ಕೀವ್: ರಷ್ಯಾ ಗಡಿಯಲ್ಲಿ ಇರುವ ಪೂರ್ವ ಉಕ್ರೇನ್ನ (East Ukraine) ಇಜಿಯಂ ನಗರದಲ್ಲಿ (Izyum City) 440ಕ್ಕೂ ಹೆಚ್ಚು ಶವಗಳಿರುವ ಸಾಮೂಹಿಕ ಸಮಾಧಿಯೊಂದನ್ನು ಉಕ್ರೇನ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇತ್ತೀಚೆಗಷ್ಟೇ ಈ ನಗರವನ್ನು ರಷ್ಯಾದ ಪಡೆಗಳಿಂದ ಉಕ್ರೇನ್ ಮರುವಶಪಡಿಸಿಕೊಂಡಿತ್ತು (Russia Ukriane Conflict). ಸಮಾಧಿಯಲ್ಲಿ ಹೂತು ಹಾಕಿರುವ ಪ್ರತಿ ಶವದ ವಿಧಿವಿಜ್ಞಾನ ತನಿಖೆ ನಡೆಸಲಾಗುವುದು ಎಂದು ಖಾರ್ಕಿವ್ ಪ್ರದೇಶದ ಮುಖ್ಯ ಪೊಲೀಸ್ ತನಿಖಾಧಿಕಾರಿ ಸೆರ್ಹಿ ಬೋಲ್ವಿನೊವ್ ಸ್ಕೈ ನ್ಯೂಸ್ಗೆ ಸುದ್ದಿಸಂಸ್ಥೆಗೆ ತಿಳಿಸಿದರು.
‘ಇದು ವಿಮೋಚನೆಗೊಂಡ ಪ್ರದೇಶಗಳಲ್ಲಿ ಪತ್ತೆಯಾದ ಅತಿದೊಡ್ಡ ಸಮಾಧಿ ಸ್ಥಳಗಳ ಪೈಕಿ ಒಂದು. ಒಂದೇ ಸ್ಥಳದಲ್ಲಿ 440 ಶವಗಳನ್ನು ಹೂಳಲಾಗಿದೆ. ಫಿರಂಗಿದಳದ ಬೆಂಕಿಯಿಂದಾಗಿ ಕೆಲವರು ಸತ್ತಿದ್ದರೆ, ವಾಯುದಾಳಿಯಿಂದಾಗಿ ಇನ್ನಷ್ಟು ಜನರು ಸಾವನ್ನಪ್ಪಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ವಾರಾಂತ್ಯದಲ್ಲಿ ಇಜಿಯಂನಲ್ಲಿದ್ದ ಸಾವಿರಾರು ರಷ್ಯನ್ ಸೈನಿಕರು ಪಲಾಯನ ಮಾಡಿದ್ದರು.
ಇಷ್ಟೊ ದೊಡ್ಡಮಟ್ಟದ ಸಾವುನೋವಿಗೆ ರಷ್ಯಾ ನೇರ ಹೊಣೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ರಾಜಧಾನಿ ಕೀವ್ ಹೊರವಲಯದಲ್ಲಿ ಬುಚಾ ನಗರದಲ್ಲಿ ಕಳೆದ ಫೆಬ್ರುವರಿ ಅಂತ್ಯದಲ್ಲಿ ರಷ್ಯಾ ಪಡೆಗಳು ಆಕ್ರಮಣ ಮಾಡಿದ ಆರಂಭಿಕ ಹಂತಗಳಲ್ಲಿ ಆಗಿದ್ದ ನರಮೇಧಕ್ಕೆ ಇಜಿಯಂನ ಸಾಮೂಹಿಕ ಸಮಾಧಿಯನ್ನು ಅವರು ಹೋಲಿಸಿದ್ದಾರೆ.
