಗಿ ಸಂಚರಿಸಿದರು ಅತ್ಯಂತ ಕಡಿಮೆ ಸದ್ದು ಮಾಡುತ್ತವೆ. ವಾಯುದಾಳಿ ನಿರೋಧಕ ವ್ಯವಸ್ಥೆಯನ್ನು ವಂಚಿಸಿ ನಿರ್ದಿಷ್ಟ ಗುರಿಯ ಮೇಲೆ ಎರಗುತ್ತವೆ. ಉಕ್ರೇನ್​ನ ಎಲ್ಲೆಡೆ ಇಂಥ ಡ್ರೋಣ್​ಗಳ ಸಂಚಾರ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿಕೊಂಡಿದೆ.

ಡ್ರೋಣ್​ಗಳನ್ನು ಗುರುತಿಸಿದ ನಂತರ ಕೆಲವೆಡೆ ವಿಮಾನ ನಿರೋಧಕ ಕ್ಷಿಪಣಿ ಹಾಗೂ ರಾಕೆಟ್ ಲಾಂಚರ್​ಗಳ ಮೂಲಕ ಡ್ರೋಣ್​ಗಳನ್ನು ಹೊಡೆದುರುಳಿಸಿ, ಉಕ್ರೇನ್ ಸೇನೆಯು ನಗರವನ್ನು ರಕ್ಷಿಸಲು ಯತ್ನಿಸಿತು. ಒಂದು ಡ್ರೋಣ್​ ಅನ್ನು ಮಾತ್ರ ಯಶಸ್ವಿಯಾಗಿ ಹೊಡೆದುರುಳಿಸಲು ಸಾಧ್ಯವಾಯಿತು. ಕೀವ್ ನಗರದಲ್ಲಿ ಒಟ್ಟು ಡ್ರೋಣ್​ಗಳ ಆರಂಭ ಆರಂಭವಾದ ನಂತರ ಒಟ್ಟು ಐದು ಸ್ಫೋಟಗಳು ಸಂಭವಿಸಿವೆ.

ಮೇಯರ್ ಕಚೇರಿ, ಜನವಸತಿ ಪ್ರದೇಶಗಳು, ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆದಿವೆ. ಕೀವ್​ ನಗರದ ಮುಖ್ಯ ರೈಲು ನಿಲ್ದಾಣದ ಸಮೀಪದಲ್ಲಿಯೂ ಸ್ಫೋಟಗಳು ಸಂಭವಿಸಿವೆ. ಇತ್ತೀಚೆಗೆ ನಡೆದಿದ್ದ ರಷ್ಯಾದ ದಾಳಿಯಲ್ಲಿ ಉಕ್ರೇನ್​ನ ವಿದ್ಯುತ್ ಪೂರೈಕೆ ಜಾಲವನ್ನು ಹಾಳುಗೆಡವುವ ಪ್ರಯತ್ನ ನಡೆದಿತ್ತು. ಆದರೆ ಸೋಮವಾರದ ದಾಳಿಯಲ್ಲಿ ಇಂಥ ಯಾವುದೇ ನಿರ್ದಿಷ್ಟ ಗುರಿಯನ್ನು ರಷ್ಯಾ ಇರಿಸಿಕೊಂಡಂತೆ ಇರಲಿಲ್ಲ. ಆದರೆ ತಾನು ಮನಸ್ಸು ಮಾಡಿದರೆ ಉಕ್ರೇನ್ ರಾಜಧಾನಿಯ ಮೇಲೆ ದಾಳಿ ಮಾಡಬಲ್ಲೆ ಎಂದು ತೋರಿಸಿಕೊಡುವುದು ರಷ್ಯಾದ ಉದ್ದೇಶ ಎಂಬಂತೆ ಭಾಸವಾಯಿತು.

ಕಮಿಕಜೆ ಡ್ರೋಣ್ ಎಂದರೇನು?

ಈ ಸಣ್ಣ ವೈಮಾನಿಕ ವಾಹನಗಳು ಗುರಿಯತ್ತ ಧಾವಿಸಿದ ನಂತರ ಸ್ವಯಂ ಸ್ಫೋಟಗೊಳ್ಳುತ್ತವೆ. ಇತರ ಡ್ರೋಣ್​ಗಳು ಗುರಿಯ ಮೇಲೆ ಸ್ಫೋಟಕ ಹಾಕಿದ ನಂತರ ನೆಲೆಗೆ ಹಿಂದಿರುಗುತ್ತವೆ. ಆದರೆ ಕಮಿಕಜೆ ಡ್ರೋಣ್​ಗಳು ಒಂದು ಬಾರಿ ಮಾತ್ರ ಬಳಕೆ ಮಾಡುವ ಡ್ರೋಣ್​ಗಳಾಗಿವೆ. 2ನೇ ಮಹಾಯುದ್ಧದಲ್ಲಿ ಅಮೆರಿಕದ ಯುದ್ಧನೌಕೆಗಳ ಮೇಲೆ ಜಪಾನ್​ ಯುದ್ಧ ವಿಮಾನಗಳ ಪೈಲಟ್​ಗಳು ಆತ್ಮಾಹುತಿ ದಾಳಿ ನಡೆಸುತ್ತಿದ್ದರು. ಅದೇ ಪರಿಕಲ್ಪನೆಯ ಆಧಾರದ ಮೇಲೆ ‘ಕಮಿಕಜೆ’ ಎಂಬ ಹೆಸರನ್ನು ಇರಿಸಲಾಗಿದೆ.

ದಾಳಿಯ ವಿಡಿಯೊಗಳು

ಡ್ರೋಣ್ ದಾಳಿಯ ವಿಡಿಯೊಗಳು ಟ್ವಿಟರ್​ನಲ್ಲಿ ವೈರಲ್ ಆಗಿವೆ. ಅಂಥ ಎರಡು ವಿಡಿಯೊಗಳನ್ನು ಕೆಳಗೆ ನೀಡಲಾಗಿದೆ.

 

Published On - 2:16 pm, Mon, 17 October 22