‘ರಷ್ಯಾ ದೇಶವು ನಾಗರಿಕರನ್ನು ಗುರಿಯಾಗಿಸಿಕೊಂಡು ಯುದ್ಧಾಪರಾಧಗಳನ್ನು ಮಾಡುತ್ತಿದೆ. ಹೆಜ್ಜೆಯಿಟ್ಟ ಸ್ಥಳದಲ್ಲೆಲ್ಲಾ ಸಾವಿನ ಛಾಯೆ ಬಿಟ್ಟು ಹೋಗುತ್ತಿದೆ. ಇದಕ್ಕೆ ರಷ್ಯಾ ತಾನೇ ಸ್ವತಃ ಜವಾಬ್ದಾರಿ ಹೊರಬೇಕು’ ಎಂದು ಝೆಲೆನ್ಸ್ಕಿ ಆಗ್ರಹಿಸಿದರು. ‘ನಾಗರಿಕನ್ನು ಕೊಂದಿಲ್ಲ’ ಎಂದು ರಷ್ಯಾ ಈ ಮೊದಲು ಹಲವು ಬಾರಿ ಸ್ಪಷ್ಟನೆ ನೀಡಿತ್ತು.
ಉಕ್ರೇನ್ಗೆ 6 ಕೋಟಿ ಡಾಲರ್ ಶಸ್ತ್ರಾಸ್ತ್ರ ಪ್ಯಾಕೇಜ್ ಘೋಷಿಸಿದ ಅಮೆರಿಕ
ವಾಷಿಂಗ್ಟನ್: ರಷ್ಯಾದ ಆಕ್ರಮಣದ ವಿರುದ್ಧ ದಿಟ್ಟ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ ನೆರವಿಗೆ ಮತ್ತೆ ಅಮೆರಿಕ ಧಾವಿಸಿದೆ. ಉಕ್ರೇನ್ಗೆ ಹೆಚ್ಚುವರಿ ಮಿಲಿಟರಿ ನೆರವು ಒದಗಿಸಲು 6 ಕೋಟಿ ಡಾಲರ್ ಮೊತ್ತದ ಹೊಸ ಪ್ಯಾಕೇಜ್ ಅನ್ನು ಅಮೆರಿಕದ ಶ್ವೇತಭವನ ಗುರುವಾರ (ಸೆ 15) ಗುರುವಾರ ಅನುಮೋದಿಸಿದೆ.
ಉಕ್ರೇನ್ಗೆ ಅಗತ್ಯ ಯುದ್ಧೋಪಕರಣಗಳು, ಸೇವೆ ಮತ್ತು ಸೈನಿಕ ತರಬೇತಿಯನ್ನು ಈ ಮೊತ್ತದಲ್ಲಿ ಒದಗಿಸಲಾಗುವುದು. ಉಕ್ರೇನ್ಗೆ ಒದಗಿಸಲಿರುವ ಹೊಸ ಯುದ್ಧೋಪಕರಣಗಳ ಬಗ್ಗೆ ಅಮೆರಿಕ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಯುದ್ಧವು ಆರಂಭವಾದ ನಂತರ ಈವರೆಗೆ ಅಮೆರಿಕ 15 ಶತಕೋಟಿ ಡಾಲರ್ಗೂ ಹೆಚ್ಚಿನ ಮೊತ್ತದ ಸೇನಾ ನೆರವು ನೀಡಿದೆ.
ಉಕ್ರೇನ್ ಸೇನೆಯು ರಷ್ಯಾದ ಪಡೆಗಳ ವಿರುದ್ಧ ಚುರುಕಿನ ಪ್ರತಿದಾಳಿ ಆರಂಭಿಸಿ ಸಾವಿರಾರು ಕಿಲೋಮೀಟರ್ ಪ್ರದೇಶವನ್ನು ಮರುವಶಪಡಿಸಿಕೊಂಡಿದೆ. ಈ ಬೆಳವಣಿಗೆಯ ನಂತರ ಅಮೆರಿಕ ಮತ್ತೊಂದು ಸುತ್ತಿನ ನೆರವು ಒದಗಿಸಲು ಮುಂದಾಗಿರುವುದು ಮಹತ್ವ ಪಡೆದಿದೆ.
Published On - 8:04 am, Fri, 16 September 22